ಗೋವನ್ನು ರಾಷ್ಟ್ರೀಯ ಪ್ರಾಣಿ ಮಾಡಿ- ಗೋಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ನೀಡಿ: ಕೇಂದ್ರಕ್ಕೆ ರಾಜಸ್ಥಾನ ಹೈ ಕೋರ್ಟ್ ಸಲಹೆ

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧದ ನಿರ್ಧಾರಕ್ಕೆ ದೇಶದಾದ್ಯಂತ ಪರ ವಿರೋಧ ವಾದಗಳು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಒಂದೆಡೆ ಮದ್ರಾಸ್ ಹೈಕೋರ್ಟ್ ಗೋಹತ್ಯೆ ನಿಷೇಧ ಕಾಯ್ದೆಗೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿದರೆ, ಮತ್ತೊಂದೆಡೆ ರಾಜಸ್ಥಾನ ಹೈ ಕೋರ್ಟ್ ಗೋ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆಯೊಂದನ್ನು ಕೊಟ್ಟಿದೆ. ಅದೇನೆಂದರೆ, ‘ದೇಶದ ಬಹುತೇಕ ಹಿಂದುಗಳು ಪವಿತ್ರವೆಂದು ಪರಿಗಣಿಸಿ ಪೂಜಿಸುವ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ. ಗೋವು ಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಕಾನೂನು ಜಾರಿಗೆ ತನ್ನಿ’ ಎಂದು.

ದೇಶದಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ಕುರಿತಂತೆ ಕೇವಲ ಜನರು ಮಾತ್ರ ಪರ ವಿರೋಧ ವಾದ ಮಂಡಿಸುತ್ತಿಲ್ಲ. ನ್ಯಾಯಾಲಯದ ಆದೇಶಗಳು ಬಹುತೇಕ ಇದೇ ರೀತಿ ಇವೆ. ಕಳೆದ ವರ್ಷ ಜನವರಿ 1ರಿಂದ ಜುಲೈ 31ರವರೆಗೂ ಸುಮಾರು 8000 ಹಸುಗಳು ಅನಾರೋಗ್ಯದಿಂದ ತುತ್ತಾದ ಹಿಂಗೊನಿಯಾ ಗೋಶಾಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸಿದ ರಾಜಸ್ಥಾನ ಹೈ ಕೋರ್ಟ್ ಈ ಸಲಹೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ.

‘ಏಷ್ಯಾದಲ್ಲಿ ಭಾರತ ಗೋವುಗಳಿಗೆ ಸುರಕ್ಷಿತ ದೇಶವಾಗಿದೆ. ಸಂವಿಧಾನದ ನಿಯಮ 48 ಹಾಗೂ 51ಎ (ಜಿ) ಅನ್ನು ಗಮನದಲ್ಲಿಟ್ಟುಕೊಂಡು ಗೋವುಗಳಿಗೆ ಕಾನೂನಾತ್ಮಕ ರಕ್ಷಣೆ ನೀಡಬಹುದು. ಗೇವನ್ನು ರಾಷ್ಟ್ರೀಯ ಪ್ರಾಣಿ ಎಂದು ಸರ್ಕಾರ ಘೋಷಣೆ ಮಾಡಲಿದೆ ಎಂಬ ನಿರೀಕ್ಷೆ ಇದೆ. ಭಾರತ ಕೃಷಿಕರ ದೇಶ. ಪಶು ಸಂಗೋಪನೆ ಮಹತ್ವದ ಪಾತ್ರ ನಿರ್ವಹಿಸುತ್ತದೆ’ ಎಂದು ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ ಮಹೇಶ್ ಚಂದ್ರ ಶರ್ಮಾ ತಮ್ಮ 145 ಪುಟಗಳ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Leave a Reply