ಗೋಹತ್ಯೆ ನಿಷೇಧ ನಿರ್ಧಾರ ವಿರೋಧಿಸಿ ದನದ ಮಾಂಸ ಸೇವಿಸಿದ ಕೇರಳ ಕಾಂಗ್ರೆಸ್ ಸದಸ್ಯರ ಅಮಾನತು, ಪೊಲೀಸರಿಂದ ಪ್ರಕರಣ ದಾಖಲು

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರದ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿ ದನದ ಮಾಂಸವನ್ನು ಬೇಯಿಸಿ ಸೇವಿಸುವ ಮೂಲಕ ಪ್ರತಿಭಟನೆ ನಡೆಸಿದ್ದ ಕೇರಳ ಯುವ ಕಾಂಗ್ರೆಸ್ ಸದಸ್ಯರನ್ನು ಇಂದು ಅಮಾನತು ಮಾಡಲಾಗಿದೆ.

ಕೇರಳದ ಕನ್ನೂರ್ ಜಿಲ್ಲೆಯ ಮೂವರು ಕಾಂಗ್ರೆಸ್ ಯುವ ಸದಸ್ಯರು ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ, ಎತ್ತನ್ನು ಕೊಂದು ಅದರ ಮಾಂಸದಿಂದ ಅಡುಗೆ ಮಾಡಿ ತಿಂದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ಕೃತ್ಯವನ್ನು ಸ್ವತಃ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರೋಧಿಸಿದ್ದು, ‘ಇದೊಂದು ಅವಿವೇಕ ಹಾಗೂ ಅನಾಗರಿಕ ಕೃತ್ಯ. ಇದನ್ನು ನಾನು ಹಾಗೂ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ.’ ಎಂದು ಖಂಡಿಸಿದ್ದಾರೆ. ಮತ್ತೊಂದೆಡೆ ಕೇಂದ್ರದ ಈ ನಿರ್ಧಾರದ ಕುರಿತಂತೆ ಶೀಘ್ರದಲ್ಲೇ ಸರ್ವಪಕ್ಷ ಸಭೆ ನಡೆಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಈ ವಿಡಿಯೋದಲ್ಲಿ ಯುವಕರ ಗುಂಪು ಎತ್ತನ್ನು ಕತ್ತರಿಸುವಾಗ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾ, ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕಿದ್ದರು. ಈ ವಿಡಿಯೋ ಕುರಿತಾಗಿ ಸ್ಥಳೀಯ ಬಿಜೆಪಿ ಕಾರ್ಯಕರ್ತರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ದಾಖಲಿಸಿಕೊಂಡಿರುವ ಸಂಬಂಧಿಸಿದಂತೆ ಪೊಲೀಸರು ಹಲವು ಕಾಂಗ್ರೆಸ್ ಯುವ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಸದಸ್ಯರನ್ನು ಪಕ್ಷದಿಂದ ವಜಾಗೊಳಿಸಿ ಮಾತನಾಡಿರುವ ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ‘ಇಂತಹ ಅಸಭ್ಯ ವರ್ತನೆ ತೋರುವವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವಿಲ್ಲ’ ಎಂದಿದ್ದಾರೆ.

Leave a Reply