ಅಕ್ಷಯ್ ಕುಮಾರ್ ಹಾಗೂ ಸೈನಾ ನೆಹ್ವಾಲ್ ಮಾವೊವಾದಿಗಳ ಕೆಂಗಣ್ಣಿಗೆ ಗುರಿಯಾಗಿರೋದೇಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಬಾಲಿವುಡ್ ನ ಆ್ಯಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಬ್ಯಾಡ್ಮಿಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿರುದ್ಧ ಮಾವೊವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾವೊ ವಾದಿಗಳ ಈ ಖಂಡನೆಗೆ ಪ್ರಮುಖ ಕಾರಣ, ಈ ಇಬ್ಬರು ತಾರೆಯರು ಹುತಾತ್ಮ ಸಿಆರ್ ಪಿಎಫ್ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿರುವುದು.

ಹೌದು, ಕಳೆದ ಮಾರ್ಚ್ ತಿಂಗಳಲ್ಲಿ ಛತ್ತೀಸಗಡದ ಸುಕ್ಮಾ ಪ್ರದೇಶದಲ್ಲಿ ನಡೆದ ನಕ್ಸಲರ ದಾಳಿಯಲ್ಲಿ 12 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ಯೋಧರ ಕುಟುಂಬಕ್ಕೆ ಅಕ್ಷಯ್ ಹಾಗೂ ಸೈನಾ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಅಕ್ಷಯ್ ಕುಮಾರ್ ಪ್ರತಿ ಹುತಾತ್ಮ ಯೋಧರ ಕುಟುಂಬದ ಭದ್ರತೆಗೆ ಸಹಾಯವಾಗುವ ದೃಷ್ಟಿಯಿಂದ ₹ 9 ಲಕ್ಷ ಹಣ ನೀಡಲು ನಿರ್ಧರಿಸಿದ್ದರು. ಇನ್ನು ಇತ್ತೀಚೆಗೆ 27ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂದರ್ಭದಲ್ಲಿ ಸೈನಾ ನೆಹ್ವಾಲ್ ಈ ಪ್ರತಿ ಕುಟುಂಬಕ್ಕೆ ತಲಾ ₹ 50 ಸಾವಿರ ಎಂಬಂತೆ ಒಟ್ಟು ₹ 6 ಲಕ್ಷ ಹಣ ನೀಡುವುದಾಗಿ ಘೋಷಿಸಿದ್ದರು.

ಈ ಇಬ್ಬರು ಖ್ಯಾತನಾಮರು ಹುತಾತ್ಮರ ಕುಟುಂಬಕ್ಕೆ ನೆರವಾಗಿರುವುದು ನಕ್ಸಲರ ಕಣ್ಣು ಕೆಂಪಾಗಿಸಿದೆ. ಛತ್ತೀಸಗಡದ ದಕ್ಷಿಣ ಬಸ್ತಾರ್ ಪ್ರದೇಶದಲ್ಲಿ ಕರಪತ್ರಗಳ ಮೂಲಕ ಸೈನಾ ಹಾಗೂ ಅಕ್ಷಯ್ ಕುಮಾರ್ ವಿರುದ್ಧ ಮಾವೊವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕರಪತ್ರದಲ್ಲಿ ಮಾವೊವಾದಿಗಳು ಹೇಳಿರುವುದಿಷ್ಟು…

‘ಪಿಎಲ್ ಜಿಎ ದಾಳಿಯ ಸಂದರ್ಭದಲ್ಲಿ ಸತ್ತ ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ಅಕ್ಷಯ್ ಕುಮಾರ್ ಹಾಗೂ ಸೈನಾ ನೆಹ್ವಾಲ್ ಆರ್ಥಿಕ ನೆರವು ನೀಡುತ್ತಿರುವುದನ್ನು ಖಂಡಿಸುತ್ತೇವೆ. ಸಿನಿಮಾ, ಕ್ರೀಡೆ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿನ ಖ್ಯಾತನಾಮರು ಸೈನಿಕರ ಕುಟುಂಬಕ್ಕೆ ಹಣ ನೀಡುವುದನ್ನು ಬಿಟ್ಟು, ಈ ಕ್ರಾಂತಿಕಾರಿ ಹೋರಾಟದಲ್ಲಿ ಪ್ರಾಣ ಬಿಡುತ್ತಿರುವ ಹೋರಾಟಗಾರರ ಕುಟುಂಬಕ್ಕೆ ನೆರವು ನೀಡಲಿ. ಆ ಮೂಲಕ ಬಡವರ ಪರ ನಿಂತು ನಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಕರೆ ನೀಡುತ್ತೇವೆ. ಜತೆಗೆ ಪೊಲೀಸರ ದೌರ್ಜನ್ಯ ಹಾಗೂ ಮಾನವ ಹಕ್ಕು ಉಲ್ಲಂಘನೆ ವಿರುದ್ಧ ಧ್ವನಿ ಎತ್ತಬೇಕು.’

Leave a Reply