ಅಂತ್ಯವಾಯ್ತು ಟೀಂ ಇಂಡಿಯಾ ಕೋಚ್ ಅರ್ಜಿ ಆಹ್ವಾನ ಅವಧಿ, ಈ ಬಾರಿ ರೇಸ್ ನಲ್ಲಿರೋರಾರು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ಕೋಚ್ ಹುದ್ದೆಗಾಗಿ ಬಿಸಿಸಿಐ ನೀಡಿದ್ದ ಅರ್ಜಿ ಆಹ್ವಾನ ಅವಧಿ ಮುಕ್ತಾಯಗೊಂಡಿದೆ. ಕಳೆದ ವರ್ಷ ಕೋಚ್ ಸ್ಥಾನದ ಆಕಾಂಕ್ಷಿಯಾಗಿದ್ದ ರವಿಶಾಸ್ತ್ರಿ ಈ ಬಾರಿ ಅರ್ಜಿ ಸಲ್ಲಿಸಿಲ್ಲ. ಇನ್ನು ಈ ಸ್ಥಾನವನ್ನು ಮಾಜಿ ನಾಯಕ ರಾಹುಲ್ ದ್ರಾವಿಡ್ ತುಂಬಬೇಕು ಎಂಬ ಕ್ರಿಕೆಟ್ ಪಂಡಿತರು ಹಾಗೂ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಈ ಹುದ್ದೆ ಅಲಂಕರಿಸಲು ಯಾರೆಲ್ಲಾ ಪೈಪೋಟಿ ನಡೆಸುತ್ತಿದ್ದಾರೆ ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ.

ಈ ತಿಂಗಳಾಂತ್ಯದಲ್ಲಿ ಅನಿಲ್ ಕುಂಬ್ಳೆ ಅವರ ಒಂದು ವರ್ಷದ ಅವಧಿ ಅಂತ್ಯಗೊಳ್ಳಲಿದ್ದು, ನಂತರ ತೆರವಾಗಲಿರುವ ಕೋಚ್ ಸ್ಥಾನವನ್ನು ತುಂಬಲು ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಆ ಪೈಕಿ ಪ್ರಮುಖವಾಗಿ ಕೇಳಿಬರುತ್ತಿರುವುದು ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ಟಾಮ್ ಮೂಡಿ.

ವಿರೇಂದ್ರ ಸೆಹ್ವಾಗ್ ಈಗಾಗಲೇ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮಾರ್ಗದರ್ಶನ ನೀಡಿರುವ ಅನುಭವ ಹೊಂದಿದ್ದಾರೆ. ಇತ್ತ ಸೆಹ್ವಾಗ್ ಗೆ ಪೈಪೋಟಿ ನೀಡುತ್ತಿರೋ ಟಾಮ್ ಮೂಡಿ ಕೋಚ್ ಆಗಿ ಅತ್ಯುತ್ತಮ ಅನುಭವ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀಲಂಕಾ ತಂಡದ ಕೋಚ್ ಆಗಿ ಕೆಲಸ ಮಾಡಿರುವ ಮೂಡಿ, ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಹಾಗೂ ಆಸ್ಟ್ರೇಲಿಯಾದ ಟಿ20 ಸರಣಿ ಬಿಗ್ ಬ್ಯಾಷ್ ನಲ್ಲೂ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಟೀಂ ಇಂಡಿಯಾ ಆಟಗಾರರೊಂದಿಗೆ ಬೇಗನೆ ಹೊಂದುಕೊಳ್ಳುವ ಸಾಮರ್ಥ್ಯವಿರುವುದು ಸೆಹ್ವಾಗ್ ಪ್ಲಸ್ ಪಾಯಿಂಟ್. ಅಲ್ಲದೆ ಟೀಂ ಇಂಡಿಯಾ ಕೋಚ್ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಸಲಹಾ ಸಮಿತಿ ಸದಸ್ಯರಾದ ಗಂಗೂಲಿ, ಸಚಿನ್ ಹಾಗೂ ಲಕ್ಷ್ಮಣ್ ಅವರಿಗೂ ಸೆಹ್ವಾಗ್ ಸಾಮರ್ಥ್ಯ ಏನು ಎಂಬುದರ ಬಗ್ಗೆ ಉತ್ತಮ ಅರಿವು ಇದೆ. ಇತ್ತ ಮೂಡಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಲಕ್ಷ್ಮಣ್ ಜತೆ ಕೆಲಸ ಮಾಡಿರುವುದು ಇವರಿಗೆ ಪ್ಲಸ್ ಪಾಯಿಂಟ್. ಹೀಗಾಗಿ ಈ ಇಬ್ಬರ ನಡುವೆ ಕೋಚ್ ಹುದ್ದೆಗೆ ತೀವ್ರ ಪೈಪೋಟಿ ಏರ್ಪಡುತ್ತಿದೆ.

ಉಳಿದಂತೆ ಟೀಂ ಇಂಡಿಯಾ ಗುರುವಾಗಲು, ಕರ್ನಾಟಕದ ಮಾಜಿ ವೇಗಿ ದೊಡ್ಡ ಗಣೇಶ್, ಪಾಕಿಸ್ತಾನ- ಬಾಂಗ್ಲಾದೇಶ ತಂಡಗಳ ಕೋಚ್ ಆಗಿ ಸದ್ಯಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ನಿರ್ದೇಶಕರಾಗಿರುವ ರಿಚರ್ಡ್ ಪೈಬಸ್, ಭಾರತ ಎ ತಂಡದ ಮಾಜಿ ಕೋಚ್ ಲಾಲ್ ಚಂದ್ ರಜಪೂತ್ ಸಹ ಅರ್ಜಿ ಸಲ್ಲಿಸಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.

ಅಂದಹಾಗೆ ಸದ್ಯ ಕೋಚ್ ಆಗಿರುವ ಅನಿಲ್ ಕುಂಬ್ಳೆ ಅವರನ್ನು ಮುಂದುವರಿಸುವ ಬಗ್ಗೆಯೂ ಸಲಹಾ ಸಮಿತಿ ಚರ್ಚೆ ನಡೆಸುವ ಅಧಿಕಾರವಿದೆ. ಆದರೆ ತಂಡದಲ್ಲಿ ಸಾಮರಸ್ಯದ ಕೊರತೆ ಇರುವುದರಿಂದ ಅನಿಲ್ ಕುಂಬ್ಳೆ ಕುರಿತಾಗಿ ಸಲಹಾ ಸಮಿತಿ ಯಾವ ರೀತಿ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Leave a Reply