ಶೀಘ್ರದಲ್ಲೇ ಸಿದ್ದು ಸರ್ಕಾರದಿಂದ ರಾಜ್ಯದ ಜನತೆಗೆ ‘ಮಟನ್ ಭಾಗ್ಯ’!

ಡಿಜಿಟಲ್ ಕನ್ನಡ ಟೀಮ್:

ಕಳೆದ ನಾಲ್ಕು ವರ್ಷಗಳ ಆಡಳಿತ ಅವಧಿಯಲ್ಲಿ ರಾಜ್ಯದ ಜನತೆಗೆ ಹಲವು ಭಾಗ್ಯಗಳನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಇದೀಗ ಮಾಂಸದೂಟ ಪ್ರಿಯರಿಗೆ ಭರ್ಜರಿ ಕೊಡುಗೆ ನೀಡುತ್ತಿದ್ದು, ಶೀಘ್ರದಲ್ಲೇ ‘ಮಟನ್ ಭಾಗ್ಯ’ ಆರಂಭಿಸಲಿದೆ. ಎರಡು ವರ್ಷಗಳ ಹಿಂದೆಯೇ ಈ ಯೋಜನೆ ಘೋಷಣೆಯಾಗಿತ್ತಾದರೂ ಅಧಿಕೃತವಾಗಿ ಜಾರಿಯಾಗಿರಲಿಲ್ಲ. ಇದೀಗ ಚುನಾವಣಾ ಸಂದರ್ಭದಲ್ಲಿ ರಾಜ್ಯದ ಪ್ರಮುಖ ಮಹಾನಗರ ಪಾಲಿಕೆಗಳಲ್ಲಿ ಮೊದಲ ಹಂತದ ಮಳಿಗೆ ತೆರೆಯಲು ಸರ್ಕಾರ ಅನುಮತಿ ನೀಡುವ ಮೂಲಕ ಮಟನ್ ಭಾಗ್ಯ ಜಾರಿ ಮಾಡುತ್ತಿದೆ.

ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವು ಭಾಗ್ಯಗಳ ಯೋಜನೆಗಳನ್ನು ಜಾರಿ ಮಾಡಿದ್ದ ರಾಜ್ಯ ಸರ್ಕಾರ ಕೆಎಂಎಫ್ ಹಾಗೂ ಹಾಪ್ ಕಾಮ್ಸ್ ಮಾದರಿಯಲ್ಲಿ ಮಟನ್ ಅಂಗಡಿಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ತೆರೆಯಲು ನಿರ್ಧರಿಸಿದೆ.

ಈ ಯೋಜನೆಯ ಪ್ರಾರಂಭದ ಹಂತದಲ್ಲಿ ಮೊದಲು ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಕಲಬುರಗಿ, ಹುಬ್ಬಳ್ಳಿ ,ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗಳಲ್ಲಿ ಆರಂಭವಾಗಲಿವೆ. ಒಟ್ಟು 40 ಮಳಿಗೆಗಳನ್ನು ತೆರಯಲು ಸರ್ಕಾರ ಅನುಮತಿ ನೀಡಿದೆ.

ಮಹಾನಗರ ಪಾಲಿಕೆಗಳ ನಂತರ ಸಾರ್ವಜನಿಕರಿಂದ ವ್ಯಕ್ತವಾಗುವ ಅಭಿಪ್ರಾಯವನ್ನು ನೋಡಿಕೊಂಡು ಇತರೆ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಟನ್ ಅಂಗಡಿಗಳು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ವಿವಿಧೆಡೆ ಮಳಿಗೆ ಸ್ಥಾಪಿಸಲು ₹ 1.25 ಲಕ್ಷ ಅನುದಾನವನ್ನು ಸರ್ಕಾರವೇ ನೀಡುತ್ತದೆ. ಈ ಮಟನ್  ಅಂಗಡಿಗಳಿಗೆ ಸಂಪೂರ್ಣವಾಗಿ ಆಧುನಿಕ ತಂತ್ರಜ್ಞಾನಗಳಾದ ಅಂದರೆ ಎಸಿ (ಹವಾ ನಿಯಂತ್ರಿತ), ಸುಸಜ್ಜಿತ ಯಂತ್ರಗಳು, ಉತ್ತಮವಾದ ಪರಿಸರ, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡದಿರುವುದು, ಮಾಂಸ ಕೆಟ್ಟು ಹೋಗದಂತೆ ಶೇಖರಣೆಗೆ ವಿಶೇಷ ಸೌಲಭ್ಯ ನೀಡಲಾಗಿರುತ್ತದೆ.

ಈ ಮಳಿಗೆಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ವೈದ್ಯ ಅಧಿಕಾರಿಗಳು ಕಾಲಕಾಲಕ್ಕೆ ತಪಾಸಣೆ ನಡೆಸಿ ಸ್ವಚ್ಛತೆಗೆ ಆದ್ಯತೆ ಕೊಡಲಾಗಿದೆಯೇ ಎಂಬುದನ್ನು ಗಮನಿಸಲಿದ್ದಾರೆ. ಒಂದು ವೇಳೆ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ಕಂಡುಬಂದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಟನ್ ಸ್ಟಾಲ್ ಗಳು ರಾಜ್ಯದ ವಿವಿಧ ಭಾಗಗಳಲ್ಲಿ ತಲೆ ಎತ್ತಲಿವೆ. ಅಂದಹಾಗೆ ಹೊಸದಾಗಿ ಆರಂಭವಾಗಲಿರುವ ಮಟನ್ ಸ್ಟಾಲ್ ಗಳಲ್ಲಿ ಸಾರ್ವಜನಿಕರು ಆನ್ ಲೈನ್ ಮೂಲಕವು ಖರೀದಿ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು.

Leave a Reply