ಪರಮೇಶ್ವರ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಹೈಕಮಾಂಡ್ ಸೂಚನೆ, ಡಿ.ಕೆ ಶಿವಕುಮಾರ್- ಎಸ್.ಆರ್ ಪಾಟೀಲರಿಗೆ ಸಿಕ್ಕ ಜವಾಬ್ದಾರಿ ಯಾವುದು?

ಡಿಜಿಟಲ್ ಕನ್ನಡ ಟೀಮ್:

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆವರೆಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪರಮೇಶ್ವರ್ ಅವರನ್ನು ಮುಂದುವರಿಸಲು ನಿರ್ಧರಿಸಿರುವ ಕಾಂಗ್ರೆಸ್ ಹೈ ಕಮಾಂಡ್, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಅವರಿಗೆ ಸೂಚನೆ ನೀಡಿದೆ.

ಬುಧವಾರ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ ಬಿಡುಗಡೆಯಾದ ಅಧಿಕೃತ ಮಾಧ್ಯಮ ಹೇಳಿಕೆಯಲ್ಲಿ ಈ ಅಂಶವನ್ನು ತಿಳಿಸಲಾಗಿದೆ. ಮುಂಬರುವ ಚುನಾವಣೆಯನ್ನು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಎದುರಿಸುವುದಾಗಿ ಹೈಕಮಾಂಡ್ ಘೋಷಿಸಿದೆ. ಉಳಿದಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಡಿ.ಕೆ ಶಿವಕುಮಾರ್ ಹಾಗೂ ಎಸ್.ಆರ್ ಪಾಟೀಲ್ ಅವರಿಗೂ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನೀಡಲಾಗಿದೆ. ಹಾಗಾದರೆ ಯಾರ್ಯಾರಿಗೆ ಯಾವ ಜವಾಬ್ದಾರಿ ನೋಡೋಣ ಬನ್ನಿ…

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಹಾಗೂ ಪರಮೇಶ್ವರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ಸಿಕ್ಕಿದೆ. ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ದಿನೇಶ್ ಗುಂಡುರಾವ್ ಅವರ ಜತೆಗೆ ಎಸ್.ಆರ್ ಪಾಟೀಲ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಎಸ್.ಆರ್ ಪಾಟೀಲ್ ಅವರು ಉತ್ತರ ಕರ್ನಾಟಕದ ಜವಾಬ್ದಾರಿ ಹಾಗೂ ದಿನೇಶ್ ಗುಂಡುರಾವ್ ದಕ್ಷಿಣ ಕರ್ನಾಟಕ ಜವಾಬ್ದಾರಿ ನಿಭಾಯಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಇನ್ನು ಡಿ.ಕೆ ಶಿವಕುಮಾರ್ ಅವರಿಗೆ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಜವಾಬ್ದಾರಿಯನ್ನು ನೀಡಿದೆ.

ಆ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಿದ್ದ ಹೈಕಮಾಂಡ್ ಯಾವುದೇ ನಾಯಕನಿಗೂ ನಿರಾಸೆಯಾಗದಂತೆ ಎಲ್ಲರಿಗೂ ಒಂದೊಂದು ಜವಾಬ್ದಾರಿ ಕೊಟ್ಟು ಕೈತೊಳೆದುಕೊಂಡಿದೆ.

ಹೈಕಮಾಂಡಿನ ಈ ನಿರ್ಧಾರ ಚುನಾವಣ ರಣತಂತ್ರ ಎಂದು ಬಣ್ಣಿಸಲಾಗುತ್ತಿದೆ. ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪರಮೇಶ್ವರ್ ಅವರಿಂದ ಕಸಿದುಕೊಂಡರೆ ಅಲ್ಪಸಂಖ್ಯಾತರು ಮುನಿಸಿಕೊಳ್ಳುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವ ಹೊಂದಿರುವುದರಿಂದ ಹಿರಿಯ ನಾಯಕ ಎಸ್.ಆರ್ ಪಾಟೀಲ್ ಅವರಿಗೆ ಆ ಭಾಗದ ಜನರನ್ನು ಕಾಂಗ್ರೆಸ್ ನತ್ತ ಸೆಳೆಯುವ ಜವಾಬ್ದಾರಿ ನೀಡಲಾಗಿದೆ. ಪಕ್ಷದ ಜಿಲ್ಲಾ ಮತ್ತು ತಾಲೂಕು ಮಟ್ಟದ ನಾಯಕರ ಬೆಂಬಲ ಹೊಂದಿರುವ ಡಿ.ಕೆ ಶಿವಕುಮಾರ್ ಅವರಿಗೆ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿಸಿದೆ. ಆ ಮೂಲಕ ಡಿ.ಕೆ ಶಿವಕುಮಾರ್ ಅವರ ತಲೆ ಸವರುವ ಪ್ರಯತ್ನ ಹಕಮೈಂಡ್ ನದ್ದಾಗಿದೆ. ಈ ನಿರ್ಧಾರದೊಂದಿಗೆ ಕಾಂಗ್ರೆಸ್ ಹೈ ಕಮಾಂಡ್ ಒಂದೇ ಏಟಿನಲ್ಲಿ ಮೂರು ಹಕ್ಕಿಯನ್ನು ಹೊಡೆದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಸಂಘಟನೆಗೆ ಅಗತ್ಯವಿರುವಂತೆ ರಣತಂತ್ರ ಎಣೆದಿರುವುದು ಸ್ಪಷ್ಟವಾಗಿದೆ.

Leave a Reply