ಟೀಂ ಇಂಡಿಯಾ ಪಾಳೆಯದಲ್ಲಿ ಕಾಣಿಸಿಕೊಂಡ ಹೊಸ ಸದಸ್ಯ, ಈತ ಆಟಗಾರನಲ್ಲ- ಹಾಗಾದ್ರೆ ಮತ್ಯಾರು?

ಡಿಜಿಟಲ್ ಕನ್ನಡ ಟೀಮ್:

ಪ್ರಸ್ತುತ ಪ್ರತಿಷ್ಠಿತ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಇಂಗ್ಲೆಂಡ್ ತಲುಪಿರುವ ಭಾರತದ ಪಾಳೆಯದಲ್ಲಿ ಹೊಸ ಸದಸ್ಯ ಕಾಣಿಸಿಕೊಂಡಿದ್ದಾರೆ. ಆತ ಆಟಗಾರನೂ ಅಲ್ಲ ಅಥವಾ ತಂಡದ ವ್ಯವಸ್ಥಾಪಕ ಸಿಬ್ಬಂದಿಯೂ ಅಲ್ಲ. ಹಾಗಾದರೆ ಆತ ಯಾರು ಅಂತಾ ಕೇಳ್ತೀರಾ, ಈತ ಟೀಂ ಇಂಡಿಯಾದ ಭದ್ರತೆಯ ಉಸ್ತುವಾರಿ ನೋಡಿಕೊಳ್ಳಲು ನೇಮಕವಾಗಿರುವ ಅಧಿಕಾರಿ ನೀರಜ್ ಕುಮಾರ್.

ಕಳೆದವಾರವಷ್ಟೇ ಮ್ಯಾಂಚೆಸ್ಟರ್ ನಲ್ಲಿ ನಡೆದ ಆತ್ಮಹುತಿ ಬಾಂಬ್ ದಾಳಿಯಲ್ಲಿ 22 ಮಂದಿ ಬಲಿಯಾಗಿದ್ದರು. ಈ ದುರ್ಘಟನೆಯ ಬೆನ್ನಲ್ಲೇ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಭದ್ರತೆ ವಿಚಾರವಾಗಿ ಹಲವು ಪ್ರಶ್ನೆಗಳು ಉದ್ಭವಿಸಿದ್ದವು. ಭದ್ರತೆಯ ವಿಷಯವಾಗಿ ಬಿಸಿಸಿಐ ಸಹ ಐಸಿಸಿಗೆ ಪತ್ರ ಬರೆದಿತ್ತು. ಇದಕ್ಕೆ ಉತ್ತರ ನೀಡಿದ್ದ ಐಸಿಸಿ, ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಲ್ಲ ತಂಡದ ಸದಸ್ಯರಿಗೂ ಅತ್ಯುತ್ತಮ ಭದ್ರತೆ ನೀಡಲಾಗುವುದು. ಈ ಬಗ್ಗೆ ಯಾವುದೇ ಆತಂಕ ಬೇಡ ಎಂಬ ಭರವಸೆ ನೀಡಿತ್ತು. ಇದರ ಜತೆಗೆ ಭಾರತ ತಂಡಕ್ಕೆ ನೀಡಲಾಗಿರುವ ಭದ್ರತೆಯ ಉಸ್ತುವಾರಿಯನ್ನು ನೋಡಿಕೊಳ್ಳುವುದಕ್ಕಾಗಿ ಬಿಸಿಸಿಐ ನೀರಜ್ ಕುಮಾರ್ ಅವರನ್ನು ನೇಮಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ, ‘ಮ್ಯಾಂಚೆಸ್ಟರ್ ನಲ್ಲಿ ನಡೆದ ದಾಳಿ ನಡೆದ ಹಿನ್ನೆಲೆಯಲ್ಲಿ ನೀರಜ್ ಕುಮಾರ್ ಅವರನ್ನು ಮುಂಚಿತವಾಗಿಯೇ ಇಂಗ್ಲೆಂಡಿಗೆ ಕಳುಹಿಸಲಾಗಿದೆ. ಇವರು ಭಾರತ ತಂಡ ಆಡಲಿರುವ ಮೈದಾನ ಹಾಗೂ ತಂಗುವ ಪ್ರದೇಶಗಳಲ್ಲಿನ ಭದ್ರತೆಯ ಪರಿಶೀಲನೆ ನಡೆಸಲಿದ್ದಾರೆ’ ಎಂದಿದೆ.

Leave a Reply