ಕಾಬುಲ್ ನಲ್ಲಿ ಬಾಂಬ್ ಸ್ಫೋಟ- 49 ಮಂದಿ ಸಾವು, ಭಾರತೀಯ ಅಧಿಕಾರಿಗಳು ಸುರಕ್ಷಿತ ಅಂದ್ರು ಸುಷ್ಮಾ ಸ್ವರಾಜ್

ಡಿಜಿಟಲ್ ಕನ್ನಡ ಟೀಮ್:

ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನಲ್ಲಿರೋ ಭಾರತೀಯ ರಾಯಭಾರಿ ಕಚೇರಿ ಬಳಿ ಬುಧವಾರ ಬಾಂಬ್ ಸ್ಫೋಟಗೊಂಡಿದ್ದು, ಒಟ್ಟು 49 ಮಂದಿ ಮೃತಪಟ್ಟಿದ್ದಾರೆ. ಇನ್ನು 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಭಾರತೀಯ ರಾಯಭಾರ ಕಚೇರಿಯಿಂದ ಕೇವಲ 50 ಮೀಟರ್ ದೂರದಲ್ಲಿ ಬೆಳಗ್ಗೆ 9.30ರ ಸುಮಾರಿಗೆ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ರಾಯಭಾರಿ ಕಚೇರಿಯ ಕಿಟಕಿ ಬಾಗಿಲುಗಳು ಹಾನಿಗೊಂಡಿದ್ದು, ಅದೃಷ್ಟವಶಾತ್ ರಾಯಭಾರಿ ಕಚೇರಿಯಲ್ಲಿದ್ದ ಎಲ್ಲ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ಈ ದಾಳಿಯಲ್ಲಿ ಹೆಚ್ಚು ಮಂದಿ ಸ್ಥಳೀಯ ನಾಗರಿಕರಾಗಿದ್ದಾರೆ ಎಂದು ವರದಿಗಳು ಬಂದಿವೆ. ಈ ದಾಳಿಯ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ‘ದೇವರ ಕೃಪೆಯಿಂದಾಗಿ ಭಾರತೀಯ ರಾಯಭಾರಿ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ಈ ವಿಷಯದ ಬಗ್ಗೆ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ರವಾನಿಸಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಈ ಸ್ಫೋಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಮನ್ಪ್ರೀತ್ ವೊಹ್ರಾ, ‘ನಾವೆಲ್ಲರು ಸುರಕ್ಷಿತವಾಗಿದ್ದೇವೆ. ಈ ಸ್ಫೋಟದ ತೀವ್ರತೆ ದೊಡ್ಡ ಮಟ್ಟದಲ್ಲಿದ್ದು, ನಮ್ಮ ಕಚೇರಿಯ ಕಟ್ಟಡ ಸೇರಿದಂತೆ ಅಕ್ಕಪಕ್ಕದ ಇತರೆ ಕಟ್ಟಡಗಳಿಗೂ ಹಾನಿಯಾಗಿದೆ’ ಎಂದು ತಿಳಿಸಿದ್ದಾರೆ.

ಈ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಹೇಳಿರುವುದಿಷ್ಟು… ‘ಕಾಬುಲ್ ನಲ್ಲಿ ಉಗ್ರರ ಬಾಂಬ್ ಸ್ಫೋಟದ ಕೃತ್ಯವನ್ನು ನಾವು ಖಂಡಿಸುತ್ತೇವೆ. ಈ ದಾಳಿಯಲ್ಲಿ ಬಲಿಯಾದವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಳುಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಎಲ್ಲ ಹಂತದ ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತವು ಅಫ್ಘಾನಿಸ್ತಾನದ ಬೆನ್ನಿಗೆ ನಿಂತಿರುತ್ತದೆ. ಈ ರೀತಿಯಾದ ಉಗ್ರರಿಗೆ ಬೆಂಬಲ ನೀಡುತ್ತಿರುವವರನ್ನು ಮಟ್ಟ ಹಾಕಬೇಕು.’

Leave a Reply