ಇನ್ನಾದ್ರೂ ಯಡಿಯೂರಪ್ಪ ಎಲ್ರನ್ನೂ ಜತೇಲಿಟ್ಕೋತ್ತಾರಾ?!

ರಾಜಕೀಯದಲ್ಲಿ ಎಲ್ಲರೂ ಅಧಿಕಾರಕ್ಕಾಗಿ ಕಿತ್ತಾಡುತ್ತಾರೆ. ಅಧಿಕಾರದ ಹಾದಿಯಲ್ಲಿ ಅಡ್ಡಲಾಗಿರುವವರನ್ನು ನಿವಾರಿಸಿಕೊಳ್ಳಲು ಬಡಿದಾಡುತ್ತಾರೆ. ಅದಕ್ಕಾಗಿ ತಂತ್ರ ರೂಪಿಸುತ್ತಾರೆ. ಪ್ರತಿತಂತ್ರ ಹೆಣೆಯುತ್ತಾರೆ. ಇವ್ಯಾವವೂ ಕೆಲಸ ಮಾಡಲಿಲ್ಲ ಅಂದ್ರೆ ಕುತಂತ್ರ ಮಾಡಿಯಾದರೂ ತಮ್ಮ ಗುರಿ ಸಾಧಿಸಿಕೊಳ್ಳಲು ಹವಣಿಸುತ್ತಾರೆ. ಅಂತಿಮ ಫಲಿತಾಂಶ ಏನಾಗುತ್ತದೋ, ಬಿಡುತ್ತದೋ ಅದು ಬೇರೆ ಪ್ರಶ್ನೆ. ಆದರೆ ಅಧಿಕಾರಕ್ಕಾಗಿ ಇಷ್ಟೆಲ್ಲ ಕಸರತ್ತು ಮಾಡಬೇಕಿರುವುದು ರಾಜಕೀಯದ ರಕ್ತಗುಣ. ಇದಕ್ಕೆ ಯಾವ ಪಕ್ಷವೂ ಹೊರತಲ್ಲ, ನಾಯಕರೂ ಹೊರತಲ್ಲ.

ಆದರೆ ನಾಯಕರೆಲ್ಲ ಸೇರಿ ಅಧಿಕಾರದ ಟವೆಲ್ಲನ್ನೂ ಒಬ್ಬ ಮುಖಂಡನ ಹೆಗಲ ಮೇಲೆ ಹಾಸಿಟ್ಟರೂ, ಅಧಿಕಾರ ನಿಮ್ಮದೇ ಎಂದು ಪದೇ ಪದೆ ಸಾರಿ ಹೇಳಿದರೂ ಕೂಡ ನಂಬದೇ ಅನುಮಾನದ ಹುಳು ಬಿಟ್ಟುಕೊಂಡು ಸುಖಾಸುಮ್ಮನೆ ನೆಮ್ಮದಿ ಕೆಡಿಸಿಕೊಂಡರೆ, ಇದಕ್ಕೇನೂ ಮಾಡಲಾಗುವುದಿಲ್ಲ. ಈ ಕಾಯಿಲೆಗೆ ಮದ್ದು ಸಿಗುವುದಿಲ್ಲ. ಯಾಕೆಂದರೆ ಕಾಯಿಲೆ ಇದ್ದರೆ ಮದ್ದು ಕೊಡಬಹುದು. ಆದರೆ ಇಲ್ಲದ ಕಾಯಿಲೆ ಇದೆ ಎಂದು ನಂಬಿಕೊಂಡರೆ ಅದಕ್ಕೆಲ್ಲಿಂದ ಮದ್ದು ತರುವುದು?

ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ಪರಿಸ್ಥಿತಿ ಕೂಡ ಇದೇ ಆಗಿದೆ. ಅವರಿಗೆ ಯಾವ ಕಾಯಿಲೆಯೂ ಇಲ್ಲ. ಆದರೂ ಸಿರೆಂಜ್ ಇಟ್ಟುಕೊಂಡು ಓಡಾಡುತ್ತಾರೆ. ಅವರು ಬಿಜೆಪಿ ಬಿಟ್ಟು ಹೋಗಿ ಕೆಜೆಪಿ ಕಟ್ಟಿ, ಊರ್ಜಿತ ಆಗದ ಕೆಜೆಪಿಯನ್ನು ಮತ್ತೆ ಬಿಜೆಪಿ ಜತೆ ವಿಲೀನ ಮಾಡಿದ್ದಾರೆ. ಆದರೆ ಅವರ ಮನಸ್ಥಿತಿ ಮಾತ್ರ ರಾಜ್ಯ ಬಿಜೆಪಿ ನಾಯಕರ ಜತೆ ಇನ್ನೂ ವಿಲೀನ ಆಗಿಲ್ಲ. ವರ್ಷದ ಹಿಂದೆಯೇ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ ಸಂದರ್ಭದಲ್ಲೇ ಅವರನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ವರಿಷ್ಠರು ಘೋಷಿಸಿದ್ದರು. ಆದರೂ ಯಾಕೋ, ಏನೋ ಅವರು ಮಾತ್ರ ನೆಮ್ಮದಿ ಆಗಿ ಇರಲೇ ಇಲ್ಲ. ನೆಮ್ಮದಿಯನ್ನು ತಮ್ಮೊಳಗೇ ಬಿಟ್ಟುಕೊಳ್ಳಲೇ ಇಲ್ಲ. ಏನೋ ತವಕ, ಗೊತ್ತು ಗುರಿ ಇಲ್ಲದ ಹಪಾಹಪಿ ಅವರನ್ನು ಕಾಡುತ್ತಲೇ ಇತ್ತು. ಹೀಗಾಗಿ ಅವರು ಮತ್ತೆ ಹಳೇ ಯಡಿಯೂರಪ್ಪ ಆಗಲೂ ಸಾಧ್ಯವಾಗಲೇ ಇಲ್ಲ. ಎಲ್ಲ ನಾಯಕರನ್ನು ಒಟ್ಟಿಗೆ ಕರೆದುಕೊಂಡು ಹೋಗಲೂ ಆಗಲಿಲ್ಲ. ಏಕೆಂದರೆ ಅವರಿಗೆ ಅವರ ಮೇಲೆ ನಂಬಿಕೆ ಬರಲೇ ಇಲ್ಲ. ತಮ್ಮೊಂದಿಗೆ ಬಿಜೆಪಿ ತೊರೆದು ಕೆಜೆಪಿಗೆ ಬಂದು, ಮತ್ತೆ ವಾಪಾಸಾದವರ ಮೇಲೆ ಅವರಿಗೆ ಮೂಡಿದಷ್ಟು ನಂಬುಗೆ ಅನ್ಯರ ಮೇಲೆ ಬರಲೇ ಇಲ್ಲ. ಸಿಎಂ ಪಟ್ಟಕ್ಕೆ ಯಾರಾದರೂ ಪ್ರತಿಸ್ಪರ್ಧಿಗಳು ಸೃಷ್ಟಿಯಾಗಿ ಬಿಡಬಹುದು, ತಮ್ಮೊಂದಿಗೆ ಕೆಜೆಪಿ ಮತ್ತು ಬಿಜೆಪಿ ಟೂರ್ ಮಾಡಿದವರ ಸಂಖ್ಯೆ ಕಡಿಮೆ ಇರುವುದರಿಂದ ಅನ್ಯ ನಾಯಕರೆಲ್ಲ ಒಟ್ಟಾಗಿ ಪಿತೂರಿ ಮಾಡಿಬಿಡಬಹುದು ಎಂಬೆಲ್ಲ ಅನುಮಾನಗಳು ಅವರನ್ನು ಸಂಬಂಧಪಟ್ಟ ನಾಯಕರಿಂದ ಅನತಿ ದೂರದಲ್ಲಿ ಇಡುತ್ತಲೇ ಬಂದವು. ಆದರೆ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತೆ, ಮತ್ತೆ ಘೋಷಿಸಿದ್ದಾರೆ. ಯಡಿಯೂರಪ್ಪನವರೇ ಮುಂದಿನ ಸಿಎಂ ಅಭ್ಯರ್ಥಿ ಎಂದು. ಇಷ್ಟಾದ ಮೇಲೂ ಯಡಿಯೂರಪ್ಪನವರು ಮತ್ತೆ ಅಪನಂಬಿಕೆಯ ತಮ್ಮ ಹಳೇ ಚಾಳಿ ಬಿಡದೇ ಹೋದರೆ ಅದು ಅವರ ಮಾನಸಿಕ ದುರಂತವಷ್ಟೇ.

ನಿಜ, ಮೇಲೆ ಪ್ರಶಾಂತ ಸಾಗರದಂತೆ ಕಂಡರೂ ಒಳಗೆ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ರಾಗದ್ವೇಷಗಳು ರಾಜ್ಯ ಬಿಜೆಪಿಯನ್ನು ಬಗ್ಗಡ ಮಾಡಿಟ್ಟಿವೆ. ಒಗ್ಗಟ್ಟು ದುಬಾರಿ ವಸ್ತುವಾಗಿದೆ. ಅದಕ್ಕೆ ಮೂಲಕಾರಣ ಯಡಿಯೂರಪ್ಪ ಅನ್ನುವುದಕ್ಕಿಂತ ಅವರನ್ನು ಸುತ್ತುವರಿದಿರುವ ಕೆಲ ಸ್ವಹಿತಾಸಕ್ತ ನಾಯಕರು. ಅದರಲ್ಲೂ ವಿಶೇಷವಾಗಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು. ಅವರು ನಿತ್ಯ ಯಡಿಯೂರಪ್ಪನವರಲ್ಲಿ ಅನುಮಾನದ ಬೀಜ ಬಿತ್ತುತ್ತಿದ್ದಾರೆ, ಅನುಮಾನದ ಅಭಿಷೇಕ ಮಾಡುತ್ತಿದ್ದಾರೆ, ಅವರಿಂದಾಗಿಯೇ ಇತರ ನಾಯಕರು ಯಡಿಯೂರಪ್ಪ ಅವರಿಂದ ದೂರಾಗಿದ್ದಾರೆ ಎಂಬುದು ಪಕ್ಷದ ಅನ್ಯ ನಾಯಕರ ಆರೋಪ. ಆದರೆ ಯಡಿಯೂರಪ್ಪನವರು ಮಾತ್ರ ಇದನ್ನು ವ್ಯತಿರಿಕ್ತವಾಗಿ ನಂಬಿಕೊಂಡಿದ್ದಾರೆ, ತೆಗೆದುಕೊಂಡಿದ್ದಾರೆ. ತಮ್ಮ ಕಿವಿಯೂದುವವರನ್ನೇ, ತಲೆ ಕೆಡಿಸುವವರನ್ನೇ ಹಿತೈಷಿಗಳು ಎಂದು ಭಾವಿಸಿದ್ದಾರೆ. ಹಿಂದೆ ಬಿಜೆಪಿ ಇಬ್ಭಾಗ ಆಗಲು ಇವರೇ ಕಾರಣ. ಯಡಿಯೂರಪ್ಪನವರು ಕೆಜೆಪಿ ಕಟ್ಟಲು ಇವರೇ ರೂವಾರಿ. ಯಾರಿಂದಾಗಿ ತಮ್ಮಿಂದ ಇತರರು ದೂರಾಗಿದ್ದಾರೆ ಎಂದು ಗೊತ್ತಿದ್ದರೂ ಸರಿಪಡಿಸಿಕೊಳ್ಳುವ ಗೋಜಿಗೆ ಅವರು ಹೋಗಿಲ್ಲ. ಇದು ಪಕ್ಷಕ್ಕೆ ಗಂಡಾಂತರವಾಗಿ ಪರಿಣಮಿಸಿದೆ.

ದಲಿತರ ಮನೆಯಲ್ಲಿ ಊಟೋಪಚಾರದ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯಡಿಯೂರಪ್ಪವರ ಪ್ರಯತ್ನ ಸರಿಯೇ ಆದರೂ ಚಿತ್ರದುರ್ಗದಲ್ಲಿ ಅಕ್ಕಪಕ್ಕದವರ ಮಾತು ಕೇಳಿಕೊಂಡು ಹೋಟೆಲ್ ಉಪಾಹಾರ ತರಿಸಿಕೊಂಡು ತಿಂದದ್ದು ವಿವಾದಕ್ಕೆ ಕಾರಣವಾಯಿತು. ಹೋಟೆಲ್ ತಿಂಡಿ ತಿನ್ನಲು ಅವರು ದಲಿತರ ಮನೆಗೆ ಯಾಕೆ ಬರಬೇಕಿತ್ತು, ಅವರನ್ನು ಕರೆದಿದ್ದವರು ಯಾರು ಎಂಬಷ್ಟರ ಮಟ್ಟಿಗೆ ಟೀಕೆಗಳು ಯಡಿಯೂರಪ್ಪ ಅವರನ್ನಷ್ಟೇ ಅಲ್ಲ ಬಿಜೆಪಿ ಮುಖಂಡರನ್ನು ಹೈರಾಣಾಗಿಸಿಬಿಟ್ಟವು. ಮುಂದೆ ಬಾಗಲಕೋಟದಲ್ಲಿ ದಲಿತರ ಮನೆಯ ತಿಂಡಿ ತಿಂದು ಆಗಿದ್ದ ಹಾನಿ ಸರಿಪಡಿಸಿಕೊಳ್ಳಲು ಯತ್ನಿಸಿದರು. ಆದರೆ ಅಷ್ಟೊತ್ತಿಗೆ ಎದುರಾಳಿ ರಾಜಕೀಯ ಪಕ್ಷಗಳ ಮುಖಂಡರನ್ನು ಅವರ ನಡೆಯನ್ನು ಹರಾಜಾಕಿದ್ದವು. ಇಷ್ಟಕ್ಕೆಲ್ಲ ಕಾರಣ ಮತ್ತದೇ ಹಿತ್ತಾಳೆ ಕಿವಿ. ಶೋಭಾ ಕರಂದ್ಲಾಜೆ ಕಾರಣಕ್ಕೆ ಅನ್ಯ ಮುಖಂಡರು ತಮ್ಮ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಗೊತ್ತಿದ್ದರೂ ಅವರನ್ನು ಪಕ್ಕದ ಕುರ್ಚಿಯಲ್ಲೇ ಕೂರಿಸಿಕೊಂಡು, ಹಿರಿಯ ನಾಯಕ ಗೋವಿಂದ ಕಾರಜೋಳ ಅವರಂಥವರನ್ನು ಮೂರನೇ ಕುರ್ಚಿಗೆ ತಳ್ಳಿ ತಿಂಡಿ ತಿನ್ನುವಂಥದ್ದು ಅವರಿಗೆ ಯಾಕೆ ಬೇಕಿದೆಯೋ ಗೊತ್ತಿಲ್ಲ. ಇಲ್ಲಿ ಅಕ್ಕಪಕ್ಕದ ಕುರ್ಚಿ ಎಂಬುದಕ್ಕಿಂತ ರವಾನೆ ಆಗುತ್ತಿರುವ ಸಂದೇಶ ಮುಖ್ಯವಾಗುತ್ತಿದೆ. ಆ ಸಂದೇಶ ವ್ಯತ್ಯಾಸ ಮಾಡುವ ಅವಕಾಶವನ್ನು ಅವರು ಯಾಕೆ ಕಳೆದುಕೊಳ್ಳುತ್ತಿದ್ದಾರೆಂಬುದು ಅರ್ಥವಾಗದೆ ಪಕ್ಷದ ಇತರೆ ಮುಖಂಡರು ಹಾಗೂ ಕಾಯಕರ್ತರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ಹಿಂದೆ ಗುಂಡ್ಲುಪೇಟೆ, ನಂಜನಗೂಡು ಮರುಚುನಾವಣೆ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಕೊಟ್ಟಷ್ಟು ಒತ್ತನ್ನು ಯಡಿಯೂರಪ್ಪವರು ಇತರ ನಾಯಕರಿಗೆ ಕೊಡಲಿಲ್ಲ. ಬೇರೆ ನಾಯಕರನ್ನು ನಾಮ್-ಕೆ-ವಾಸ್ತೆಗೆ ಎಂಬಂತೆ ಬಳಸಿಕೊಂಡರು. ಅವರೂ ಕರ್ತವ್ಯಕ್ಕೆಂಬಂತೇ ಪ್ರಚಾರಕ್ಕೆ ಬಂದು ಹೋದರು. ಈ ಚುನಾವಣೆ ಪ್ರಚಾರದಲ್ಲಿ ತಮ್ಮ ಪಕ್ಷದವರನ್ನೂ ಸೇರಿಸಿ ಎಲ್ಲರನ್ನೂ ಹಿಂದಿಕ್ಕಿ ತಿರುಗಿದರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಡವಟ್ಟಾಗಿದ್ದು ಇಲ್ಲೇ. ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಿಂದ ಇದನ್ನು ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಕರೆದರು. ಆಡಳಿತ ಪಕ್ಷದವರು ಜನಮತಗಣನೆ ಅಲ್ಲ ಎಂದರೂ ಇವರು ಮಾತ್ರ ಅದನ್ನು ಒಪ್ಪಲಿಲ್ಲ. ಇದು ನನ್ನ ಮತ್ತು ಸಿದ್ದರಾಮಯ್ಯ ನಡುವಣ ಚುನಾವಣೆ ಎಂದರು. ಜನಮತಗಣನೆ ಎಂದರು. ಗೆಲ್ಲುವುದು ಬಿಜೆಪಿಯೇ, ನಾನೇ ಮುಂದಿನ ಮುಖ್ಯಮಂತ್ರಿ ಎಂದು ಬೀಗಿದರು. ಯಡಿಯೂರಪ್ಪನವರು ಹಿಂದೆ ಅಧಿಕಾರದಲ್ಲಿದ್ದಾಗ ಅನೇಕ ಮರುಚುನಾವಣೆಗಳನ್ನು ಮಾಡಿದ್ದಾರೆ. ಅಧಿಕಾರದಲ್ಲಿರುವ ಪಕ್ಷ ಚುನಾವಣೆ ಹೇಗೆ ನಡೆಸುತ್ತದೆ ಎಂಬುದರ ಸ್ಪಷ್ಟ ಕಲ್ಪನೆ ಅವರಿಗಿತ್ತು. ಇದು ಗೊತ್ತಿದ್ದರೂ ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆಯನ್ನು ಆಡಳಿತಪಕ್ಷದವರಿಗಿಂತಲೂ ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದು, ಚುನಾವಣೆ ಅತಿರೇಕಕ್ಕೆ ಹೋಗುವಂತೆ ಮಾಡಿದ್ದು ಅವರೇ. ಅವರು ಒಳಮಟ್ಟದಲ್ಲಿ, ಗುಪ್ತಗಾಮಿನಿಯಾಗಿ ಕೆಲಸ ಮಾಡಿದ್ದರೆ ಆಡಳಿತ ಪಕ್ಷದವರು ಈ ಚುನಾವಣೆಯನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಅವರು ಗಂಭೀರವಾಗಿ ತೆಗೆದುಕೊಳ್ಳುವಂತೆ ಪ್ರಚೋದನೆ ನೀಡಿದ್ದೇ ಯಡಿಯೂರಪ್ಪನವರು. ಎದುರಾಳಿಗೆ ಗೊತ್ತಾಗದಂತೆ ಚಿತ್ ಮಾಡುವುದು ಬೇರೆ. ಎದುರಾಳಿಯನ್ನು ಕೆರಳಿಸಿ ಚಿತ್ ಮಾಡುವುದು ಬೇರೆ. ಕೆರಳಿಸಿ ಚಿತ್ ಮಾಡಲು ತಾಕತ್ತು ಎದುರಾಳಿಗಿಂತಲೂ ಜೋರಾಗಿರಬೇಕು. ಹಿಂದೆ ಹೆಬ್ಬಾಳ ಮತ್ತು ದೇವದುರ್ಗ ಮರುಚುನಾವಣೆಗಳಲ್ಲಿ ಬಿಜೆಪಿ ಸೈಲೆಂಟಾಗಿ ಗೆದ್ದದ್ದನ್ನು ಯಡಿಯೂರಪ್ಪನವರು ಮರೆತು ಹೋದರೋ ಎಂಬುದಕ್ಕಿಂಥ ಅವರ ಅಕ್ಕಪಕ್ಕದಲ್ಲಿದ್ದವರು ಮರೆಸಿಬಿಟ್ಟರು!

ನಿಜ, ಯಡಿಯೂರಪ್ಪನವರಿಗೆ ಗೆಲುವಿನ ಬಗ್ಗೆ ಅದೆಂಥ ಭ್ರಮೆ ಇತ್ತೆಂದರೆ ಪಕ್ಷದ ಇತರ ನಾಯಕರು ಅದರ ಲಾಭ ಪಡೆಯುವುದು ಅವರಿಗೆ ಬೇಕಿರಲಿಲ್ಲ. ಹೀಗಾಗಿ ಪಕ್ಷದ ಇತರ ನಾಯಕರಿಗೆ ಇಂತಿಷ್ಟೇ ಎಂದು ಪ್ರಚಾರ ಸಭೆಗಳನ್ನು ನಿಗದಿ ಮಾಡಿಟ್ಟಿದ್ದರು. ಇತರ ನಾಯಕರು ಹೆಚ್ಚು ಪಾಲ್ಗೊಂಡರೆ ಗೆಲುವಿನ ಕೀರ್ತಿಯನ್ನು ಅವರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ ಎಂಬ ಮುನ್ನೆಚ್ಚರಿಕೆ ಅಲ್ಲಿತ್ತು. ಅನಂತಕುಮಾರ್, ಸದಾನಂದಗೌಡ, ಜಗದೀಶ ಶೆಟ್ಟರ್, ಈಶ್ವರಪ್ಪನವರ ಪ್ರಚಾರ ಕಾರ್ಯವನ್ನು ಒಂದು ಸಲಕ್ಕೆ ಸೀಮಿತವಾದದ್ದು ಇದೇ ಕಾರಣಕ್ಕೆ. ಇತರ ನಾಯಕರಿಗೂ ಅಷ್ಟೇ. ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಅವರಿಗೂ ಬೇಕಿರಲಿಲ್ಲ. ಗೆದ್ದರೆ ಯಡಿಯೂರಪ್ಪನವರನ್ನು ಹಿಡಿಯಲು ಆಗುವುದಿಲ್ಲ, ಅವರಿಗೆ ಮೂಗುದಾರ ಹಾಕಬೇಕಾದರೆ ಪಕ್ಷ ಇಲ್ಲಿ ಸೋಲಬೇಕು ಎಂಬ ಒಳಾಸೆಯಿತ್ತು. ಅದು ನೆರವೇರಿದ್ದಕ್ಕೆ ಅವರಿಗೆ ಬಹಳ ಖುಷಿ ಇದೆಯೇ ಹೊರತು ಪಕ್ಷ ಸೋತಿದ್ದರ ಬಗ್ಗೆ ಯಾವುದೇ ದುಃಖವಿಲ್ಲ. ದುಃಖವಾಗಿದ್ದರೆ ಅದು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಮಾತ್ರ.

ನಿಜ, ಯಡಿಯೂರಪ್ಪ ಮತ್ತು ಈಶ್ವರಪ್ಪ ಕೃಪಾಪೋಷಿತ ಬಿಜೆಪಿ ಕದನ ಮಂಡಳಿ ಪ್ರತಿನಿತ್ಯ ಪ್ರಸ್ತುತ ಪಡಿಸುತ್ತಿರುವ ಆರೋಪ-ಪ್ರತ್ಯಾರೋಪ ಪ್ರಹಸನ ನೋಡುಗರಿಗೆ ಪುಗಸಟ್ಟೆ ಮನರಂಜನೆ ಒದಗಿಸುತ್ತಿದೆ. ಬ್ಲಾಕ್‌ಮಟ್ಟದ ಸಭೆಯಿಂದ ಹಿಡಿದು ಕೋರ್ ಕಮಿಟಿ ಸಭೆವರೆಗೂ, ಚುನಾವಣೆ ಪ್ರಚಾರದಿಂದ ಹಿಡಿದು ವೈಯಕ್ತಿಕ ನಿಂದನೆವರೆಗೂ ಎಗ್ಗುಸಿಗ್ಗಿಲ್ಲದೆ ಈ ಈರ್ವರು ನಾಯಕರು ನಡೆದುಕೊಳ್ಳುತ್ತಿರುವ ರೀತಿ ಪಕ್ಷದ ಒಗ್ಗಟ್ಟಿಗೆ ಸವಾಲಾಗಿದ್ದು, ಇತರ ಮುಖಂಡರು ಹಾಗೂ ಕಾರ್ಯಕರ್ತರನ್ನು ಚಿಂತೆಯ ಕೂಪದಲ್ಲಿ ಮುಳುಗಿಸಿದೆ. ಕುತ್ತಿಗೆ ಪಟ್ಟಿ ಹಿಡಿದುಕೊಂಡಿಲ್ಲ ಎನ್ನುವುದನ್ನು ಬಿಟ್ಟರೆ ಬೀದಿ ಕೊಳಾಯಿ ಜಗಳಕ್ಕೆ ಯಾವುದರಲ್ಲೂ ಕಡಿಮೆ ಇರದ ಈ ನಾಯಕರ ಕಚ್ಚಾಟ ಅವರನ್ನು ಭ್ರಮನಿರಶನರನ್ನಾಗಿಸಿದೆ.

ಗುಂಡ್ಲುಪೇಟೆ ಹಾಗೂ ನಂಜನಗೂಡು ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಆತ್ಮಾವಲೋಕನ ಸಭೆಗೆ ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ಮುಖಂಡರಾದ ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಹಾಜರಾಗಿಲ್ಲ. ಪೂರ್ವ ನಿಗದಿತ ಕಾರ್ಯಕ್ರಮದ ನೆಪ ಹೇಳಿ ಗೈರಾಗಿದ್ದಾರೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲ ನಡೆಯುತ್ತಿರುವ ಮರುಚುನಾವಣೆ ಸೋಲಿನ ಆತ್ಮಾವಲೋಕನ ಸಭೆ ಸಹಜವಾಗಿಯೇ ಪ್ರಮುಖವಾದದ್ದು. ಆದ್ಯತೆ ವಿಚಾರ ಬಂದಾಗ ಈ ಸಭೆಯೇ ಮುಖ್ಯ. ಆದರೂ ಈ ಇಬ್ಬರು ಪ್ರಮುಖ ನಾಯಕರು ತಪ್ಪಿಸಿಕೊಂಡಿದ್ದಾರೆ. ಈಶ್ವರಪ್ಪ ಅವರಂತೂ ಈ ಸಭೆ ಬಗ್ಗೆ ಬಹಿರಂಗವಾಗಿಯೇ ಕಿಡಿ ಕಾರಿದ್ದರು. ಯಾವುದೇ ಕಾರಣಕ್ಕೂ ತಾವು ಹೋಗುವುದಿಲ್ಲ ಎಂದು ಹೇಳಿದ್ದರ ಹಿಂದೆ ಅನ್ಯ ನೆಪಕ್ಕಿಂತ ಅಸಮಾಧಾನದ ಹೊಗೆಯೇ ಎದ್ದು ಕಾಣುತ್ತಿತ್ತು. ಶೆಟ್ಟರ್ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಗೈರು, ಇವರು ಕರೆದ ಸಭೆಗೆ ಅವರ ಗೈರು ವರ್ಷದಿಂದಲೂ ನಡೆದುಕೊಂಡೇ ಬಂದಿದೆ. ಕಳೆದ ವರ್ಷ ಸಿದ್ದರಾಮಯ್ಯ ಸರಕಾರ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸರಕಾರದ ವೈಫಲ್ಯ ಹೊತ್ತ ಕಿರುಹೊತ್ತಿಗೆ ಬಿಡುಗಡೆ ಮಾಡಲು ಕರೆದಿದ್ದ ಪತ್ರಿಕಾಗೋಷ್ಠಿಗೆ ಯಡಿಯೂರಪ್ಪ ಗೈರಾಗಿದ್ದರು. ಅಷ್ಟೊತ್ತಿಗೆ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಆದರೂ ಬರಲಿಲ್ಲ. ಶೆಟ್ಟರ್ ಅವರನ್ನು ಕೇಳಿದಾಗ ಬಹುಮುಖ್ಯ ಕೆಲಸದ ಮೇಲೆ ತೆರಳಿದ್ದಾರೆ ಎಂಬ ಸಬೂಬೂ ಬಂತು. ಅಮೇಲೆ ಗೊತ್ತಾದದ್ದು ಯಡಿಯೂರಪ್ಪನವರು ಶೋಭಾ ಕರಂದ್ಲಾಜೆ ಅವರ ಜತೆ ಬದರಿ-ಕೇದಾರನಾಥ ಪ್ರವಾಸ ಹೋಗಿದ್ದಾರೆ ಎಂದು. ಯಡಿಯೂರಪ್ಪನವರು ಬಿಜೆಪಿ ಅಧ್ಯಕ್ಷರಾಗಿ ಬಂದ ನಂತರ ಆರಂಭವಾಗಿರುವ ಸಭೆ-ಸಮಾರಂಭಗಳಿಗೆ ಭಿನ್ನ ನಾಯಕರ ಗೈರು ಚಾಳಿ ಇವತ್ತಿಗೂ ನಿಂತಿಲ್ಲ. ಅದು ಪಕ್ಷದ ಸಂಘಟನೆ ಕೆಲಸವಿರಲಿ, ಸರಕಾರದ ವಿರುದ್ಧ ಹೋರಾಟವಿರಲಿ, ‘ಎತ್ತು ಏರಿಗೆಳೆದರೆ, ಕೋಣ ನೀರಿಗಿಳಿಯತ್ತದೆ’ ಎಂಬಂಥ ಪ್ರತೀತಿ. ಸಾಮರಸ್ಯ, ಸಹಕಾರ ಎಂಬುದು ಇಲ್ಲವೇ ಇಲ್ಲ.

ಪಕ್ಷ ಇದ್ದರೆ ಎಲ್ಲರೂ ಅನ್ನುವುದು ನಾಯಕನಾದವನಿಗೆ ಮೊದಲು ಗೊತ್ತಿರಬೇಕಾದ ವಿಚಾರ. ಅದು ಯಡಿಯೂರಪ್ಪ ಇರಲಿ, ಈಶ್ವರಪ್ಪ ಇರಲಿ, ಜಗದೀಶ ಶೆಟ್ಟರ್ ಇರಲಿ. ಸಮಸ್ಯೆ ಸಾರ್ವಜನಿಕಗೊಂಡರೆ ಪಕ್ಷಕ್ಕೆ ನಷ್ಟವೇ ಹೊರತು ಅನ್ಯರಿಗೆ ಅಲ್ಲ. ಬೇರೆ ನಾಯಕರೂ ಅಷ್ಟೇ. ಶಿಕಾರಿಗೆ ಮೊದಲೇ ಪಾಲು ಕೇಳುತ್ತಿದ್ದಾರೆ. ತಾವು ಯಡಿಯೂರಪ್ಪನವರಿಗೆ ಇಟ್ಟಿರುವ ಗುರಿ ಪಕ್ಷಕ್ಕೆ ತಗುಲುತ್ತಿದೆ ಎಂಬುದನ್ನು ಮರೆತಿದ್ದಾರೆ. ಈಶ್ವರಪ್ಪನವರು ಸಾರಿರುವ ಸಮರದ ಹಿಂದೆ ಬೇರೆ ನಾಯಕರು ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಸಿಎಂ ಅಭ್ಯರ್ಥಿ ಆಗಿರುವುದು ಅವರಿಗೆ ಇಷ್ಟವಿಲ್ಲ. ಆದರೆ ಅಮಿತ್ ಶಾ ಅವರಂಥವರೇ ಎರಡೆರಡು ಬಾರಿ ಹೇಳಿದ ಮೇಲೆ ಅವರೇನೂ ಮಾಡಲು ಸಾಧ್ಯವಿಲ್ಲ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿರುವುದು ಯಡಿಯೂರಪ್ಪನವರು. ಅನುಮಾನದ ಕಣ್ಣುಗಳನ್ನು ತೆಗೆದು ಪಕ್ಕಕ್ಕಿಡಬೇಕು. ತಮ್ಮ ಬುದ್ಧಿ ಮೇಲೆ ತಾವೇ ಎಳೆದುಕೊಂಡಿರುವ ಮುಸುಕು ಸರಿಸಿ, ತಮ್ಮ ಸುತ್ತ ತಾವೇ ಕಟ್ಟಿಕೊಂಡಿರುವ ಗೋಡೆ ಒಡೆದೆಸೆಯಬೇಕು. ಆಗಷ್ಟೇ ರಾಜ್ಯ ಬಿಜೆಪಿ ಮೇಲೆ ಕವಿದಿರುವ ಕಾರ್ಮೋಡ ಸರಿಯುತ್ತದೆ ಎಂಬುದು ನಿಷ್ಠಾವಂತ ನಾಯಕರು ಮತ್ತು ಕಾರ್ಯಕರ್ತರ ಅಂಬೋಣ.

ಲಗೋರಿ : ಅನುಮಾನದ ಕನ್ನಡಕ ತೆಗೆದಿಡಬಹುದು. ಆದರೆ ಅನುಮಾನವೇ ಕಣ್ಣಾಗಿಬಿಟ್ಟರೆ?!

Leave a Reply