ಕೆಪಿಸಿಸಿ ಅಧ್ಯಕ್ಷ ಪಟ್ಟದ ಕಸರತ್ತು: ಒಮ್ಮತ ನಿರ್ಧಾರಕ್ಕೆ ಬರಲು ಹೈಕಮಾಂಡ್ ವಿಫಲ, ಮುಂದಿನ ಚುನಾವಣೆವರೆಗೂ ಪರಮೇಶ್ವರ್ ಮುಂದುವರಿಕೆ?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ವಿಚಾರವಾಗಿ ಇಂದು ರಾಜ್ಯ ನಾಯಕರೊಂದಿಗೆ ಪಕ್ಷದ ವರಿಷ್ಠರು ನಡೆದ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

ಸದ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿರುವ ಪರಮೇಶ್ವರ್ ಅವರ ಬದಲಿಗೆ ಯಾರನ್ನು ತಂದು ಕೂರಿಸಬೇಕು ಎಂಬುದರ ಬಗ್ಗೆ ನವದೆಹಲಿಯಲ್ಲಿರು ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಸರಣಿ ಸಭೆಗಳು ನಡೆದವು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜನ ಖರ್ಗೆ, ಪರಮೇಶ್ವರ್, ದಿನೇಶ್ ಗುಂಡುರಾವ್, ಬಿ.ಕೆ ಹರಿಪ್ರಸಾದ್ ಸೇರಿದಂತೆ ಹಲವು ರಾಜ್ಯ ನಾಯಕರ ಜತೆ ಪಕ್ಷದ ಹೈ ಕಮಾಂಡ್ ಸಭೆ ನಡೆಸಿತು. ಈ ಸಭೆಯಲ್ಲಿ ಒಮ್ಮತದ ನಿರ್ಧಾರ ಮೂಡದಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆವರೆಗೂ ಪರಮೇಶ್ವರ್ ಅವರನ್ನೇ ಮುಂದುವರೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಕುರಿತ ಅಧಿಕೃತ ನಿರ್ಧಾರವನ್ನು ನಾಳೆ ಪ್ರಕಟಿಸಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸಭೆಯಲ್ಲಿ ರಾಜ್ಯ ನಾಯಕರಿಗೆ ಸೂಚನೆ ನೀಡಿರುವ ವರಿಷ್ಠರು, ಮುಂಬರುವ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಬೇಕು ಎಂದಿದ್ದಾರೆ. ವರಿಷ್ಠರ ಈ ಸೂಚನೆ, ಮುಂದಿನ ಚುನಾವಣೆ ನನ್ನ ನಾಯಕತ್ವದಲ್ಲೇ ನಡೆಯಲಿದೆ ಎಂದು ನಿರೀಕ್ಷೆ ಹೊಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿನ್ನಡೆಯುಂಟಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಕೂರಲು ಸಾಕಷ್ಟು ಲಾಬಿ ನಡೆಸಿದ್ದ ಡಿ.ಕೆ ಶಿವಕುಮಾರ್ ಅವರಿಗೂ ನಿರಾಸೆಯಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

Leave a Reply