ಕೋಲಾರದ ನಂದಿನಿ- ಕಾಶ್ಮೀರದ ಬಿಲಾಲ್ ಮೊಹಿದ್ದೀನ್… ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿನ ಯಶೋಗಾಥೆಗಳೇನು?

ಡಿಜಿಟಲ್ ಕನ್ನಡ ಟೀಮ್:

2016ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಕೋಲಾರದ ನಂದಿನಿ ಕೆ.ಆರ್ ಅಗ್ರ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಪ್ರತಿನಿತ್ಯ ಹಿಂಸಾಚಾರದಿಂದಲೇ ಸುದ್ದಿಯಾಗುವ ಜಮ್ಮು ಕಾಶ್ಮೀರದಿಂದಲೂ ಈ ಬಾರಿ 14 ಮಂದಿ ನಾಗರೀಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದು ಗಮನಾರ್ಹ ಸಂಗತಿ.

ಬುಧವಾರ ಪ್ರಕಟಗೊಂಡ ಫಲಿತಾಂಶದಲ್ಲಿ 846 ಪುರುಷರು ಹಾಗೂ 253 ಮಹಿಳೆಯರು ಸೇರಿದಂತೆ ಒಟ್ಟು 1,099 ಮಂದಿ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಆ ಪೈಕಿ 180 ಮಂದಿ ಐಎಎಸ್, 150 ಮಂದಿ ಐಪಿಎಸ್, 45 ಮಂದಿ ಐಎಫ್ಎಸ್ ಹಾಗೂ 834 ಮಂದಿ ಎ ಮತ್ತು ಬಿ ಗುಂಪಿನ ಕೇಂದ್ರ ಸೇವೆಗೆ ಶಿಫಾರಸ್ಸುಗೊಂಡಿದ್ದಾರೆ. ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯ ಯಶೋಗಾಥೆಗಳನ್ನು ನೋಡುವುದಾದರೆ…

ಕೋಲಾರ ಮೂಲದ ನಂದಿನಿ ಕೆ.ಆರ್ ಈ ಬಾರಿ ದೇಶಕ್ಕೆ ನಂಬರ್ ಒನ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಐಆರ್ ಎಸ್ ಅಧಿಕಾರಿಯಾಗಿರುವ ನಂದಿನಿ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಸಿವಿಲ್ ಇಂಜಿನೀಯರ್ ಪದವಿ ಪಡೆದ ನಂದಿನಿ, ಎರಡನೇ ಪ್ರಯತ್ನದಲ್ಲಿ ಐಆರ್ ಎಸ್ ಗೆ ಸೇರ್ಪಡೆಗೊಂಡಿದ್ದರು.

ನಂದಿನಿ ತಮ್ಮ ಮೊದಲ ಹಾಗೂ ಮೂರನೇ ಪ್ರಯತ್ನದಲ್ಲಿ ಪ್ರಿಲಿಮನರಿ ಪರೀಕ್ಷೆಯನ್ನು ಪಾಸ್ ಮಾಡುವಲ್ಲಿ ವಿಫಲರಾಗಿದ್ದರು. ಮೂರನೇ ಪ್ರಯತ್ನದ ವೇಳೆ ಪರೀಕ್ಷೆಗೂ ಮುನ್ನ ಡೆಂಗ್ಯುಗೆ ಒಳಗಾದ ಪರಿಣಾಮ ಪ್ರಿಲಿಮನರಿ ಪರೀಕ್ಷೆಯನ್ನು ಪಾಸ್ ಮಾಡಲು ಸಾಧ್ಯವಾಗಲಿಲ್ಲ. ಈಗ ನಾಲ್ಕನೇ ಪ್ರಯತ್ನದಲ್ಲಿ ಐಎಎಸ್ ಪಾಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಅವರು ನೀಡಿರುವ ಪ್ರತಿಕ್ರಿಯೆ ಹೀಗಿದೆ… ‘ಆರಂಭಿಕ ಹಂತಗಳಲ್ಲಿ ನನ್ನ ಪರಿಶ್ರಮ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಈ ಬಾರಿ ಪ್ರಯತ್ನಿಸುವಾಗ ಉತ್ತಮ ಪರಿಶ್ರಮ ಹಾಕಿದ್ದೆ. ಈ ಪರಿಶ್ರಮವೇ ಇಂದು ದೇಶಕ್ಕೆ ಮೊದಲ ಸ್ಥಾನ ತಂದುಕೊಟ್ಟಿದೆ. ಈ ಬಾರಿಯ ಪ್ರಯತ್ನದಲ್ಲಿ ನಾನು ಯಶಸ್ವಿಯಾಗುವ ನಂಬಿಕೆ ಇತ್ತು. ಆದರೆ ಅಗ್ರ ಸ್ಥಾನ ಪಡೆದಿರುವುದು ಸಂತೋಷವನ್ನು ಹೆಚ್ಚಿಸಿದೆ.’

ಹಿಂದುಳಿದ ವರ್ಗಕ್ಕೆ ಸೇರಿರುವ ನಂದಿನಿ ಮೊದಲ ಸ್ಥಾನ ಪಡೆಯುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಕಳೆದ ಬಾರಿಯ ಪರೀಕ್ಷೆಯಲ್ಲೂ ಟೀನಾ ದಾಬಿ ಎಂಬಾಕೆ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರು. ಈ ಬಾರಿಯ ಜಾತಿವಾರು ಫಲಿತಾಂಶ ನೋಡಿದರೆ, 500 ಮಂದಿ ಅಭ್ಯರ್ಥಿಗಳು ಸಾಮಾನ್ಯ ವರ್ಗ, 347 ಒಬಿಸಿ, 163 ಎಸ್ಸಿ ಹಾಗೂ 89 ಎಸ್ಟಿ ವರ್ಗಕ್ಕೆ ಸೇರಿದ್ದಾರೆ. ಹಿಂದುಳಿದ ಸಮುದಾಯಗಳ ಅಭ್ಯರ್ಥಿಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಯಶಸ್ವಿಯಾಗುತ್ತಿರುವುದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆಯಾಗಿದೆ. ಇನ್ನು ಕಳೆದ ಮೂರು ಬಾರಿಯ ಪರೀಕ್ಷೆಗಳಲ್ಲೂ ಮಹಿಳೆಯರೆ ನಂಬರ್ ಒನ್ ಸ್ಥಾನ ಪಡೆದಿರುವುದು ಗಮನಾರ್ಹ ಸಂಗತಿ. ಆ ಪೈಕಿ ಇರಾ ಸಿಂಘಲ್ (2014), ಟೀನಾ ದಾಬಿ (2015) ಹಾಗೂ ನಂದಿನಿ (2016). ಈ ಬಾರಿ ನಂದಿನಿಯ ನಂತರ ಅಮೃತಸರದ ಅನ್ಮೋಲ್ ಶೇರ್ ಸಿಂಗ್ ಬೇಡಿ ದ್ವಿತಿಯ ಹಾಗೂ ರೊನಂಕಿಯ ಗೋಪಾಲಕೃಷ್ಣ ತೃತೀಯ ಸ್ಥಾನ ಪಡೆದಿದ್ದಾರೆ.

ಇವೆಲ್ಲದರ ನಡುವೆ ಈ ಫಲಿತಾಂಶದಲ್ಲಿ ಗಮನ ಸೆಳೆಯುವ ಮತ್ತೊಂದು ಅಂಶ ಎಂದರೆ ಅದು ಜಮ್ಮು ಕಾಶ್ಮೀರ. ಪ್ರತಿನಿತ್ಯದ ಹಿಂಸಾಚಾರದ ಸುದ್ದಿಗಳನ್ನು ನೋಡುತ್ತಿರುವಾಗ ಕಣಿವೆ ರಾಜ್ಯ ಭಾರತದಿಂದ ವಿಮುಖವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಈ ರಾಜ್ಯದಿಂದ 14 ಮಂದಿ ಲೋಕಸೇವಾ ಆಯೋಗಕ್ಕೆ ಸೇರ್ಪಡೆಯಾಗಿರುವುದು ಉತ್ತಮ ಬೆಳವಣಿಗೆ.

14 ಅಭ್ಯರ್ಥಿಗಳ ಪೈಕಿ 31 ವರ್ಷದ ಬಿಲಾಲ್ ಮೊಹಿದ್ದೀನ್ ದೇಶಕ್ಕೆ 10ನೇ ಸ್ಥಾನ ಪಡೆದಿದ್ದಾರೆ. 2012ರಲ್ಲಿ ಕಾಶ್ಮೀರ ನಾಗರೀಕ ಸೇವೆಯಲ್ಲಿ 15ನೇ ಸ್ಥಾನ ಪಡೆದಿದ್ದ ಮೊಹಿದ್ದೀನ್, ಎರಡು ವರ್ಷಗಳ ನಂತರ ಐಎಫ್ಎಸ್ ಅಧಿಕಾರಿಯಾಗಿ ಲಖನೌನಲ್ಲಿ ಸೇವೆಗೆ ನಿಯೋಜಿತರಾಗಿದ್ದರು.

ಮೊಹಿದ್ದೀನ್ ಸಹ ನಾಲ್ಕನೇ ಪ್ರಯತ್ನದಲ್ಲಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಇವರ ಕುಟುಂಬಸ್ಥರೂ ಸಹ ನಾಗರೀಕ ಸೇವೆ ಅಧಿಕಾರಿಗಳಾಗಿದ್ದಾರೆ. ಮೊಹಿದ್ದೀನ್ ತಂದೆ ಕಾಶ್ಮೀರ ಆಡಳಿತ ಸೇವೆಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಇನ್ನು ಇವರ ಪತ್ನಿ ಕರ್ನಾಟಕದಲ್ಲಿ ಕೆಎಎಸ್ ಅಧಿಕಾರಿಯಾಗಿರುವುದು ಮತ್ತೊಂದು ವಿಶೇಷವಾಗಿದ್ದು, ಪತ್ನಿಯ ಸ್ಫೂರ್ತಿಯೇ ಈ ಯಶಸ್ಸಿನಲ್ಲಿ ಮಹತ್ವದ ಪಾತ್ರವಿದೆ ಎಂದು ಮೊಹಿದ್ದೀನ್ ಹೇಳಿಕೊಂಡಿದ್ದಾರೆ.

Leave a Reply