ಚಾಂಪಿಯನ್ಸ್ ಟ್ರೋಫಿಯಲ್ಲಿ ಬಳಕೆಯಾಗಲಿದೆ ‘ಸ್ಮಾರ್ಟ್ ಬ್ಯಾಟ್’, ಏನಿದರ ವಿಶೇಷತೆ?

ಡಿಜಿಟಲ್ ಕನ್ನಡ ಟೀಮ್:

ಕ್ರೀಡೆಯಲ್ಲಿ ತಂತ್ರಜ್ಞಾನಗಳ ಆವಿಷ್ಕಾರ ಹಾಗೂ ಅವುಗಳ ಪ್ರಯೋಗ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿವೆ. ಅದರಲ್ಲೂ ಕ್ರಿಕೆಟ್ ನಲ್ಲಿ ನಡೆಯುತ್ತಿರುವ ಪ್ರಯೋಗಗಳು ಇತರೆ ಕ್ರೀಡೆಗಳಿಗಿಂದ ಒಂದು ಕೈ ಮೇಲಿದೆ. ಕ್ರೀಡೆಯ ಗುಣಮಟ್ಟ, ಆಟದ ಶೈಲಿ ಹಾಗೂ ಪ್ರೇಕ್ಷಕರಿಗೆ ರೋಮಾಂಚನದ ಅನುಭವ ಹಾಗೂ ಆಕರ್ಷಣೆಗಾಗಿ ಇಂತಹ ಹಲವು ಪ್ರಯೋಗಗಳು ನಡೆಯುತ್ತಲೇ ಬಂದಿವೆ. ಈಗ ಅದರ ಮುಂದುವರಿದ ಭಾಗವಾಗಿ ನಡೆಯುತ್ತಿರುವ ಮತ್ತೊಂದು ಪ್ರಯೋಗವೇ ‘ಸ್ಮಾರ್ಟ್ ಬ್ಯಾಟ್’!

ಇತ್ತೀಚಿನ ದಿನಗಳಲ್ಲಿ ಹಾಕ್ ಐನಂತಹ ತಂತ್ರಜ್ಞಾನ, ವಿಕೆಟ್ ನಲ್ಲಿ ಕ್ಯಾಮೆರಾ, ಸ್ಪೈಡರ್ ಕ್ಯಾಮೆರಾ, ಆಟಗಾರರು ಹಾಗೂ ಅಂಪೈರ್ ಗಳ ಹೆಲ್ಮೆಟ್ ಗಳಲ್ಲಿ ಕ್ಯಾಮೆರಾ, ಎಲ್ಇಡಿ ದೀಪಗಳಿರುವ ವಿಕೆಟ್ ಗಳು ಹೀಗೆ ಅನೇಕ ಪ್ರಯತ್ನಗಳು ಯಶಸ್ವಿಯಾಗಿದ್ದು, ಪ್ರೇಕ್ಷಕರ ಮನ ಗೆದ್ದಿವೆ. ಸ್ಮಾರ್ಟ್ ಬ್ಯಾಟ್ ಸಹ ಇಂತಹುದೇ ಹೊಸ ಪ್ರಯತ್ನ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಬ್ಯಾಟ್ ಗಳನ್ನು ಪ್ರಯೋಗಾತ್ಮಕವಾಗಿ ಬಳಕೆ ಮಾಡಲಾಗುತ್ತಿದೆ. ಸ್ಮಾರ್ಟ್ ಬ್ಯಾಟ್ ಜತೆಗೆ ಈ ಟೂರ್ನಿಯಲ್ಲಿ ಇತರೆ ತಂತ್ರಜ್ಞಾನ ಬಳಕೆಯಾಗುತ್ತಿದ್ದು, ಈ ಟೂರ್ನಿಯನ್ನು ‘ಸ್ಮಾರ್ಟ್ ಕ್ರಿಕೆಟ್ ಟೂರ್ನಿ’ ಅಂತಲೇ ವರ್ಣಿಸಲಾಗುತ್ತಿದೆ.

ಈ ಎಲ್ಲದರ ನಡುವೆ ಏನಿದು ಸ್ಮಾರ್ಟ್ ಬ್ಯಾಟ್? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬೇಕಲ್ಲವೆ. ಅದಕ್ಕೆ ಉತ್ತರ ಹೀಗಿದೆ. ಸಿಂಪಲ್ಲಾಗಿ ಹೇಳುವುದಾದರೆ ಇದೊಂದು ಅಂತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬ್ಯಾಟ್. ಅಂದರೆ ಈ ಬ್ಯಾಟ್ ಗಳಲ್ಲಿ ವಿಶೇಷ ಚಿಪ್ ಅನ್ನು ಅಳವಡಿಸಲಾಗಿದ್ದು, ಇದು ಬ್ಯಾಟ್ಸ್ ಮನ್ ಆಟದ ಶೈಲಿಯ ಪ್ರತಿ ನಡೆಯನ್ನು ದಾಖಲಿಸಿಕೊಳ್ಳಲಿದೆ. ಖ್ಯಾತ ತಂತ್ರಜ್ಞಾನ ಕಂಪನಿಯಾಗಿರುವ ಇಂಟೆಲ್ ಈ ಸ್ಮಾರ್ಟ್ ಬ್ಯಾಟಿಗೆ ಅಳವಡಿಸಲಾಗುವ ಚಿಪ್ ತಯಾರಿಸಿದ್ದು, ಈ ಚಿಪ್ ಗೆ ಕ್ಯಾಮೆರಾಗಳ ಸಂಪರ್ಕವನ್ನು ನೀಡಲಾಗಿರುತ್ತದೆ. ಆ ಮೂಲಕ ಡ್ರೆಸಿಂಗ್ ರೂಮ್ ನಲ್ಲಿರುವ ತಂಡದ ಕೋಚ್ ಹಾಗೂ ಇತರೆ ಸಿಬ್ಬಂದಿ ಆಟಗಾರನ ಪ್ರತಿಯೊಂದು ಚಲನೆಯನ್ನು ಪರಿಸೀಲಿಸಬಹುದಾಗಿದೆ. ಈ ತಂತ್ರಜ್ಞಾನವನ್ನು ಪ್ರಯೋಗಾತ್ಮಕವಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಳಸಲು ಐಸಿಸಿ ನಿರ್ಧರಿಸಿದೆ. ಅಂದಹಾಗೆ ಪ್ರತಿ ತಂಡದ ಮೂವರು ಆಟಗಾರರಿಗೆ ಈ ಸ್ಮಾರ್ಟ್ ಬ್ಯಾಟ್ ಅನ್ನು ನೀಡಲಾಗಿದ್ದು, ಆ ಆಟಗಾರರು ಈ ಬ್ಯಾಟಿನಿಂದ ಆಡಲಿದ್ದಾರೆ.

ಉಳಿದಂತೆ ಈ ಟೂರ್ನಿಯಲ್ಲಿ ಬಳಸಲಾಗುವ ಇತರೆ ತಂತ್ರಜ್ಞಾನಗಳ್ಯಾವುವು ಎಂದು ನೋಡುವುದಾದರೆ, ಇಂಗ್ಲೆಂಡ್ ನ ದ ಓವಲ್, ಎಡ್ಜ್ ಬಸ್ಟನ್ ಮತ್ತು ಸೋಫಿಯಾ ಗಾರ್ಡನ್ ಮೈದಾನಗಳಲ್ಲಿ ಟೂರ್ನಿಯ 15 ಪಂದ್ಯಗಳು ನಡೆಯಲಿವೆ. ಈ ಮೂರು ಮೈದಾನಗಳಲ್ಲಿ ಎಂಟು ಅಲ್ಟ್ರಾ ಮೋಷನ್ ಹಾಕ್ ಐ ಕ್ಯಾಮೆರಾಗಳು, ಪ್ರಿಮಿಯರ್ ಲೀಗ್ ಗಳಲ್ಲಿ ಬಳಸುವ ಸ್ಪೈಡರ್ ಕ್ಯಾಮೆರಾ ಗಳು ಹಾಗೂ ಡ್ರೋನ್ ಕ್ಯಾಮೆರಾಗಳನ್ನು ಬಳಕೆ ಮಾಡಲಾಗುತ್ತಿದೆ. ಇನ್ನು ಅಭಿಮಾನಿಗಳಿಗಾಗಿ ಎಚ್ಡಿ ತಂತ್ರಜ್ಞಾನದ ವೈಫೈ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈ ಎಲ್ಲ ಪ್ರಯತ್ನಗಳು ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುವ ಪ್ರಯತ್ನವಾಗಿದೆ.

Leave a Reply