ಬಂಧಿತ ಪಾಕ್ ಪ್ರಜೆಗಳು ಆಧಾರ್ ಕಾರ್ಡ್ ಪಡೆಯಲು ಕೊಟ್ಟ ಹಣವೆಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಮೂವರು ಪಾಕಿಸ್ತಾನ ಮೂಲದ ಪ್ರಜೆಗಳು ಬಂಧಿತರಾದ ಸುದ್ದಿ ನಿಮಗೆ ಗೊತ್ತೇ ಇದೆ. ಅವರ ಬಳಿ ಆಧಾರ್ ಕಾರ್ಡ್ ದಾಖಲೆಗಳು ಲಭ್ಯವಾಗಿರುವುದು ಆಶ್ಚರಿಯ ಸಂಗತಿ. ಪಾಕಿಸ್ತಾನದ ಪ್ರಜೆಗಳಿಗೆ ಹೇಗೆ ಆಧಾರ್ ಕಾರ್ಡ್ ಲಭ್ಯವಾಯ್ತು ಎಂಬ ಪ್ರಶ್ನೆ ಸಹಜವಾಗಿಯೇ ಬಹುತೇಕರಲ್ಲಿ ಮೂಡಿತ್ತು. ಪೊಲೀಸರ ತನಿಖೆಗೆ ಒಳಪಟ್ಟಿರುವ ಇವರು ಈ ಬಗ್ಗೆ ಬಾಯ್ಬಿಟ್ಟಿದ್ದು, ಈ ಮೂವರು ಆಧಾರ್ ಕಾರ್ಡ್ ಅನ್ನು ಪಡೆಯಲು ವೆಚ್ಚ ಮಾಡಿದ್ದು ಕೇವಲ ₹ 300 ಎಂಬ ಅಂಶ ಬೆಳಕಿಗೆ ಬಂದಿದೆ.

ಕಿರೊನ್ ಗುಲಾಬ್ ಅಲಿ (26), ಖಾಸಿಫ್ ಶಂಶುದ್ದೀನ್ (30) ಸಮೀರ್ ಅಬ್ದುಲ್ ರೆಹಮಾನ್ (25) ಎಂಬುವವರು ಪಾಕ್ ಮೂಲದ ಪ್ರಜೆಯಾಗಿದ್ದು, ಮುಹಮದ್ ಶಿಹಾಬ್ ಎಂಬಾದ ಕೇರಳ ಮೂಲದವನಾಗಿದ್ದ. ಈ ನಾಲ್ವರು ಸದ್ಯಕ್ಕೆ ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ. ಮಧ್ಯವರ್ತಿಯ ಮೂಲಕ ತಲಾ ₹ 100 ಎಂಬಂತೆ ಹಣ ನೀಡಿ ಈ ಮೂವರು ಪಾಕ್ ಪ್ರಜೆಗಳು ಆಧಾರ್ ಕಾರ್ಡ್ ಪಡೆದಿದ್ದಾರೆ.

ಪೊಲೀಸ್ ಇಲಾಖೆಯ ಮೂಲಗಳ ಪ್ರಕಾರ, ‘ಈ ಮೂವರು ಕುಮಾರಸ್ವಾಮಿ ಲೇಜೌಟ್ ನಲ್ಲಿ ವಾಸ ಮಾಡಲು ಆರಂಭಿಸಿದ ನಂತರ ಸ್ಥಳೀಯ ಗುರುತಿನ ಚೀಟಿಗಳಾದ ಪಡಿತರ ಚೀಟಿ, ಮತದಾನ ಗುರುತಿನ ಚೀಟಿಯನ್ನ ಪಡೆಯುವ ಪ್ರಯತ್ನ ನಡೆಸುತ್ತಿದ್ದರು. ಇವುಗಳನ್ನು ಪಡೆಯಲು ಆಧಾರ್ ಕಾರ್ಡ್ ಇದ್ದರೆ ಉತ್ತಮ ಎಂದು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಮಧ್ಯವರ್ತಿಯನ್ನು ಸಂಪರ್ಕಿಸಿದ್ದಾರೆ. ಆತನ ಮೂಲಕ ಈ ಮೂವರು ಜನವರಿ ತಿಂಗಳಲ್ಲಿ ಆಧಾರ್ ಕಾರ್ಡ್ ಪಡೆದಿದ್ದಾರೆ’ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಆಧಾರ್ ಕಾರ್ಡ್ ಪಡೆದ ಬಗ್ಗೆ ಮಾಹಿತಿ ನೀಡಿರುವ ಬಂಧಿತರು, ‘ಆ ಮಧ್ಯವರ್ತಿ ಯಾವುದೇ ದಾಖಲೆಗಳಿಲ್ಲದೇ ಆಧಾರ್ ಕಾರ್ಡ್ ದೊರಕಿಸಿಕೊಡುವ ಬಗ್ಗೆ ಭರವಸೆ ಕೊಟ್ಟ. ಆರಂಭದಲ್ಲಿ ಪ್ರತಿ ಕಾರ್ಡಿಗೆ ₹ 500 ನೀಡುವಂತೆ ಬೇಡಿಕೆ ಇಟ್ಟ. ನಮ್ಮಿಂದ ಅಷ್ಟು ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಚೌಕಾಸಿ ನಡೆಸಿ ಕೊನೆಗೆ ₹ 100 ನೀಡಲು ಒಪ್ಪಿದೆವು. ನಮಗೆ ಆಧಾರ್ ಕಾರ್ಡ್ ದೊರೆಯುವಂತೆ ಮಾಡಲು ಕೆಲವು ಸ್ಥಳೀಯರು ಸಹಾಯ ಮಾಡಿದ್ದರು’ ಎಂದು ಬಾಯ್ಬಿಟ್ಟಿದ್ದಾರೆ.

Leave a Reply