ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ನರಕ ದರ್ಶನ, ಬೇಜವಾಬ್ದಾರಿ ತೋರಿದ ಮೂವರಿಗೆ ಶಿಕ್ಷೆ

ಡಿಜಿಟಲ್ ಕನ್ನಡ ಟೀಮ್:

ಮೂರು ದಿನಗಳ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಟ್ರೆಚರ್ ವ್ಯವಸ್ಥೆ ನೀಡದ ಪರಿಣಾಮ ವಯಸ್ಸಾದ ರೋಗಿಯನ್ನು ಆತನ ಪತ್ನಿ ನೆಲದ ಮೇಲೆ ಮಲಗಿಸಿ ಧರಧರನೆ ಎಳಎದುಕೊಂಡು ಸಾಗಿದ ಅಮಾನವೀಯ ಘಟನೆ ನಡೆದಿರುವುದು ಇಂದು ಬೆಳಕಿಗೆ ಬಂದಿದೆ. ಶುಕ್ರವಾರ ಬೆಳಗ್ಗೆಯಿಂದಲೇ ಈ ಘಟನೆಯ ದೃಶ್ಯ ಮಾಧ್ಯಮಗಳಲ್ಲಿ ನಿರಂತರವಾಗಿ ಬಿತ್ತರವಾಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಯಿತು.

ಕೆಲವು ದಿನಗಳ ಹಿಂದೆ ಅಸ್ತಮಾ ಸೇರಿದಂತೆ ಅನಾರೋಗ್ಯದಿಂದಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಅಮೀರ್‌ ಸಾಬ್‌ ಎನ್ನುವವರಿಗೆ ವೈದ್ಯರು ಎಕ್ಸ್‌ರೇ ಮಾಡಿಸಲು ಸೂಚಿಸಿದ್ದರು. ಎಕ್ಸ್‌ರೇ ಕೇಂದ್ರಕ್ಕೆ ಇವರನ್ನು ಕರೆದೊಯ್ಯಲು ಸಿಬ್ಬಂದಿ ನೆರವು ಕೇಳಿದಾಗ ಯಾರೊಬ್ಬರು ನೆರವು ನೀಡಲಲ್ಲ. ಇದರಿಂದ ಬೇಸತ್ತ ಆತನ ಪತ್ನಿ ಪತ್ನಿ ಫಾಮಿದಾ ಹತಾಶರಾಗಿ ಬೇರೆ ದಾರಿ ಕಾಣದೆ ಪತಿ ಅಮೀರ್‌ ರನ್ನು ನೆಲದ ಮೇಲೆ ಎಳೆದೊಯ್ದಿದ್ದಾರೆ. ಈಕೆ ತನ್ನ ಪತಿಯನ್ನು ಎಳೆದೊಯ್ಯುವಾಗ ಆಸ್ಪತ್ರೆಯ ಯಾವುದೇ ಸಿಬ್ಬಂದಿ ಇವರ ನೆರವಿಗೆ ಬರಲೇ ಇಲ್ಲ.

ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಎಲ್ಲರಿಂದಲೂ ಟೀಕೆಗಳು ಬಂದವು. ಬಡವರಿಗಾಗಿ ನಿರ್ಮಾಣವಾಗಿರುವ ಸರ್ಕಾರಿ ಆಸ್ಪತ್ರೆಗಳಲ್ಲೇ ರೋಗಿಗಳ ಸ್ಥಿತಿ ಈಗಾದರೆ, ಅವರು ಯಾರ ಬಳಿ ಹೋಗಬೇಕು ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ರಮೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿಯಿಂದ ವರದಿ ತರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಘಟನೆಯನ್ನು ರಮೇಶ್ ಕುಮಾರ್ ಅವರು ಖಂಡಿಸಿದ್ದು, ಅದು ಹೀಗಿದೆ…

‘ಇದು ಸರ್ಕಾರಕ್ಕೆ ಶೋಭೆ ತರುವ ಸಂಗತಿಯಲ್ಲ. ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಈ ಘಟನೆ ನಡೆದಿರುವುದು, ಅಕ್ಷಮ್ಯ ಅಪರಾಧ. ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಶರಣುಪ್ರಕಾಶ್ ಪಾಟೀಲ್ ಜೊತೆ ಮಾತನಾಡಿದ್ದೇನೆ. ಈ ಘಟನೆ ಬಗ್ಗೆ ಕ್ಷಮೆ ಕೋರುತ್ತೇನೆ. ಪ್ರಧಾನ ಕಾರ್ಯದರ್ಶಿಯಿಂದ ವರದಿ ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವುದಿಲ್ಲ.’

ಆಸ್ಪತ್ರೆಯಲ್ಲಿ ರೋಗಿಯ ನೆರವಿಗೆ ಬರಲು ಬೇಜವಾಬ್ದಾರಿ ತೋರಿದ ಕಾರಣ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸ್ಟಾಫ್ ನರ್ಸ್‌ಗಳಾದ ಜ್ಯೋತಿ, ಚೈತ್ರಾ ಮತ್ತು ಡಿ ಗ್ರೂಪ್‌ ನೌಕರರಾದ ಸುವರ್ಣಮ್ಮ ಎಂಬುವವರನ್ನು ಅಮಾನತು ಮಾಡಿ ಆಸ್ಪತ್ರೆಯ ಡೀನ್‌ ಡಾ. ಸುಶೀಲ್‌ಕುಮಾರ್‌ ಆದೇಶ ನೀಡಿದ್ದಾರೆ.

Leave a Reply