ಇಂಗ್ಲೆಂಡ್ ಪರ ನಿಂತ ಗಂಗೂಲಿಗೆ ಶೇನ್ ವಾರ್ನ್ ಹಾಕಿದ ಬೆಟ್ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಆರಂಭವಾಗುವ ಹೊತ್ತಿನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್ ಪರಸ್ಪರ ಬೆಟ್ ಕಟ್ಟಿಕೊಂಡಿದ್ದಾರೆ. ಏನಪ್ಪಾ ಈ ಇಬ್ಬರು ಆರ ನಡುವಣ ಬೆಟ್ ಅಂದರೆ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ ಗಂಗೂಲಿ ಆಸ್ಟ್ರೇಲಿಯಾ ತಂಡದ ಜೆರ್ಸಿ ಧರಿಸಬೇಕು, ಆಸ್ಟ್ರೇಲಿಯಾ ಸೋತರೆ ವಾರ್ನ್ ಇಂಗ್ಲೆಂಡ್ ತಂಡದ ಜೆರ್ಸಿ ಧರಿಸಬೇಕು.

ಈ ಬೆಟ್ ಆಗಿದ್ದು ಹೇಗೆ?

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ತಂಡಗಳ ನಡುವಣ ಕಾದಾಟದ ಕುರಿತಾಗಿ ಬುಧವಾರ ನಡೆದ ಟಿವಿ ಕಾರ್ಯಕ್ರಮವೊಂದರಲ್ಲಿ ಈ ಇಬ್ಬರು ಆಟಗಾರರು ವಿಶ್ಲೇಷಕರಾಗಿ ಭಾಗವಹಿಸಿದ್ದರು. ಆಗ ವಿಶ್ವ ಕ್ರಿಕೆಟ್ ನ ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯದ ವಿಷಯ ಬಂತು.

ಮೊದಲು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಟೂರ್ನಿಯ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ಕಾದಾಟ ನಡೆಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಅಭಿಪ್ರಾಯ ಮಂಡಿಸಿದ ಸೌರವ್ ಗಂಗೂಲಿ, ಕ್ಲಾರ್ಕ್ ಅಭಿಪ್ರಾಯಕ್ಕೆ ವಿರುದ್ಧವಾಗಿ ತಮ್ಮ ವಿಶ್ಲೇಷಣೆ ಮಂಡಿಸಿದರು. ‘ಈ ಬಾರಿ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾ ಬದಲಿಗೆ ಇಂಗ್ಲೆಂಡ್ ಪ್ರಶಸ್ತಿ ಸುತ್ತಿನಲ್ಲಿ ಭಾರತದ ಜತೆ ಕಾದಾಟ ನಡೆಸುವ ಸಾಧ್ಯತೆ ಹೆಚ್ಚಿದೆ’ ಎಂದರು.

ಗಂಗೂಲಿಯ ಈ ಹೇಳಿಕೆಗೆ ಅಸಮಾಧಾನಗೊಂಡ ಶೇನ್ ವಾರ್ನ್, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವವರಾರು ಎಂಬ ಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ ಗಂಗೂಲಿ, ಇಂಗ್ಲೆಂಡ್ ಆತಿಥೇಯ ತಂಡವಾಗಿದ್ದು, ಈ ತಂಡದಲ್ಲಿ ಜೋ ರೂಟ್, ಜೊಸ್ ಬಟ್ಲರ್ ರಂತಹ ಅತ್ಯುತ್ತಮ ಆಟಗಾರರಿದ್ದು, ಒಟ್ಟಾರೆಯಾಗಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾಗಿಂತ ಸಮತೋಲಿತ ತಂಡವಾಗಿದೆ ಎಂದು ಅಭಿಪ್ರಾಯಪಟ್ಟರು. ಗಂಗೂಲಿ ಅವರ ಈ ಉತ್ತರವನ್ನು ಸ್ವಿಕರಿಸುವ ಮನಸ್ಥಿತಿ ವಾರ್ನ್ ಅವರಿಗಿರಲಿಲ್ಲ. ಈ ವಾದವನ್ನು ಇನ್ನಷ್ಟು ಮುಂದುವರಿಸಲು ಇಚ್ಛಿಸದ ವಾರ್ನ್, ಗಂಗೂಲಿಗೆ ಬೆಟ್ ಹಾಕಿದರು. ಅದು ಏನಂದ್ರೆ, ‘ಒಂದು ವೇಳೆ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಗೆದ್ದರೆ, ನೀವು ಆಸ್ಟ್ರೇಲಿಯಾ ತಂಡದ ಜೆರ್ಸಿ ಧರಿಸಬೇಕು ಜತೆಗೆ ನನಗೆ ಒಳ್ಳೆಯ ಊಟ ಕೊಡಿಸಬೇಕು. ಒಂದುವೇಳೆ ಆತಿಥೇಯ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ತಂಡವನ್ನು ಮಣಿಸಿದರೆ ನಾನು ಇಂಗ್ಲೆಂಡ್ ತಂಡದ ಜೆರ್ಸಿ ತೊಡುತ್ತೇನೆ’ ಎಂದು.

ವಾರ್ನ್ ಅವರ ಈ ಸವಾಲನ್ನು ಸಂತೋಷದಿಂದಲೇ ಗಂಗೂಲಿ ಸ್ವೀಕರಿಸಿದ್ದಾರೆ. ಜೂನ್ 10ರಂದು ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು, ಯಾರು ಯಾವ ತಂಡದ ಜೆರ್ಸಿ ಧರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Leave a Reply