ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಆಡ್ವಾಣಿ, ಜೋಶಿ, ಉಮಾಭಾರತಿಗೆ ಜಾಮೀನು ನೀಡಿದ ಸಿಬಿಐ ವಿಶೇಷ ಕೋರ್ಟ್

ಡಿಜಿಟಲ್ ಕನ್ನಡ ಟೀಮ್:

(ಅಪ್ಡೇಟೆಡ್ ಮಾಹಿತಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮುಖಂಡ ಎಲ್.ಕೆ ಆಡ್ವಾಣಿ, ಮುರಳಿ ಮನೋಹರ ಜೋಷಿ ಹಾಗೂ ಉಮಾ ಭಾರತಿ ಸೇರಿದಂತೆ ಇತರರ ವಿರುದ್ಧ ಆರೋಪ ರಚಿಸದಂತೆ ಸಲ್ಲಿಸಲಾಗಿದ್ದ ಮನವಿಯನ್ನು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ತಿರಸ್ಕರಿಸಲಾಗಿದ್ದು. ನ್ಯಾಯಾಲಯ ಇವರ ವಿರುದ್ಧ ಪಿತೂರಿಯ ಆರೋಪ ದಾಖಲಿಸಿದೆ. ‘ಈ ಮುಖಂಡರ ವಿರುದ್ಧ ಆರೋಪ ಪಟ್ಟಿ ರಚಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮಂಗಳವಾರ ಮಧ್ಯಾಹ್ನ ನಡೆದ ವಿಚಾರಣೆಯಲ್ಲಿ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ. ಇದಕ್ಕೂ ಮುನ್ನ ಬೆಳಗ್ಗೆ ನಡೆದ ವಿಚಾರಣೆಯ ಕುರಿತಾದ ಮಾಹಿತಿ ಈ ಕೆಳಗಿನಂತಿದೆ…)

ಬಾಬ್ರಿ ಮಸೀದಿ ಧ್ವಂಸಕ್ಕೆ ಪಿತೂರಿ ನಡೆಸಿರುವ ಆರೋಪ ಹೊತ್ತಿರುವ ಬಿಜೆಪಿ ಮುಖಂಡರಾದ ಎಲ್.ಕೆ ಆಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಉಮಾಭಾರತಿ ಸೇರಿದಂತೆ ಇತರೆ 9 ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಬಿಜೆಪಿ ಹಿರಿಯ ನಾಯಕರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಇಂದು ನಡೆದ ಪ್ರಕರಣದ ವಿಚಾರಣೆ ವೇಳೆ ಈ ನಾಯಕರು ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾದರು. ಈ ವೇಳೆ ಜಾಮೀನು ನೀಡುವಂತೆ ಈ ನಾಯಕರು ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ವೈಯಕ್ತಿಕವಾಗಿ ₹ 50 ಸಾವಿರ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿತು.

ಬಾಬ್ರಿ ಮಸೀದಿ ಧ್ವಂಸವಾದ ನಂತರ 1992ರ ಡಿಸೆಂಬರ್ 6ರಂದು ಈ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಸುದೀರ್ಘ 10 ವರ್ಷ ವಿಚಾರಣೆ ನಂತರ 2001ರಲ್ಲಿ ಸಿಬಿಐ ವಿಶೇಷ ನ್ಯಾಯಾಸಯ ಈ ನಾಯಕರ ಮೇಲಿನ ಆರೋಪವನ್ನು ತೆರವುಗೊಳಿಸಿತ್ತು. ನಂತರ 2010ರಲ್ಲಿ ಅಲಹಬಾದ್ ಹೈಕೋರ್ಟ್ ಸಹ ಇದೇ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೆ ಈ ತೀರ್ಪು ಪ್ರಶ್ನಿಸಿ 2011ರ ಫೆ.18ರಂದು ಹಾಜಿ ಮಹಬೂಬ್‌ ಅಹ್ಮದ್‌ ಎಂಬುವವರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದೇ ವರ್ಷ ಏಪ್ರಿಲ್ 19ರಂದು ಇವರ ವಿರುದ್ಧದ ಪಿತೂರಿ ಆರೋಪವನ್ನು ಮತ್ತೆ ಹೇರಿ, ಸಿಬಿಐ ವಿಶೇಷ ನ್ಯಾಯಾಲಯ ಒಂದು ತಿಂಗಳ ಒಳಗಾಗಿ ಇವರ ವಿರುದ್ಧ ಆರೋಪ ಪಟ್ಟಿ ರಚಿಸಿ, ಎರಡು ವರ್ಷಗಳಲ್ಲಿ ಪ್ರಕರಣದ ತನಿಖೆ ಅಂತ್ಯಗೊಳಿಸಬೇಕು ಎಂದು ಸೂಚನೆ ನೀಡಿತ್ತು. ಹೀಗಾಗಿ ಸಿಬಿಐ ವಿಶೇಷ ನ್ಯಾಯಾಲಯ ಮತ್ತೆ ಈ ಪ್ರಕರಣದ ವಿಚಾರಣೆ ಆರಂಭಿಸಿ ಆರೋಪ ಪಟ್ಟಿ ರಚಿಸಲು ನಿರ್ಧರಿಸಿದೆ.

ಇಂದು ನಡೆದ ವಿಚಾರಣೆ ಸಂದರ್ಭದಲ್ಲಿ ಈ ನಾಯಕರ ವಿರುದ್ಧದ ಆರೋಪ ಕೈಬಿಡುವಂತೆ ಅರ್ಜಿ ಸಲ್ಲಿಸಲಾಗಿದ್ದು, ಈ ಕುರಿತ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ. ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿದರೆ ನಂತರ ಆರೋಪ ಪಟ್ಟಿಯನ್ನು ರಚಿಸಲಾಗುವುದು ಎಂದು ವಕೀಲರು ತಿಳಿಸಿದ್ದರು.

Leave a Reply