ಕಾಬುಲ್ ದಾಳಿ ಹಿಂದೆ ಪಾಕ್ ಪೋಷಿತ ಉಗ್ರರ ಕೈವಾಡ- ಪಾಕಿಸ್ತಾನ ಜತೆಗಿನ ಕ್ರಿಕೆಟ್ ಸರಣಿ ರದ್ದುಗೊಳಿಸಿದ ಅಫ್ಘಾನಿಸ್ತಾನ, ಇದರಿಂದಾದ್ರು ಪಾಠ ಕಲಿಯುತ್ತಾ ಬಿಸಿಸಿಐ?

ಡಿಜಿಟಲ್ ಕನ್ನಡ ಟೀಮ್:

ಮೊನ್ನೆಯಷ್ಟೇ ಅಫ್ಘನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ಭಾರಿ ಪ್ರಮಾಣದ ಬಾಂಬ್ ಸ್ಫೋಟಗೊಂಡಿತ್ತು. ಅಫ್ಘಾನಿಸ್ತಾನದ ಗುಪ್ತಚರ ಇಲಾಖೆ ಈ ದಾಳಿಯ ರೂವಾರಿಯಾದ ಉಗ್ರರಿಗೆ ಪಾಕಿಸ್ತಾನದ ಬೆಂಬಲವಿದೆ ಎಂದು ಆರೋಪ ಮಾಡಿದೆ. ಪಾಕಿಸ್ತಾನದ ಈ ಕುತಂತ್ರ ನೀತಿಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಅಫ್ಘಾನಿಸ್ತಾನ, ಪಾಕಿಸ್ತಾನ ಜತೆಗೆ ನಿಗದಿಯಾಗಿದ್ದ ಟಿ20 ಸರಣಿಗಳನ್ನು ರದ್ದುಗೊಳಿಸಿದೆ.

ಈ ನಿರ್ಧಾರ ಅಫ್ಘನಿಸ್ತಾನ ಕ್ರಿಕೆಟ್ ಪಾಲಿಗೆ ಮಹತ್ವದ್ದಾಗಿದೆ. ಕಾರಣ, ವಿಶ್ವ ಕ್ರಿಕೆಟ್ ನಲ್ಲಿ ಈಗಷ್ಟೇ ಕಾಲಿಡುತ್ತಿರುವ ಅಫ್ಘಾನಿಸ್ತಾನಕ್ಕೆ ಹೆಚ್ಚು ಹೆಚ್ಚು ಅಂತಾರಾಷ್ಟ್ರೀಯ ಟೂರ್ನಿಗಳನ್ನಾಡುವ ಅಗತ್ಯವಿದೆ. ಇಂತಹ ಪರಿಸ್ಥಿತಿಯಲ್ಲೂ ತನ್ನ ದೇಶಕ್ಕೆ ಪಾಕಿಸ್ತಾನ ಬಗೆದ ದ್ರೋಹಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ಈ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ.

ಪದೇ ಪದೇ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿರುವ ಬಗ್ಗೆ ಅಫ್ಘಾನಿಸ್ತಾನವು ಪಾಕಿಸ್ತಾನಕ್ಕೆ ಸಾಕಷ್ಟು ಬಾರಿ ಎಚ್ಚರಿಕೆ ನೀಡುತ್ತಲೇ ಬಂದಿತ್ತು. ಈ ವಿಚಾರವಾಗಿ ಉಭಯ ದೇಶಗಳ ನಡುವಣ ಬಿರುಕನ್ನು ಸರಿ ಪಡಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಕ್ರಿಕೆಟ್ ಸರಣಿಯನ್ನಾಡಲು ಒಪ್ಪಿದ್ದವು. ಈ ಹಿಂದೆ ನಿಗದಿಯಾಗಿದ್ದ ಕ್ರಿಕೆಟ್ ಸರಣಿಯು ಇದೇ ವರ್ಷಾಂತ್ಯದಲ್ಲಿ ನಡೆಯಬೇಕಿತ್ತು. ಮೊದಲು ಪಾಕಿಸ್ತಾನ ತಂಡ ಕಾಬುಲ್ ಗೆ ತೆರಳಿ ಅಲ್ಲಿ ಟಿ20 ಸರಣಿಯನ್ನಾಡಬೇಕಿತ್ತು. ಆ ನಂತರ ಅಫ್ಘಾನಿಸ್ತಾನ ತಂಡ ಪಾಕಿಸ್ತಾನ ಪ್ರವಾಸ ಮಾಡಿ ಪಾಕ್ ನೆಲದಲ್ಲಿ ಟಿ20 ಸರಣಿಯನ್ನಾಡಬೆಕಿತ್ತು.

ಆದರೆ ಈಗ ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಯಿಂದ ಕುದಿಯುತ್ತಿರುವ ಅಫ್ಘಾನಿಸ್ತಾನ ನಿಮ್ಮ ಹಾಗೂ ನಿಮ್ಮ ಜತೆಗಿನ ಕ್ರಿಕೆಟ್ ಸಹವಾಸ ಬೇಡ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸಿದೆ.

ಅಫ್ಘಾನಿಸ್ತಾನದ ಈ ದಿಟ್ಟ ನಿರ್ಧಾರವನ್ನು ನೋಡಿ ಬಿಸಿಸಿಐ ಪಾಠ ಕಲಿಯುವ ಅಗತ್ಯತೆ ಇದೆ. ಕಾರಣ, ನಾಲ್ಕು ದಿನಗಳ ಹಿಂದಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಕಿಸ್ತಾನ ಜತೆಗಿನ ಕ್ರಿಕೆಟ್ ಸರಣಿಯನ್ನು ಕುದುರಿಸುವ ಸಲುವಾಗಿ ಪಿಸಿಬಿ ಜತೆ ಚರ್ಚೆ ನಡೆಸಲು ಉತ್ಸುಕರಾಗಿದ್ದ ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ದುಬೈಗೆ ತೆರಳಿದ್ದರು. ಬಿಸಿಸಿಐನ ಈ ನಡೆದೆ ಕೇಂದ್ರ ಸರ್ಕಾರ ಸೇರಿದಂತೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದರ ಕುರಿತ ವರದಿಯನ್ನು ಡಿಜಿಟಲ್ ಕನ್ನಡದಲ್ಲಿ ನೀವು ಓದಿದ್ದಿರಿ.

ದೇಶದ ಹಿತಾಸಕ್ತಿಯ ಮುಂದೆ ಇನ್ಯಾವುದೇ ಅಂಶ ದೊಡ್ಡದಲ್ಲ ಎಂದು ಅಫ್ಘಾನಿಸ್ತಾನ ತನ್ನ ನಿರ್ಧಾರದ ಮೂಲಕ ಸಾಬೀತುಪಡಿಸಿದೆ. ಹೀಗಾಗಿ ಹಣಕಾಸಿನ ಲಾಭ ನಷ್ಟದ ಬಗ್ಗೆ ಯೋಚಿಸುವ ಬಿಸಿಸಿಐ ಹಣಕ್ಕಿಂತ ದೇಶವೇ ಮುಖ್ಯ ಎಂಬ ಅಂಶವನ್ನು ಅಫ್ಘಾನಿಸ್ತಾನ ನೋಡಿ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ.

Leave a Reply