ಪರಮೇಶ್ವರ್ ಹೊಟ್ಟೆಯೊಳಗಿನ ಉಭಯ ಸಂಕಟ ಮಾತುಗಳಲ್ಲಿ ಮುಚ್ಚಿಕೊಂಡಿದ್ದು ಹೇಗೆ?

ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಪರಮೇಶ್ವರ್.

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಗೃಹ ಸಚಿವ ಸ್ಥಾನಕ್ಕೆ ಡಾ.ಜಿ.ಪರಮೇಶ್ವರ್ ರಾಜೀನಾಮೆ ನೀಡಿದ್ದಾರೆ. ಮೈಸೂರು ಪ್ರವಾಸದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹಿಂತಿರುಗುತ್ತಿದ್ದಂತೆ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ, ಪರಮೇಶ್ವರ್ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ವರ್, ಮಾಧ್ಯಮಗಳ ಮುಂದೆ ಮಾತಾಡಿದ್ದರಲ್ಲಿ ಅವರು ಕೆಲವು ಸಂಕಟಗಳನ್ನು ಮುಚ್ಚಿಟ್ಟುಕೊಳ್ಳಲು ಮಾಡುತ್ತಿದ್ದ ಸಾಹಸವಿತ್ತು. ಸಾಕಷ್ಟು ಆಸೆಯಿಂದ ಸಚಿವ ಸಂಪುಟಕ್ಕೆ ಸೇರಿದ್ದ ಪರಮೇಶ್ವರ್ ಅವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸೂಚನೆ ರವಾನೆಯಾಗಿದೆ. ತಿರುಗಿ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಕ್ಕಿದೆಯಾದರೂ, ಚುನಾವಣಾ ವರ್ಷದಲ್ಲಿ ಹಲವು ಸಮಿತಿಗಳಲ್ಲಿ ಅಧಿಕಾರ ಹಂಚಲಾಗಿದೆ. ಕೆಪಿಸಿಸಿ ಅಧ್ಯಕ್ಷ ಪಟ್ಟದಲ್ಲಿ ಮುಂದುವರಿದರೂ ಇತರ ನಾಯಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿರುವುದು, ತಮ್ಮ ಸ್ಥಾನದ ಪ್ರಭಾವ ಕಡಿಮೆಯಾಗಿದೆಯೇನೊ ಅನಿಸಿದಂತೆ ಕಾಣುತ್ತಿದ್ದಾರೆ. ಹೀಗಾಗಿ ಅವರು ತಮ್ಮ ಮಾತುಗಳಲ್ಲಿ ತಮ್ಮ ನಾಯಕತ್ವ ಹಾಗೂ ಬೇರೆ ನಾಯಕರಿಗೆ ಅಧಿಕಾರ ಕೊಟ್ಟಿದ್ದರೂ ತಾವೇ ಅಂತಿಮ ತೀರ್ಮಾನ ಕೈಗೊಳ್ಳುವುದು ಎಂಬ ಅಂಶವನ್ನು ಒತ್ತಿ ಹೇಳಿದರು. ಹಾಗಾದರೆ ಮಾಧ್ಯಮದವರ ಮುಂದೆ ಪರಮೇಶ್ವರ್ ಹೇಳಿದ್ದೇನು ನೋಡೋಣ ಬನ್ನಿ…

‘ಚುನಾವಣಾ ವರ್ಷವಾದ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಕಡೆ ಹೆಚ್ಚು ಗಮನಹರಿಸಬೇಕಾಗಿರುವುದರಿಂದ ಮಂತ್ರಿ ಹುದ್ದೆ ತ್ಯಜಿಸಿದ್ದೇನೆ. ಸೂಕ್ಷ್ಮವಾದ ಗೃಹ ಇಲಾಖೆ ಹಾಗೂ ಪಕ್ಷದ ಹೊಣೆಗಾರಿಕೆಯನ್ನು ಏಕಕಾಲದಲ್ಲಿ ಚುನಾವಣಾ ವರ್ಷದಲ್ಲಿ ನಡೆಸಲು ಸಾಧ್ಯವಿಲ್ಲ ಎಂಬ ವರಿಷ್ಠರ ಆದೇಶದಂತೆ ನಡೆದುಕೊಂಡಿದ್ದೇನೆ.

ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂಬ ಉದ್ದೇಶದ ಹಿನ್ನೆಲೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಎಸ್.ಆರ್. ಪಾಟೀಲ್ ಹಾಗೂ ಸತೀಶ್ ಜಾರಿಕಿಹೊಳಿ, ಲೋಕಸಭಾ ಸದಸ್ಯ ಕೆ.ಎಚ್. ಮುನಿಯಪ್ಪ ಅವರಿಗೆ ಹೊಣೆಗಾರಿಕೆ ವಹಿಸಿದ್ದಾರೆ. ಇಷ್ಟಾದರೂ, ಅಧ್ಯಕ್ಷನಾಗಿ ಎಲ್ಲಾ ನಿರ್ಧಾರ ಕೈಗೊಳ್ಳುವುದು ನಾನೇ. ಕೇವಲ ಸಂಘಟನೆ ದೃಷ್ಟಿಯಿಂದ ಅಧಿಕಾರ ಹಂಚಲಾಗಿದೆ.

ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ 18 ಮುಖಂಡರನ್ನು ಕರೆಸಿ ಸಮಾಲೋಚನೆ ನಡೆಸಿದ ನಂತರವಷ್ಟೇ ಇಂತಹ ತೀರ್ಮಾನ ಕೈಗೊಂಡಿದ್ದಾರೆ. 2013 ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯು ನನ್ನ ಅಧ್ಯಕ್ಷತೆಯಲ್ಲಿಯೇ ನಡೆಯಿತು. ಮುಂದಿನ ಚುನಾವಣೆಯನ್ನು ನನ್ನ ನಾಯಕತ್ವದಲ್ಲೇ ನಡೆಸಲು ಪಕ್ಷ ಹೊಣೆಗಾರಿಕೆ ನೀಡಿದೆ. ಅದಕ್ಕೆ ವರಿಷ್ಠರಿಗೆ ಋಣಿಯಾಗಿದ್ದೇನೆ.’

ಅತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ಸಿಕ್ಕಾಗೆಲ್ಲಾ ಮುಂದಿನ ಚುನಾವಣೆ ನನ್ನ ನಾಯಕತ್ವದಲ್ಲೇ ನಡೆಯುತ್ತದೆ ಎಂದರೆ, ಇತ್ತ ಪರಮೇಶ್ವರ್ ಚುನಾವಣೆ ನನ್ನ ನಾಯಕತ್ವದಲ್ಲೇ ನಡೆಯುತ್ತದೆ ಅಂತಿದ್ದಾರೆ. ಉಳಿದ ನಾಯಕರು ಸಾಮೂಹಿಕ ನಾಯಕತ್ವದ ಜಪ ಪಟಿಸುತ್ತಿದ್ದಾರೆ.

Leave a Reply