ಮಾರಿಷಿಯಸ್ ಜತೆಗೆ ಮಹತ್ವದ ಕಡಲತೀರದ ಒಪ್ಪಂದ, ಭಾರತಕ್ಕೆ ಈ ಒಪ್ಪಂದ ಮಹತ್ವವೇಕೆ?

ಡಿಜಿಟಲ್ ಕನ್ನಡ ಟೀಮ್:

ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಚೀನಾ ಪಾರುಪತ್ಯ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ, ಪ್ರಧಾನಿ ನರೇಂದ್ರ ಮೋದಿ ಮಾರಿಷಿಯಸ್ ಜತೆಗೆ ಮಹತ್ವದ ಕಡಲತೀರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಶುಕ್ರವಾರ ಮಾರಿಷಿಯಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರನ್ನು ಭೇಟಿ ಮಾಡಿದ ಮೋದಿ, ಕಡಲ ತೀರದ ರಕ್ಷಣೆ ಸೇರಿದಂತೆ ಒಟ್ಟು ಐದು ಒಪ್ಪಂದಗಳಿಗೆ ಸಹಿ ಹಾಕಿದರು. ಈ ಇಬ್ಬರು ನಾಯಕರ ಭೇಟಿಯ ನಂತರ ಮಾತನಾಡಿದ ಮೋದಿ ಹೇಳಿದಿಷ್ಟು… ‘ಪ್ರಧಾನಿ ಜುಗ್ನಾಥ್ ಹಾಗೂ ನಾನು ಉಭಯ ದೇಶಗಳ ಕಡಲ ತೀರದ ಭದ್ರತೆಯ ಕುರಿತಾದ ಒಪ್ಪಂದಗಳಿಗೆ ಸಹಿ ಹಾಕಿದ್ದು, ನಮ್ಮ ಕಡಲ ತೀರದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಈ ಒಪ್ಪಂದಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ಮೂಲಕ ಕಡಲತೀರದಲ್ಲಿ ಎದುರಾಗುವ ಸವಾಲುಗಳನ್ನು ನಾವು ಜಂಟಿಯಾಗಿ ಎದುರಿಸಲಿದ್ದೇವೆ.’

ಶ್ರೀಲಂಕಾದ ಕಡಲ ತೀರದಲ್ಲಿ ನಿಯಂತ್ರಣ ಸಾಧಿಸುವುದೂ ಸೇರಿದಂತೆ ಚೀನಾ ಹಿಂದೂ ಮಹಾಸಾಗರದ ಮೇಲೆ ತನ್ನ ಬಿಗಿ ಹಿಡಿತ ಸಾಧಿಸುವ ಪ್ರಯತ್ನವನ್ನು ತೀವ್ರಗತಿಯಲ್ಲಿ ಮಾಡುತ್ತಿದೆ. ಇದು ಸಹಜವಾಗಿಯೇ ಭಾರತ ಸೇರಿದಂತೆ ಇತರೆ ಏಷ್ಯಾ ರಷ್ಟ್ರಗಳ ಪಾಲಿಗೆ ಗಂಭೀರದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಚೀನಾದ ಪ್ರಯತ್ನಕ್ಕೆ ಪ್ರತಿಯಾಗಿ ಭಾರತ ಸಹ ದಿಟ್ಟ ಹೆಜ್ಜೆ ಇಡಲು ಈ ಒಪ್ಪಂದ ಮಹತ್ವದ್ದಾಗಲಿದೆ.

ಭವಿಷ್ಯದ ದೂರದೃಷ್ಟಿಗೆ ಹೊಸ ಸಹಭಾಗಿತ್ವ ಎಂಬ ಧ್ಯೇಯದೊಂದಿಗೆ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಆ ಒಪ್ಪಂದಗಳು ಹೀಗಿವೆ…

  • ಮಾರಿಷಿಯಸ್ ನಲ್ಲಿ ನಾಗರೀಕ ಸೇವಾ ತರಬೇತಿ ಕಾಲೇಜು ನಿರ್ಮಾಣ.
  • ಕಡಲತೀರದ ರಕ್ಷಣೆಯ ಒಪ್ಪಂದ.
  • ಕಡಲತೀರದ ವಿಜ್ಞಾನ ಮತ್ತು ತಂತ್ರಜ್ಞಾನದ ಒಪ್ಪಂದ.
  • ಉಭಯ ದೇಶಗಳ ನಡುವಣ ಸಾಲದ ಮಿತಿಯನ್ನು 500 ಮಿಲಿಯನ್ ಅಮೆರಿಕನ್ ಡಾಲರ್ ಗೆ ವಿಸ್ತರಣೆ.
  • ಮಾರಿಷಿಯಸ್ ನಿಂದ ಅಂತಾರಾಷ್ಟ್ರೀಯ ಸೋಲಾರ್ ಒಪ್ಪಂದ.

ಮಾರಿಷಿಯಸ್ ಪ್ರಧಾನಿ ಪ್ರವಿಂದ್ ಅವರು ಮೋದಿಯ ಭೇಟಿಯ ಜತೆಗೆ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್. ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್, ರೈಲ್ವೇ ಸಚಿವ ಸುರೇಶ್ ಪ್ರಭು ಹಾಗೂ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ನಿನ್ನೆ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

Leave a Reply