ಬಿರು ಬೇಸಿಗೆಯ ನಂತರ ತಂಪೆರೆಯಲು ಬರ್ತಿದೆ ಮುಂಗಾರು

  ಡಿಜಿಟಲ್ ಕನ್ನಡ ಟೀಮ್:

  ಬಿರು ಬೇಸಿಗೆಯ ನಂತರ ಈಗ ಏಕಕಾಲದಲ್ಲೇ ದೇಶದ ನೈರುತ್ಯ ಹಾಗೂ ಈಶಾನ್ಯ ಭಾಗಗಳಲ್ಲಿ ಮುಂಗಾರು ಪ್ರವೇಶ ಮಾಡಿದೆ. ಇದರೊಂದಿಗೆ ಭೀಕರ ಬಿಸಿಲಿಗೆ ತತ್ತರಿಸಿದ್ದ ಜನರು ಮಳೆಯ ತಂಪನ್ನು ಅನುಭವಿಸಲು ಕಾತುರಗೊಂಡಿದ್ದಾರೆ. ಈ ಬಾರಿ ನಿಗದಿತ ಸಮಯಕ್ಕೆ ಮುಂಗಾರು ಪ್ರವೇಶವಾಗುತ್ತಿರುವುದು ಜನರಲ್ಲಿ ಮಂದಹಾಸ ಮೂಡಿಸಿದೆ.

  ಹೌದು, ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ದೇಶದಲ್ಲಿ ಮುಂಗಾರು ಪ್ರವೇಶ ಸರಿಯಾದ ಸಮಯಕ್ಕೆ ಆಗಿದೆ. ಇಂದು ಕೇರಳದಲ್ಲಿ ಮುಂಗಾರಿನ ಪ್ರವೇಶವಾಗಿದ್ದು, ಮುಂದಿನ ಒಂದು ವಾರದಲ್ಲಿ ಕರ್ನಾಟಕವನ್ನು ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಇನ್ನು ಈಶಾನ್ಯಭಾಗದಲ್ಲೂ ಮುಂಗಾರು ಪ್ರವೇಶವಾಗಿದ್ದು, ಬಾಂಗ್ಲಾದೇಶದಲ್ಲಿ ಎದ್ದಿರುವ ಮೊರಾ ಚಂಡಮಾರುತದ ಪರಿಣಾಮ ಈಶಾನ್ಯ ರಾಜ್ಯಗಳಲ್ಲೂ ಉತ್ತಮ ಮಳೆಯಾಗಿದೆ.

  ಕಳೆದ ಒಂದು ವಾರದಿಂದ ನಿಧಾನವಾಗಿ ಕೇರಳದಲ್ಲಿ ಮಳೆಯ ಸಿಂಚನವಾಗುತ್ತಿತ್ತು. ಆದರೆ ಕಳೆದ 48 ಗಂಟೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಇಂದು ಕೇರಳದಲ್ಲಿ ದಾಖಲಾಗಿರುವ ಮಳೆ ಪ್ರಮಾಣ ಹೀಗಿದೆ… ತಿರುವನಂತಪುರಂನಲ್ಲಿ 33 ಎಂಎಂ, ಪುನಲೂರ್ ನಲ್ಲಿ 55.6 ಎಂಎಂ, ಅಲ್ಲಾಪುಜಾದಲ್ಲಿ 95.2, ಕೊಟ್ಟಯಾಮ್ ನಲ್ಲಿ 48.4 ಹಾಗೂ ಕೊಚ್ಚಿಯಲ್ಲಿ 46.8 ಎಂಎಂನಷ್ಟು ಮಳೆಯಾಗಿದೆ. ಆ ಮೂಲಕ ಮುಂಗಾರು ಪ್ರವೇಶ ಅಧಿಕೃತವಾಗಿದೆ. ಈಗ ಕೇರಳ ಪ್ರವೇಶಿಸಿರುವ ಮುಂಗಾರು ಮುಂದಿನ ದಿನಗಳಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ಭಾಗಗಳನ್ನು ಪ್ರವೇಶಿಸಲಿದೆ. ಜೂನ್ 5-10ರವರೆಗೆ ಮುಂಗಾರು ಪ್ರವೇಶ ಮತ್ತಷ್ಟು ತೀವ್ರವಾಗುವ ನಿರೀಕ್ಷೆ ಇದ್ದು, ಪೂರ್ಣ ಪ್ರಮಾಣದ ಮುಂಗಾರ ಆರಂಭವಾಗಲಿದೆ ಎಂದಿದ್ದಾರೆ ಅಧಿಕಾರಿಗಳು.

  ಇನ್ನು ಬಾಂಗ್ಲಾದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಎದ್ದಿರುವ ಮೊರಾ ಚಂಡಮಾರುತ ಪ್ರತಿ ಗಂಟೆಗೆ 90 ರಿಂದ 120 ಕಿ.ಮೀ ವೇಗದಲ್ಲಿ ಸಾಗಿದ್ದು, ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮಿಜೊರಾಮ್, ಮೆಘಾಲಯ, ಮಣಿಪುರ ರಾಜ್ಯಗಳಲ್ಲಿ ಮಳೆಯಾಗಿದೆ. ಮಳೆಯ ಜತೆಗೆ ಜೋರಾದ ಗಾಳಿಯೂ ಇದ್ದು, ಮುಂದಿನ 12 ಗಂಟೆಗಳ ಕಾಲ ಧಾರಾಕಾರ ಮಳೆ ಮುಂದುವರಿಯುವ ನಿರೀಕ್ಷೆ ಇದೆ.

  ಒಟ್ಟಿನಲ್ಲಿ ಕೇರಳದಲ್ಲಿ ಮುಂಗಾರು ಪ್ರವೇಶವಾಗಿ, ಮುಂದಿನ ವಾರದಲ್ಲಿ ರಾಜ್ಯಕ್ಕೆ ಮಳೆ ಆಗಮಿಸಲಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದರಿಂದ ಭೀಕರ ಬರದಿಂದ ತತ್ತರಿಸಿದ್ದ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆ ಬೀಳಲಿ ಎಂಬುದು ಎಲ್ಲರ ಪ್ರಾರ್ಥನೆ.

  Leave a Reply