ಹೊಸ ಸೈಬರ್ ಭದ್ರತಾ ಕಾನೂನು ಮೂಲಕ ವಿದೇಶಿ ಕಂಪನಿಗಳಿಗೆ ಬೇಲಿ ಹಾಕುತ್ತಿದೆ ಚೀನಾ

ಡಿಜಿಟಲ್ ಕನ್ನಡ ಟೀಮ್:

ವಿದೇಶಿ ತಂತ್ರಜ್ಞಾನ ಕಂಪನಿಗಳನ್ನು ತನ್ನ ದೇಶದಿಂದ ದೂರವಿಡಲು ಚೀನಾ ಕಾನೂನಿನ ಅಸ್ತ್ರ ಬಳಸುತ್ತಿದೆ. ಚೀನಾದ ಇಂಟರ್ ನೆಟ್ ಸಂಪರ್ಕ ನಿರ್ವಹಣೆ ಮಾಡುತ್ತಿರುವ ಸೈಬರ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಆಫ್ ಚೀನಾ ಹೊಸ ಕಾನೂನು ಜಾರಿಗೊಳಿಸಿದ್ದು, ಈ ಕಾನೂನಿನಲ್ಲಿ ವಿದೇಶಿ ತಂತ್ರಜ್ಞಾನ ಕಂಪನಿಗಳು ಇದೇ ರೀತಿ ಕಾರ್ಯ ನಿರ್ವಹಿಸಬೇಕು ಎಂಬ ಮಾರ್ಗಸೂಚಿಯನ್ನು ಹಾಕಿದೆ. ಆ ಮೂಲಕ ವಿದೇಶಿ ಕಂಪನಿಗಳ ಮೇಲೆ ತೀವ್ರ ಒತ್ತಡ ಹೇರಿದೆ.

ಈಗ ಜಾರಿಗೊಳಿಸಿರುವ ಸೈಬರ್ ಭದ್ರತಾ ಕಾನೂನಿನ ದಾಖಲೆಗಳಲ್ಲಿ, ಇಷ್ಟು ದಿನ ವಿದೇಶಿ ಕಂಪನಿಗಳು ಅನುಸರಿಸುತ್ತಿದ್ದ ಮಾದರಿಯನ್ನೇ ಹೊಂದಿದ್ದರೂ, ಹೊಸದಾಗಿ ಸೇರಿಸಲಾಗಿರುವ ಕಾನೂನು ಚೌಕಟ್ಟುಗಳು ಈ ಕಂಪನಿಗಳಿಗೆ ಗೊಂದಲ ಸೃಷ್ಟಿಸಿವೆ. ಅದು ಯಾವ ಮಟ್ಟಿಗೆ ಎಂದರೆ, ಚೀನಾದಲ್ಲಿ ತಮ್ಮ ವ್ಯವಹಾರ ಮುಂದುವರಿಸಬೇಕೆ ಎಂದು ಯೋಚಿಸುವಷ್ಟು.

ಇದಕ್ಕೆ ಒಂದು ಉದಾಹರಣೆಯನ್ನು ನೋಡುವುದಾದರೆ, ಈ ಕಾನೂನಿನ ಪರಿಚ್ಛೆದ 35ರ ಪ್ರಕಾರ ‘ಚೀನಾದ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಪಡೆದಿದ್ದೇ ಆದರೆ, ಆ ಮಾಹಿತಿಯನ್ನು ಚೀನಾದ ಗಡಿಯೊಳಗೇ ಶೇಖರಿಸಿಡಬೇಕು. ವ್ಯಾವಹಾರಿಕ ಸಂಬಂಧಿ ಪ್ರಮುಖ ದತ್ತಾಂಶಗಳು ಸಹ ಚೀನಾದ ಗಡಿ ದಾಟಿ ಆಚೆಗೆ ಹೋಗುವಂತಿಲ್ಲ.’

ಈ ಒಂದು ನಿಯಮದ ಪ್ರಕಾರ ವಿದೇಶಿ ತಂತ್ರಜ್ಞಾನ ಕಂಪನಿಗಳು ಚೀನಾ ಗ್ರಾಹಕರಿಗಾಗಿ ಅವರ ಮಾಹಿತಿಗಳನ್ನು ಕಲೆಹಾಕಲು ಚೀನಾದ ಗಡಿ ಪ್ರದೇಶದ ಒಳಗೇ ಪ್ರತ್ಯೇಕ ಸರ್ವರ್ ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತದೆ. ಈ ನಿಯಮಕ್ಕೆ ಈಗಾಗಲೇ ವಿದೇಶಿ ಇಂಟರ್ ನೆಟ್ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ನಿಯಮದ ಕುರಿತಾಗಿ ಗೊಂದಲವಿದೆ. ಚೀನಾದ ಒಳಗೆ ಹೆಚ್ಚಿನ ಮಾಹಿತಿಗಳನ್ನು ಶೇಖರಿಸುತ್ತಿದ್ದರೆ, ಕಂಪನಿಗಳಿಗೆ ಹೆಚ್ಚು ವೆಚ್ಚ ತಗುಲುತ್ತದೆ. ಅಷ್ಟೇ ಅಲ್ಲದೆ ಚೀನಾ ಸರ್ಕಾರ ಯಾವಾಗ ಬೇಕಾದರೂ ಈ ಮಾಹಿತಿಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಹುದು ಎಂಬ ಆತಂಕವೂ ಸೃಷ್ಟಿಯಾಗಿದೆ. ಹೀಗೆ ಹಲವಾರು ಕಾನೂನುಗಳು ಗೊಂದಲಮಯವಾಗಿದ್ದು, ವಿದೇಶಿ ಕಂಪನಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Leave a Reply