ಪಕ್ಷದ ನಾಯಕರ ಮೇಲಿನ ಕೋಪ ಅಧಿಕಾರಿಗಳ ಮೇಲೆ ತೋರಿದರೇ ಡಿ.ಕೆ.ಶಿವಕುಮಾರ್?

ಡಿಜಿಟಲ್ ಕನ್ನಡ ಟೀಮ್:

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಾದಿ ಕೈತಪ್ಪಿದ ಅಸಮಾಧಾನದಲ್ಲಿರುವ ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ್, ಪಕ್ಷದ ಮುಖಂಡರ ಮೇಲಿರುವ ಎಲ್ಲಾ ಕೋಪವನ್ನು ಇಲಾಖೆಯ ಅಧಿಕಾರಿಗಳ ಮೇಲೆ ತೋರಿಸಿದ್ದಾರೆ.

ಏಕಾಏಕಿ ಇಂದು ಇಲಾಖೆಯ ಅಧಿಕಾರಿಗಳ ಸಭೆ ಕರೆದ ಶಿವಕುಮಾರ್ ಅಧಿಕಾರಿದಳನ್ನು ತರಾಟೆಗೆ ತೆಗೆದುಕೊಂಡರು. ‘ಜನರ ಸಮಸ್ಯೆಗಳಿಗೆ ನೀವು ಸ್ಪಂದಿಸುತ್ತಿಲ್ಲ. ಯಾವ ಮಟ್ಟಕ್ಕೆ ತೆರಳಿದ್ದೀರಿ ಎಂದರೆ, ಮುಖ್ಯಮಂತ್ರಿಯವರು ನಡೆಸುವ ಪತ್ರಿಕಾಗೋಷ್ಠಿಯಲ್ಲೇ ಹತ್ತು ನಿಮಿಷಗಳ ಕಾಲ ವಿದ್ಯುತ್ ಕಡಿತ ಮಾಡುತ್ತೀರಿ. ನನಗೆ ಅಪಮಾನ ಮಾಡಲೆಂದೇ ಇಂತಹ ಕೆಲಸ ಮಾಡುತ್ತೀರಾ, ಸಾರ್ವಜನಿಕರಿಂದ ಎಷ್ಟು ದೂರುಗಳು ಬಂದಿವೆ. ಅವುಗಳನ್ನು ಹೇಗೆ ಬಗೆಹರಿಸಿದ್ದೀರಿ. ದಾಖಲೆ ಸಮೇತ ನೀಡಿ.

ನೀವೂ ಸಾಕು, ನಿಮ್ಮ  ಇಲಾಖೆಯೂ ಸಾಕು ಎಂದು ವ್ಯಂಗ್ಯವಾಗಿಯೇ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಡಿ.ಕೆ ಶಿವಕುಮಾರ್ ಅವರ ಈ ವ್ಯಂಗ್ಯ ಯಾರಿಗೆ ಮುಟ್ಟಬೇಕು. ಅವರಿಗೆ ಮುಟ್ಟಲೆಂದೇ ಸಚಿವರು ತಮ್ಮ ಅಸಮಾಧಾನವನ್ನು ಅಧಿಕಾರಿಗಳ ಮುಂದೆ ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ದೆಹಲಿಯಿಂದ ಹಿಂತಿರುಗಿದ ನಂತರ ಮೂರು ದಿನಗಳ ಕಾಲ ಅಜ್ಞಾತವಾಸದಲ್ಲಿದ್ದ ಶಿವಕುಮಾರ್ ಇಂದು ಏಕಾಏಕಿ ತಮ್ಮ ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Leave a Reply