ಕೃಷಿ ಸಚಿವ ಕೃಷ್ಣಭೈರೇಗೌಡರ ಜಿಎಸ್ಟಿ ಪರ ಮಾತುಗಳೇಕೆ ನೆಟ್ಟಿಗರ ಹೃದಯ ಗೆಲ್ಲುತ್ತಿವೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್

ಜಿಎಸ್ಟಿ- ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಇದೀಗ ದೇಶವೆಲಲ್ ಆ ವ್ಯವಸ್ಥೆಗೆ ಒಳಪಡುವ ಸಮಯ. ದೇಶಕ್ಕೊಂದು ಏಕರೂಪ ತೆರಿಗೆ ವ್ಯವಸ್ಥೆ ಇರಬೇಕು ಎಂಬುದರ ಬಗ್ಗೆ ಬಿಜೆಪಿ- ಕಾಂಗ್ರೆಸ್ ಯಾವುದಕ್ಕೂ ವಿರೋಧವಿಲ್ಲವಾಗಿತ್ತಾದರೂ, ಕಾಯ್ದೆ ವ್ಯವಸ್ಥೆಯ ವಿವರಗಳ ಬಗ್ಗೆ ತಕರಾರುಗಳಿದ್ದವು. ಕೊನೆಗೂ ಮೋದಿ ಸರ್ಕಾರಕ್ಕೆ ಶ್ರೇಯಸ್ಸು ತಂದುಕೊಡಬಹುದಾದ ಈ ಕಾರ್ಯಕ್ಕೆ, ಈ ಮೊದಲೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಹ ಬೆಂಬಲ ನೀಡಿತ್ತು ಎಂಬುದು ಉಲ್ಲೇಖಾರ್ಹ.

ಜಿಎಸ್ಟಿ ಸಮಿತಿಯಲ್ಲಿ ರಾಜ್ಯದ ಪರವಾಗಿ ಪ್ರತಿನಿಧಿಯಾಗಿದ್ದು, ಇದರ ಎಲ್ಲ ಚರ್ಚೆಯ ಹಂತಗಳಲ್ಲಿ ಭಾಗಿಯಾಗಿದ್ದ ರಾಜ್ಯದ ಕೃಷಿ ಸಚಿವ ಕೃಷ್ಣಭೈರೇಗೌಡರು ಜಿಎಸ್ಟಿ ಪರವಾಗಿ ಉದ್ಯಮ ಗುಂಪುಗಳೆದುರು ಮಾಡಿರುವ ಆಂಗ್ಲ ಭಾಷಣ ಭಾರಿ ಪ್ರಶಂಸೆಗೆ ಒಳಗಾಗುತ್ತಿದೆ. ಇದನ್ನು ಸಚಿವರು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದರು. ತೆರಿಗೆ ವ್ಯವಸ್ಥೆ ಸುಧಾರಣೆಯಂಥ ಜಟಿಲ ವಿಷಯವನ್ನು ರಾಜಕೀಯದಿಂದ ಆಚೆ ಇಟ್ಟು ಕೃಷ್ಣಭೈರೇಗೌಡರು ಮಾಡಿರುವ ಸಮಚಿತ್ತದ ವಿಶ್ಲೇಷಣೆ ಪಕ್ಷಾತೀತವಾಗಿ ನೆಟ್ಟಿಗರ ಮನಗೆಲ್ಲುತ್ತಿದೆ.

(ವಿಡಿಯೋ ಕೃಪೆ- ಕೃಷ್ಣಭೈರೇಗೌಡರ ಫೇಸ್ಬುಕ್ ಪುಟ)

ಅವರ ಮಾತಿನ ಪ್ರಮುಖಾಂಶಗಳಿವು.

  • ಜಿಎಸ್ಟಿ ಸಮಿತಿಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ಮಾಡಿಕೊಟ್ಟ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಆತಂಕಗಳಿಗೆ ಉತ್ತರಿಸುತ್ತ ಜಿಎಸ್ಟಿ ಅಂಗೀಕಾರಕ್ಕೆ ದುಡಿದ ದೇಶದ ವಿತ್ತಮಂತ್ರಿ ಅರುಣ್ ಜೇಟ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುವೆ. ಹಲವು ರಾಜ್ಯಗಳ ವಿತ್ತ ಸಚಿವರು ಹಾಗೂ ಅಧಿಕಾರಿಗಳ ಉಪಸ್ಥಿತಿ ಮತ್ತು ವಾಗ್ವಾದಗಳಿದ್ದ ಜಿಎಸ್ಟಿ ಸಮಿತಿಯಲ್ಲಿ ನಾನು ಕಲಿಯುವುದಕ್ಕೆ ಬಹಳ ವಿಷಯಗಳಿದ್ದವು. ಇದು ನನ್ನ ಸೌಭಾಗ್ಯ.
  • ದೇಶಕ್ಕೊಂದು ಏಕರೂಪದ ತೆರಿಗೆ ಇರಬೇಕು, ತೆರಿಗೆ ತುಂಬುವಲ್ಲಿನ ಸಂಕೀರ್ಣತೆ-ಜಟಿಲತೆಗಳು ಕಡಿಮೆಯಾಗಬೇಕು ಎಂಬುದೇ ಜಿಎಸ್ಟಿ ಸಮಿತಿಯ ಒಟ್ಟಾರೆ ಪ್ರಯತ್ನವೇ ಹೊರತು, ಇಲ್ಲಿ ಯಾರನ್ನೋ ಗುರಿಯಾಗಿಸಿಕೊಳ್ಳುವ ಯಾವ ಇರಾದೆಗಳೂ ಕೆಲಸ ಮಾಡಿಲ್ಲ.
  • ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿ ಹಲವು ಬಾರಿ ವಸ್ತು/ಸೇವೆಗಳು ತೆರಿಗೆ ವ್ಯಾಪ್ತಿಗೆ ಬರುತ್ತಿದ್ದದನ್ನು, ಇಲ್ಲಿದ್ದ ಅಸಮಾನತೆಯನ್ನು ಹೊಸ ವ್ಯವಸ್ಥೆ ತೊಡೆದುಹಾಕಿದೆ. ಅರೆ… ತೆರಿಗೆ ಕಡಿಮೆಗೊಳಿಸಿದರೆ ಸರ್ಕಾರಗಳಿಗೆಲ್ಲಿಯ ಆದಾಯ? ಹೀಗಾಗಿಯೇ ಇವರೇನೋ ಈ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ನಿಮಗನಿಸಬಹುದು. ಖಂಡಿತ ನಮ್ಮ ಆದಾಯ ಹೆಚ್ಚಳಕ್ಕೂ ನಾವು ಗುರಿಗಳನ್ನು ಹಾಕಿಕೊಂಡಿದ್ದೇವೆ. ಆದರೆ ತೆರಿಗೆ ದರವನ್ನು ಹೆಚ್ಚಿಸುತ್ತ ಹೋಗುವುದರ ಮಾರ್ಗದಲ್ಲಲ್ಲ, ಬದಲಿಗೆ ತೆರಿಗೆ ಪದ್ಧತಿಯನ್ನು ಸರಳಗೊಳಿಸಿದಾಗ ತೆರಿಗೆ ತುಂಬುವವರ ಪ್ರಮಾಣ ಹೆಚ್ಚಾಗುತ್ತದೆ. ಹೀಗೆ ತೆರಿಗೆ ಸರಳೀಕರಣದ ಮೂಲಕ ತೆರಿಗೆ ವ್ಯಾಪ್ತಿ ಹಿಗ್ಗಿಸಿಕೊಳ್ಳುವುದರಲ್ಲಿ ಜಿಎಸ್ಟಿ ನಿರ್ಣಾಯಕ.
  • ಜಿಎಸ್ಟಿ ವಿಚಾರದಲ್ಲಿ ತುಂಬ ತಿಳಿವಳಿಕಸ್ಥರೂ ಮಾಧ್ಯಮಗಳ ಮೂಲಕ ಕೆಲವು ಆತಂಕಗಳನ್ನು ಎಬ್ಬಿಸುತ್ತಿದ್ದಾರೆ. ಉದಾಹರಣೆಗೆ ಇದರಿಂದ ರೆಸ್ಟೊರೆಂಟ್ ಉದ್ಯಮಗಳಿಗೆ ಹೆಚ್ಚಿನ ತೆರಿಗೆ ಬೀಳುತ್ತದೆ ಅನ್ನೋದು. ಆದರೆ 50 ಲಕ್ಷ ರುಪಾಯಿಗಳಿಗಿಂತ ಕಡಿಮೆ ವಹಿವಾಟಿನ ರೆಸ್ಟೊರೆಂಟ್ ಗಳಿಗೆ ಪರಿಹಾರ ಮೊತ್ತ ನೀಡುವುದೂ ಕಾಯ್ದೆಯಲ್ಲಿ ಉಲ್ಲೇಖಿತವಾಗಿದೆ. ಶೇ. 90ರಷ್ಟು ಈ ವಲಯದವರಿಗೆ ಅನುಕೂಲವಾಗುವ ಕಾಯ್ದೆಯ ಈ ಅಂಶವನ್ನು ಹೇಳದೇಹೋದರೆ ಹೇಗೆ?
  • ಪ್ರತಿ ವಿಷಯವನ್ನು ವಿಭಾಗಿಸಿ ಸೂಕ್ಷ್ಮದರ್ಶಕ ಹಿಡಿದು ನೋಡಲುಹೋದಾಗ ಕೆಲವು ಕುಂದುಗಳು ಕಾಣಬಹುದು. ಆದರೆ ಇಷ್ಟೆಲ್ಲ ಸಂಕೀರ್ಣತೆಯ ಈ ದೇಶವನ್ನು ಗಮನದಲ್ಲಿರಿಸಿಕೊಂಡು ನೀವು ದೊಡ್ಡ ಚಿತ್ರಣವೊಂದನ್ನು ಗಮನಿಸಿದ್ದೇ ಆದರೆ ಜಿಎಸ್ಟಿ ಒಂದು ಪ್ರಗತಿಪರ ಹೆಜ್ಜೆಯಾಗಿ ತೋರುವುದು ನಿಸ್ಸಂಶಯ. ಟೀಕೆಗಳನ್ನೂ ಮಾಡಿ. ಆದರೆ ವಾಸ್ತವಾಂಶಗಳನ್ನೆಲ್ಲ ಒಟ್ಟಿರಿಸಿಕೊಂಡು ಮಾಡಿ. ಕರ್ನಾಟಕದ ಸಂದರ್ಭದಲ್ಲೇ ಹೇಳುವುದಾದರೆ ಇಲ್ಲಿನ ವಾತಾನೂಕೂಲಿ ಹಾಗೂ ವಾತಾನಕೂಲ ರಹಿತ ರೆಸ್ಟೊರೆಂಟ್ ಎಷ್ಟಿವೆ ಎಂಬ ಅಂಕಿಅಂಶಗಳನ್ನು ತೆಗೆದುಕೊಂಡೇ ಕಾಯ್ದೆ ರೂಪಿಸುವಾಗ ಚರ್ಚೆ- ಸಲಹೆ ನೀಡಲಾಗಿದೆ.
  • ಜಿಎಸ್ಟಿಯಲ್ಲಿ ತೆರಿಗೆ ದರಗಳು ಇನ್ನಷ್ಟು ಕಡಿಮೆ ಇರಬೇಕು ಎಂಬುದು ನಮ್ಮ ಆಶಯವೂ ಆಗಿತ್ತು. ಇದು ಸಾಧ್ಯವಾಗುವುದು ಯಾವಾಗೆಂದರೆ ತೆರಿಗೆ ಪದ್ಧತಿ ಸರಳಗೊಂಡು ಆ ಮೂಲಕ ಹೆಚ್ಚಿನವರು ತೆರಿಗೆಗೆ ಒಳಪಡಿಸಿಕೊಳ್ಳುವುದರಿಂದ. ಇದು ಸಾಧ್ಯವಾಗಿ ಮುಂಬರುವ ದಿನಗಳಲ್ಲಿ ವಸ್ತು-ಸೇವೆಗಳಿಗೆ ನಿಗದಿಪಡಿಸಿರುವ ತೆರಿಗೆ ದರವೂ ಇಳಿಯುತ್ತದೆ ಎಂಬ ಭರವಸೆ ಇದೆ. ಈ ಮನಸ್ಥಿತಿಯಿಂದ ಪ್ರತ್ಯಕ್ಷ ತೆರಿಗೆ ಸಂಗ್ರಹವೂ ಭವಿಷ್ಯದಲ್ಲಿ ಹೆಚ್ಚಲಿದೆ ಎನ್ನುವ ಭರವಸೆಯನ್ನೂ ಇಟ್ಟುಕೊಂಡಿದ್ದೇವೆ.

Leave a Reply