ಹಿಜ್ಬುಲ್ ಉಗ್ರನನ್ನು ಕೊಂದ ನಂತರ ಕಾಶ್ಮೀರದಲ್ಲಿನ ಪರಿಸ್ಥಿತಿ ಏನು? ನೀವು ತಿಳಿಯಬೇಕಿರುವ ಕಣಿವೆ ರಾಜ್ಯದ ಪ್ರಮುಖ ವಿದ್ಯಮಾನಗಳು

ಡಿಜಿಟಲ್ ಕನ್ನಡ ಟೀಮ್:

ನಿನ್ನೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ನೂತನ ಕಾರ್ಯಾಚರಣೆ ಮುಖ್ಯಸ್ಥ ಸಬ್ಸಾರ್ ಅಹ್ಮದ್ ಬಟ್ ನನ್ನು ಹತ್ಯೆ ಮಾಡಿ ಸೇಡು ತೀರಿಸಿಕೊಂಡಿತ್ತು. ಸೇನೆಯ ಈ ಕ್ರಮವನ್ನು ವಿರೋಧಿಸಿ ಕೆಲವೆಡೆ ಪ್ರತಿಭಟನೆಗಳು ನಡೆದರು ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ಇಂದು ಈ ಕಣಿವೆ ರಾಜ್ಯಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ವಿದ್ಯಮಾನಗಳ ನಡೆದಿದ್ದು, ಅವುಗಳು ಹೀಗಿವೆ…

  • ಜಮ್ಮು ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯಿಂದ ಕದನ ವಿರಾಮ ಉಲ್ಲಂಘನೆಯಾಗಿದ್ದು, ಇದಕ್ಕೆ ಪ್ರತಿದಾಳಿ ನಡೆಸಿರುವ ಭಾರತೀಯ ಸೇನೆ ಪಾಕ್ ಸೈನಿಕನೊಬ್ಬನ್ನು ಹೊಡೆದು ಹಾಕಿ ತಕ್ಕ ಉತ್ತರ ನೀಡಿದೆ. ಇದೇ ವೇಳೆ ಮತ್ತೊಬ್ಬ ಪಾಕ್ ಸೈನಿಕ ಗಾಯಗೊಂಡಿದ್ದಾನೆ. ಶನಿವಾರದಿಂದಲೂ ಪಾಕ್ ಸೈನಿಕರು ಅನಗತ್ಯವಾಗಿ ಗುಂಡಿನ ದಾಳಿ ನಡೆಸಿ ಭಾರತೀಯ ಸೇನೆಯನ್ನು ಕೆಣಕುತಿತ್ತು ಹೀಗಾಗಿ ನಮ್ಮ ಸೈನಿಕರು ಸಹ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.
  • ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಉಗ್ರರಿಂದ ನುಸುಳುವಿಕೆ ಪ್ರಯತ್ನ ನಡೆದಿದ್ದು, ಭಾರತೀಯ ಸೇನೆ ಈ ಪ್ರಯತ್ನವನ್ನು ಮೆಟ್ಟಿನಿಂತಿದೆ. ಪೂಂಚ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ಭಾರತೀಯ ಸೈನಿಕರು ಈ ನುಸುಳುಕೋರನನ್ನು ಹೊಡೆದು ಹಾಕಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಭಾರತೀಯ ಸೇನೆ ರಾಂಪುರ ಹಾಗೂ ಉರಿ ಪ್ರದೇಶಗಳಲ್ಲಿ ಗಡಿ ನುಸುಳುತ್ತಿದ್ದ 6 ಉಗ್ರರನ್ನು ಹೊಡೆದು ಹಾಕಿತ್ತು. ಗುಪ್ತಚರ ಇಲಾಖೆಯ ಮಾಹಿತಿ ಆಧಾರದ ಮೇಲೆ ಸಿಖ್ ಬೆಟಾಲಿಯನ್ ಪಡೆ ಕಾರ್ಯಾಚರಣೆ ನಡೆಸಿದ್ದು, ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ.
  • ಜಮ್ಮು ಕಾಶ್ಮೀರದಲ್ಲಿ ಇಂದು ನಿಗದಿಯಾಗಿದ್ದ ನಾಗರೀಕ ಸೇವಾ (ನ್ಯಾಯಾಂಗ) ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದೂಡಲಾಗಿದೆ. ಪುಲ್ವಾಮಾ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನನ್ನು ಹತ್ಯೆ ಮಾಡಿದ ನಂತರ ಅಹಿತ ಘಟನೆಗಳು ನಡೆಯಬಹುದು ಎಂದು ನಿರ್ಧರಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಸದ್ಯದಲ್ಲೇ ಈ ಪರೀಕ್ಷೆಯ ಮರು ದಿನಾಂಕವನ್ನು ಪ್ರಕಟಿಸುವುದಾಗಿ ಸಂಬಂಧ ಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
  • ಇತ್ತೀಚೆಗೆ ಕಣಿವೆ ರಾಜ್ಯದಲ್ಲಿ ಪದೇ ಪದೆ ಕಲ್ಲುತೂರಾಟ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಯುವಕರು ಉಗ್ರರನ್ನು ಹಿರೋಗಳಂತೆ ಭಾವಿಸಿ ಭಾರತೀಯ ಸೈನಿಕರ ಮೇಲೆ ಕತ್ತಿ ಮಸೆಯುತ್ತಿದ್ದಾರೆ ಎಂಬ ಚಿತ್ರಣ ರೂಪುಗೊಂಡಿತ್ತು. ಆದರೆ ನಿನ್ನೆ ಸಬ್ಸಾರ್ ನನ್ನು ಭಾರತೀಯ ಸೇನೆ ಹತ್ಯೆ ಮಾಡಿದ ನಂತರ ಉದ್ವಿಗ್ನ ವಾತಾವರಣವಿದ್ದರೂ ಇಂದು ನಡೆದ ಭಾರತೀಯ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ 800 ಜಮ್ಮು ಕಾಶ್ಮೀರ ಯುವಕರು ಭಾಗವಹಿಸಿದ್ದಾರೆ. ಭಾರತೀಯ ಸೇನೆಗೆ ಸೇರಲು ನಡೆಲು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ 800 ಯುವಕರು ಆಗಮಿಸಿರುವುದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆಯಾಗಿದೆ. ಈ ಮುನ್ನ ನಡೆದಿದ್ದ ದೈಹಿಕ ಪರೀಕ್ಷೆಯಲ್ಲಿ ಒಟ್ಟು 815 ಮಂದಿ ಪಾಸಾಗಿ ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದರು. ಆ ಪೈಕಿ 15 ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರು ಪರೀಕ್ಷೆಗೆ ಹಾಜರಾಗಿದ್ದರು ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply