ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹ್ಯಾಕರ್ ಗಳ ಕೈವಾಡ: ಪುಟಿನ್ ಪರೋಕ್ಷ ಒಪ್ಪಿಗೆ

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹ್ಯಾಕ್ ಮಾಡುವ ಮೂಲಕ ಹಿಲರಿ ಕ್ಲಿಂಟನ್ ಅವರಿಗೆ ಹಿನ್ನಡೆಯಾಗುವಂತೆ ಮಾಡಿದ್ದಾರೆ ಎಂಬ ಆರೋಪವನ್ನು ನಿರಾಕರಿಸುತ್ತಿದ್ದ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್, ಈಗ ರಾಗ ಬದಲಿಸಿದ್ದಾರೆ. ‘ರಾಷ್ಟ್ರಪ್ರೇಮದ ಮನೋಭಾವ’ ಹೊಂದಿರುವ ಕೆಲವು ರಷ್ಯಾ ಹ್ಯಾಕರ್ ಗಳು ಕಳೆದ ವರ್ಷದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಕೈಚಳಕ ತೋರಿರಬಹುದು ಎಂದು ಪುಟಿನ್ ಹೇಳಿದ್ದಾರೆ. ಆ ಮೂಲಕ ಪುಟಿನ್ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಆದರೆ, ಈ ಹ್ಯಾಕಿಂಗ್ ನಲ್ಲಿ ರಷ್ಯಾ ಸರ್ಕಾರದ ಯಾವುದೇ ಪಾತ್ರವಹಿಸಿಲ್ಲ ಎಂದು ಪುಟೀನ್ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗೆ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ತಮ್ಮ ರಾಷ್ಟ್ರದ ಹ್ಯಾಕರ್ ಗಳ ಕೈವಾಡದ ಸಾಧ್ಯತೆಯನ್ನು ಒಪ್ಪಿಕೊಂಡಿರುವ ಪುಟಿನ್, ಭವಿಷ್ಯದಲ್ಲಿ ನಡೆಯಲಿರುವ ಇತರೆ ದೇಶಗಳ ಚುನಾವಣೆಯಲ್ಲೂ ಈ ಹ್ಯಾಕರ್ ಗಳ ದಾಳಿ ಕುರಿತಾಗಿ ಎಚ್ಚರಿಕೆ ರವಾನಿಸಿದ್ದಾರೆ. ಮುಂಬರುವ ಜರ್ಮನಿ ಚುನಾವಣೆಯಲ್ಲೂ ಈ ಹ್ಯಾಕರ್ಸ್ ಗಳು ದಾಳಿ ನಡೆಯಬಹುದಾದ ಸಾಧ್ಯತೆ ಹೆಚ್ಚಿದೆ ಎಂದು ಪುಟಿನ್ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಅವರು ಹೇಳಿರುವುದಿಷ್ಟು…

‘ಮುಂಬರುವ ಜರ್ಮನಿ ಚುನಾವಣೆಯಲ್ಲೂ ಈ ಹ್ಯಾಕರ್ ಗಳು ವಿದೇಶಿ ಮತವನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ. ಈ ಹ್ಯಾಕರ್ಸ್ ಗಳು ಕಲಾವಿದರಂತೆ, ಅವರು ಬೆಳಗ್ಗೆ ಎದ್ದಾಗ ಯಾವ ಮೂಡ್ ನಲ್ಲಿ ಇರುತ್ತಾರೋ ಆ ರೀತಿ ತಮ್ಮ ಟಾರ್ಗೆಟ್ ಅನ್ನು ಹುಡುಕಿಕೊಳ್ಳುತ್ತಾರೆ. ಒಂದು ವೇಳೆ ಯೂರೋಪ್ ಹಾಗೂ ಅಮೆರಿಕಗಳಲ್ಲಿ ಈ ರೀತಿಯ ಹ್ಯಾಕ್ ನಡೆದರೆ ಬದಲಿ ಚುನಾವಣೆ ಫಲಿತಾಂಶಕ್ಕೆ ಅವಕಾಶ ಇರುವುದಿಲ್ಲ.

ಇವರು ರಾಷ್ಟ್ರ ರಾಷ್ಟ್ರಗಳ ನಡುವಣ ಸಂಬಂಧದ ಕುರಿತ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿರುತ್ತಾರೆ. ಈ ಬೆಳವಣಿಗೆಗಳ ಆಧಾರದ ಮೇಲೆ ಹ್ಯಾಕ್ ಮಾಡಲು ನಿರ್ಧರಿಸುತ್ತಾರೆ. ದೇಶಭಕ್ತಿಯ ಮನೋಭಾವ ಹೊಂದಿರುವ ಅವರು ರಷ್ಯಾ ವಿರುದ್ಧ ಯಾರೇ ಮಾತನಾಡಿದರೂ ಅಂತಹ ದೇಶಗಳ ವಿರುದ್ಧ ತಮಗೆ ಸರಿ ಅನಿಸಿದ ರೀತಿ ಹ್ಯಾಕ್ ಮಾಡಿ ದಾಳಿ ನಡೆಸುತ್ತಾರೆ.’

Leave a Reply