ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಪ್ರಸ್ತಾವನೆ, ಇಲ್ಲೂ ದೋಸ್ತಿಯಾಗಲಿವೆ ಕಾಂಗ್ರೆಸ್- ಜೆಡಿಎಸ್

ಡಿಜಿಟಲ್ ಕನ್ನಡ ಟೀಮ್:

ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದೆ. ಬಿಜೆಪಿಯ ತಂತ್ರಗಾರಿಕೆಯಿಂದ ಅಧಿಕಾರ ಪಡೆದಿದ್ದ ಶಂಕರಮೂರ್ತಿ ಅವರಿಗೆ ಈಗ ಅದೇ ತಂತ್ರಗಾರಿಕೆ ಮುಳುವಾಗಿದೆ.

ವೀರಣ್ಣ ಮತ್ತಿಕಟ್ಟಿ ಸಭಾಪತಿಯಾಗಿದ್ದಾಗ ಸದನದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಬಲ ಕಳೆದುಕೊಂಡ ಸಂದರ್ಭವನ್ನು ಬಳಸಿಕೊಂಡ ಬಿಜೆಪಿ ಅಂದು ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ತಂದು, ಸಭಾಪತಿ ಸ್ಥಾನ ಗಿಟ್ಟಿಸಿಕೊಂಡಿತ್ತು. ಇದೇ ತಂತ್ರಗಾರಿಕೆ ಬಳಸಿ, ಮತ್ತೆ ಅಧಿಕಾರದ ಚುಕ್ಕಾಣೆ ಹಿಡಿಯಲು ಪರಿಷತ್ತಿನ ಮುಖ್ಯ ಸಚೇತಕ ಐವಾನ್ ಡಿಸೋಜ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ವಿಧಾನ ಪರಿಷತ್ತಿನ ಕಾರ್ಯದರ್ಶಿ ಶ್ರೀನಿವಾಸ್ ಅವರಿಗೆ ಶಂಕರ್ ಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯದ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಸೋಮವಾರದಿಂದ ಆರಂಭಗೊಳ್ಳಲಿರುವ ಮಳೆಗಾಲದ ಅಧಿವೇಶನ ಬೆನ್ನಲ್ಲೇ ಸಭಾಪತಿ ಶಂಕರಮೂರ್ತಿ ವಿರುದ್ಧ  ಅವಿಶ್ವಾಸ ನಿರ್ಣಯ ಮಂಡಿಸಿರುವುರಿಂದ ಅವರು ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಸದನದ 75 ಸದಸ್ಯರಲ್ಲಿ ಆಡಳಿತಾರೂಢ ಕಾಂಗ್ರೆಸ್ 32 ಸದಸ್ಯರ ಬಲವನ್ನು ಹೊಂದಿದೆ. ಪಕ್ಷೇತರ ಶಾಸಕರಾಗಿರುವ ಎಂ.ಡಿ.ಲಕ್ಷ್ಮೀನಾರಾಯಣ, ಭೈರತಿ ಸುರೇಶ್ ಹಾಗೂ ವಿವೇಕ್ ರಾವ್ ಪಾಟೀಲ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವುದು ಹಾಗೂ ಮೇಲ್ಮನೆಗೆ ಒಂದು ಸ್ಥಾನವನ್ನು ನಾಮನಿರ್ದೇಶನ ಮಾಡಬೇಕಾಗಿರುವುದರಿಂದ ಕಾಂಗ್ರೆಸ್ ಸಂಖ್ಯಾಬಲ 36ಕ್ಕೆ ಏರಿಕೆಯಾಗಲಿದೆ.

ಸಭಾಪತಿ ಸ್ಥಾನ ಪಡೆಯಬೇಕಾದರೆ ಯಾವುದೇ ಪಕ್ಷ 38 ಸದಸ್ಯರನ್ನು ಹೊಂದಿರಬೇಕು. 13 ಸದಸ್ಯರನ್ನು ಹೊಂದಿರುವ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದರಿಂದ ಶಂಕರಮೂರ್ತಿ ಅವರು ಸಭಾಪತಿ ಸ್ಥಾನದಿಂದ ನಿರ್ಗಮಿಸುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಮೈತ್ರಿ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ಈ ಇಬ್ಬರೂ ಮೈತ್ರಿಗೆ ಒಲವು ತೋರಿರುವುದರಿಂದ ಪರಿಷತ್ತಿನಲ್ಲೂ ಕಾಂಗ್ರೆಸ್, ಜೆಡಿಎಸ್ ದೋಸ್ತಿಯಾಗಲಿದೆ.

Leave a Reply