ಸದ್ಯದಲ್ಲೇ ಜಾರಿಗೆ ಬರಲಿದೆ ಬ್ಯಾಂಕ್ ಖಾತೆ ಸಂಖ್ಯೆ ಪೋರ್ಟಬಲ್ ವ್ಯವಸ್ಥೆ, ಏನಿದು ಆರ್ ಬಿಐನ ಹೊಸ ನಿರ್ಧಾರ?

ಡಿಜಿಟಲ್ ಕನ್ನಡ ಟೀಮ್:

ಇಷ್ಟು ದಿನಗಳ ಕಾಲ ಮೊಬೈಲ್ ನಂಬರ್ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದ ನೀವು ಸದ್ಯದಲ್ಲೇ ಬ್ಯಾಂಕ್ ಅಕೌಂಟ್ ನಂಬರ್ ಅನ್ನು ಪೋರ್ಟ್ ಮಾಡಿಸಿಕೊಳ್ಳಬಹುದು! ಇಷ್ಟು ದಿನಗಳ ಕಾಲ ನಿಮ್ಮ ಮೊಬೈಲ್ ನಂಬರ್ ಬದಲಿಸದೇ ಕಂಪನಿಯನ್ನು ಬದಲಿಸಿಕೊಳ್ಳಬಹುದಿತ್ತು. ಈಗ ಅದೇ ರೀತಿ ಬ್ಯಾಂಕಿನ ಖಾತೆ ಸಂಖ್ಯೆ ಬದಲಾಯಿಸಿಕೊಳ್ಳದೆ ಬ್ಯಾಂಕಿನ ಸೇವೆಯನ್ನು ಬದಲಿಸಿಕೊಳ್ಳಬಹುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯದಲ್ಲೇ ಈ ಅವಕಾಶ ಕಲ್ಪಿಸಿಕೊಡಲು ಸಕಲ ಸಿದ್ಧತೆ ನಡೆಸುತ್ತಿದೆ.

‘ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಿಸುವುದರಿಂದ ಬ್ಯಾಂಕ್ ಸಂಖ್ಯೆಯನ್ನು ಪೋರ್ಟ್ ಮಾಡಿಸಿಕೊಳ್ಳುವ ವ್ಯವಸ್ಥೆ ಜಾರಿಗೆ ತರುವುದು ಸುಲಭವಾಗಲಿದೆ’ ಎಂದಿದ್ದಾರೆ ಆರ್ ಬಿಐ ಡೆಪ್ಯೂಟಿ ಗವರ್ನರ್ ಎಸ್ಎಸ್ ಮುಂದ್ರಾ. ಇದು ನೋಟು ಅಮಾನ್ಯ ನಿರ್ಧಾರದ ನಂತರ ಆರ್ ಬಿಐ ಪ್ರಕಟಿಸುತ್ತಿರುವ ಅತಿ ದೊಡ್ಡ ನಿರ್ಧಾರ ಎಂದು ಬಣ್ಣಿಸಲಾಗುತ್ತಿದೆ.

ಇದರಿಂದ ಆಗುವ ಪ್ರಯೋಜನವಾದರೂ ಏನು ಎಂದರೆ, ಇಷ್ಟು ದಿನಗಳ ಕಾಲ ಯಾವುದೇ ಗ್ರಾಹಕ ಬ್ಯಾಂಕಿನ ಸೇವೆ ಬದಲಿಸಬೇಕಾದರೆ ಆತ ಬೇರೊಂದು ಬ್ಯಾಂಕಿನಲ್ಲಿ ಹೊಸ ಖಾತೆ ತೆರೆಯಬೇಕಿತ್ತು. ಪ್ರತಿ ಬಾರಿಯೂ ಆತ ಹಲವು ಹಂತಗಳ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ ಈಗ ಆ ರೀತಿ ಸಮಸ್ಯೆಗಳನ್ನು ಎದುರಿಸದೇ ನೇರವಾಗಿ ಬ್ಯಾಂಕ್ ಅನ್ನು ಬದಲಿಸಿಕೊಳ್ಳಬಹುದು. ಈ ನಿರ್ಧಾರದಿಂದ ಬಹು ಖಾತೆ ನಿರ್ವಹಣೆಗೂ ನೆರವಾಗಲಿದ್ದು, ಬ್ಯಾಂಕುಗಳ ನಡುವೆ ಸ್ಪರ್ಧೆ ಏರ್ಪಟ್ಟು ಅದರಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರೆಯುವಂತಾಗಲಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಈ ನಿರ್ಧಾರ ಚರ್ಚೆಯ ಹಂತದಲ್ಲಿದ್ದು, ಆರ್ ಬಿಐನ ಈ ನಿರ್ಧಾರವನ್ನು ಬ್ಯಾಂಕುಗಳು ಒಪ್ಪುತ್ತವೆಯೇ ಎಂಬುದು ಈಗ ಎದ್ದಿರುವ ಪ್ರಶ್ನೆ. ಈಗಾಗಲೇ ಸಾಕಷ್ಟು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರಲ್ಲಿ ನಿರತವಾಗಿರುವ ಬ್ಯಾಂಕುಗಳು ಈ ನಿರ್ಧಾರವನ್ನು ಒಪ್ಪುವುದು ಕಷ್ಟ. ಕಾರಣ ದೇಶದಲ್ಲಿ ಒಂದೊಂದು ಬ್ಯಾಂಕುಗಳು ತಮ್ಮ ಖಾತೆಗಳನ್ನು ಸೃಷ್ಟಿಸುವ ಹಾಗೂ ನಿರ್ವಹಿಸಲು ವಿಭಿನ್ನ ಪ್ರಕ್ರಿಯೆಗಳನ್ನು ಅನುಸರಿಸುತ್ತಿವೆ. ಒಂದು ವೇಳೆ ಒಪ್ಪಲೇಬೇಕಾದ ಪರಿಸ್ಥಿತಿ ಬಂದರೆ, ಈ ಬ್ಯಾಂಕುಗಳು ತಮ್ಮ ಖಾತೆಗಳ ಸಂಖ್ಯೆ ನಿರ್ವಹಿಸುವ ಪದ್ಧತಿ ಅಥವಾ ಮಾದರಿಯನ್ನು ಬದಲಿಸಿಕೊಳ್ಳಬೇಕಾಗುತ್ತದೆ.

ಈಗಾಗಲೇ ಯೂರೇಪ್ ಹಾಗೂ ಆಶ್ಟ್ರೇಲಿಯಾ ಸೇರಿದಂತೆ ಇತರೆ ದೇಶಗಳಲ್ಲಿ ಈ ಮಾದರಿ ಚಾಲ್ತಿಯಲ್ಲಿದ್ದು, ಇದರಿಂದ ಗ್ರಾಹಕರಿಗೆ ಹೆಚ್ಚು ಲಾಭವಾಗಲಿದೆ ಎನ್ನುತ್ತಿದ್ದಾರೆ ತಜ್ಞರು.

Leave a Reply