ಭಾರತದ ಉದಾಹರಣೆ ಮುಂದಿಟ್ಟು ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯಲು ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ನಾಚಿಕೆಯಾಗೊಲ್ವೇ?

ಡಿಜಿಟಲ್ ಕನ್ನಡ ಟೀಮ್:

ಹವಾಮಾನ ವೈಪರಿತ್ಯ ತಪ್ಪಿಸಲು ಸಲುವಾಗಿ ಏರ್ಪಟ್ಟಿರುವ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಗುರುವಾರ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿರುವ ಟ್ರಂಪ್, ಇದನ್ನು ಸಮರ್ಥಿಸಿಕೊಳ್ಳಲು ಭಾರತ ಹಾಗೂ ಚೀನಾದ ಉದಾಹರಣೆಯನ್ನು ನೀಡಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆ ಹಾಗೂ ಹಸಿರು ಮನೆ ವಾಯು ಮಾಲಿನ್ಯ ತಗ್ಗಿಸಲು ಕಳೆದ ವರ್ಷ ಏ.22ರಂದು ವಿಶ್ವದ ಪ್ರಮುಖ ರಾಷ್ಟ್ರಗಳು ಸೇರಿದಂತೆ 195 ದೇಶಗಳು ಸಹಿ ಹಾಕಿದ ಕೈಗಾರಿಕಾ ಒಪ್ಪಂದವೇ ಈ ಪ್ಯಾರಿಸ್ ಒಪ್ಪಂದವಾಗಿದೆ. ಈ ಒಪ್ಪಂದದ ಭಾಗವಾಗಿ ಪ್ರತಿಯೊಂದು ರಾಷ್ಟ್ರಗಳು ಕಲ್ಲಿದ್ದಲು, ಇಂಧನ ಬಳಕೆ ಸೇರಿದಂತೆ ತನ್ನ ಕೈಗಾರಿಕೆಗಳಿಂದ ಆಗುತ್ತಿರುವ ವಾಯು ಮಾಲೀನ್ಯ ತಗ್ಗಿಸಲು ಬದ್ಧರಾಗಿರಬೇಕು. ಈ ಒಪ್ಪಂದದಿಂದಾಗಿ ಅಮೆರಿಕ ತನ್ನ ಕೈಗಾರಿಕೆಗಳ ಮೇಲೆ ನಿಯಂತ್ರಣ ಹೇರಬೇಕಿದೆ.

ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆಯಲ್ಲೂ ತಾವೂ ಪ್ಯಾರಿಸ್ ಒಪ್ಪಂದವನ್ನು ವಿರೋಧಿಸುವುದಾಗಿ ತಿಳಿಸಿದ್ದ ಡೊನಾಲ್ಡ್ ಟ್ರಂಪ್ ಈಗ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಟ್ರಂಪ್ ತನ್ನ ನಿರ್ಧಾರ ಪ್ರಕಟಿಸುವಾಗ ಭಾರತ ಮತ್ತು ಚೀನಾ ದೇಶಗಳನ್ನು ಉದಾಹರಣೆಯನ್ನಾಗಿ ಬಳಸಿಕೊಂಡಿರುವುದು ಹಾಗೂ ತಮ್ಮ ನಿರ್ಧಾರಕ್ಕೆ ನೀಡಿರುವ ಸಮರ್ಥನೆಗಳು ವ್ಯಾಪಕ ಟೀಕೆಗೆ ಗುರಿಯಾಗುತ್ತಿವೆ.

ಈ ಪ್ಯಾರಿಸ್ ಒಪ್ಪಂದಿಂದ ಹೆಚ್ಚು ಮಾಲಿನ್ಯ ಮಾಡುತ್ತಿರುವ ರಾಷ್ಟ್ರಗಳಾದ ಭಾರತ ಮತ್ತು ಚೀನಾದಂತಹ ರಾಷ್ಟ್ರಗಳಿಗೆ ಹೆಚ್ಚು ನೆರವಾಗುತ್ತಿದ್ದು, ಅಮೆರಿಕಕ್ಕೆ ಅನ್ಯಾಯವಾಗಿದೆ ಎಂನ್ನುತ್ತಿದ್ದಾರೆ ಟ್ರಂಪ್. ಈ ಒಪ್ಪಂದದ ಪ್ರಕಾರ ಭಾರತ ಸದ್ಯ ಬಳಸುತ್ತಿರುವ ಕಲ್ಲಿದ್ದಲು ಪ್ರಮಾಣವನ್ನು ದುಪ್ಪಟ್ಟು ಮಾಡಿಕೊಳ್ಳುವ ಅವಕಾಶವಿದೆ. ಇನ್ನು ಚೀನಾ ಮುಂದಿನ 13 ವರ್ಷಗಳ ಕಾಲ ಯಾವುದೇ ನಿರ್ಬಂಧವಿಲ್ಲದೇ ಈ ನೀತಿಯಲ್ಲಿ ವಿನಾಯಿತಿ ಪಡೆದಿದೆ. ಈ ರೀತಿಯಾದ ವಿನಾಯಿತಿ ಹಾಗೂ ಅವಕಾಶ ಪಡೆಯಲು ಪ್ರಮುಖ ಕಾರಣ ಜನಸಂಖ್ಯೆ.

ಇಷ್ಟಕ್ಕೂ ಹವಾಮಾನ ವೈಪರಿತ್ಯಕ್ಕೆ ಪ್ರಮುಖ ಕಾರಣವಾಗಿರುವುದು ಅಮೆರಿಕದ ಕೈಗಾರಿಕ ನೀತಿ. ಇಂಧನ ಬಳಕೆಯಲ್ಲಿ ಅಮೆರಿಕದ ನೀತಿ ಹೇಗೆ ವಿಶ್ವಕ್ಕೆ ಮಾರಕವಾಗಿದೆ ಎಂಬುದನ್ನು ತಿಳಿಯಲು, ಈ ಪ್ರಮುಖ ಅಂಶಗಳನ್ನು ನೋಡಬೇಕು…

  • ವಿಶ್ವದಲ್ಲಿ ಅತಿ ಹೆಚ್ಚು ಇಂಧನವನ್ನು ಬಳಕೆ ಮಾಡುವ ಗ್ರಾಹಕರ ಪೈಕಿ ಅಮೆರಿಕದ ಕೆಲವು ಆಸ್ಪತ್ರೆಗಳೇ ಅಗ್ರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತವೆ.
  • 2014ರಲ್ಲಿ ಮಾಡಿದ ಅಂದಾಜಿನ ಪ್ರಕಾರ ಅಮೆರಿಕದಲ್ಲಿನ ದೀಪಗಳನ್ನು ಹಚ್ಚಲು 412 ಬಿಲಿಯನ್ ಕಿಲೋ ವ್ಯಾಟ್ ವಿದ್ಯುತ್ ಅಗತ್ಯವಿದೆ.
  • ವಿಶ್ವದ ಜನಸಂಖ್ಯೆ ಪ್ರಮಾಣದಲ್ಲಿ ಶೇ.5 ರಷ್ಟಿರುವ ಅಮೆರಿಕ, ವಿಶ್ವದ ಇಂಧನ ಪ್ರಮಾಣದಲ್ಲಿ ಶೇ.23 ರಷ್ಟು ಅನುಭವಿಸುತ್ತಿದೆ.
  • ಅಮೆರಿಕದ ಕೆ-12 ಶ್ರೇಣಿಯ ಶಾಲೆಗಳೇ ಇಂಧನ ಬಳಕೆಗಾಗಿ 6 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಮಾಡುತ್ತಿದ್ದು, ಈ ಶಾಲೆಗಳು ಪಠ್ಯಪುಸ್ತಕ ಹಾಗೂ ಕಂಪೂಟರ್ ಗಳಿಗೂ ಇಷ್ಟು ಮೊತ್ತ ವ್ಯಯಿಸುತ್ತಿಲ್ಲ.
  • ಅಮೆರಿಕದಲ್ಲಿ ಸ್ವಯಂ ಚಾಲಿತ ಕಿಟಕಿ- ಬಾಗಿಲು, ಇತರೆ ವಿದ್ಯುತ್ ಉಪಕರಣಗಳ ಬಳಕೆಗಾಗಿಯೇ ವಾರ್ಷಿಕವಾಗಿ ಸುಮಾರು 300 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹಣ ವ್ಯಯಿಸುತ್ತಿದೆ. ಇದು ಅಮೆರಿಕ ವಾರ್ಷಿಕವಾಗಿ ತನ್ನ ಮಿಲಿಟರಿಗೆ ವ್ಯಯಿಸುವ ವೆಚ್ಚಕ್ಕಿಂತ ಹೆಚ್ಚಾಗಿದೆ.
  • ವಿಶ್ವದ ಅತಿದೊಡ್ಡ ಇಂಧನ ಬಳಕೆದಾರರ ಪೈಕಿ ಅಮೆರಿಕ ಎರಡನೇ ಸ್ಥಾನದಲ್ಲಿದ್ದು, ಚೀನಾ ಮೊದಲ ಸ್ಥಾನದಲ್ಲಿದೆ.

ಈ ಎಲ್ಲ ಅಂಶಗಳು ಅಮೆರಿಕ ಯಾವ ರೀತಿ ವಿಶ್ವದ ಇಂಧನ ಸಂಪನ್ಮೂಲವನ್ನು ಬಕಾಸುರನಂತೆ ನುಂಗುತ್ತಿದೆ ಎಂಬುದಕ್ಕೆ ನಮ್ಮ ಮುಂದಿರುವ ಸಾಕ್ಷಿ. ಅಮೆರಿಕದ ಜನಸಂಖ್ಯೆ ಹಾಗೂ ಅನುಭವಿಸುತ್ತಿರುವ ಇಂಧನ ಪ್ರಮಾಣದ ಸರಾಸರಿಗೂ, ಭಾರತ ಮತ್ತು ಚೀನಾದ ಜನಸಂಖ್ಯೆಗೂ ಹಾಗೂ ಈ ದೇಶಗಳು ಅನುಭವಿಸುತ್ತಿರುವ ಇಂಧನ ಪ್ರಮಾಣದ ಸರಾಸರಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಅಮೆರಿಕ ಈ ಒಪ್ಪಂದದ ವಿಷಯವಾಗಿ ಭಾರತ ಮತ್ತು ಚೀನಾ ಜತೆಗೆ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ. ಈ ಎರಡು ರಾಷ್ಟ್ರಗಳಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದರಿಂದ ಈ ಎರಡು ದೇಶಗಳು ಒಪ್ಪಂದದಲ್ಲಿ ವಿನಾಯಿತಿ ಪಡೆದಿವೆ.

ಅಂದಹಾಗೆ, ಅಮೆರಿಕದ ಈ ನಿರ್ಧಾರ ಪ್ರಕಟ ಮಾಡಿದ ನಂತರ, ಭಾರತ ತನ್ನ ಇಂಧನ ಬಳಕೆಯ ಪ್ರಮಾಣದಲ್ಲಿ ಯಾವುದೇ ಹೆಚ್ಚಳ ಮಾಡಿಕೊಳ್ಳದೆ ಯಥಾಸ್ಥಿತಿಯನ್ನೇ ಮುಂದುವರಿಸಲು ನಿರ್ಧರಿಸಿದೆ. ಇದು ಹವಾಮಾನ ವೈಪರಿತ್ಯ ತಡೆಗಟ್ಟುವ ನಿಟ್ಟಿನಲ್ಲಿ ಭಾರತ ತೋರುತ್ತಿರುವ ಬದ್ಧತೆಗೆ ಸಾಕ್ಷಿ. ಹೀಗಾಗಿ ಈ ವಿಚಾರದಲ್ಲಿ ಅಮೆರಿಕ ತನ್ನನ್ನು ಭಾರತದೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಸೂಕ್ತವಲ್ಲ.

ಕೇವಲ ಯುದ್ಧ, ಶಸ್ತ್ರಾಸ್ತ್ರ ವಿಷಯಗಳಲ್ಲಿ ಮಾತ್ರ ಅಮೆರಿಕ ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವುದಲ್ಲ, ಇಂತಹ ಪ್ರಮುಖ ವಿಚಾರದಲ್ಲಿ ತನ್ನ ಬದ್ಧತೆಯನ್ನು ಸಾಬೀತುಪಡಿಸಿ ದೊಡ್ಡಣ್ಣನ ಜವಾಬ್ದಾರಿಯನ್ನು ನಿಬಾಯಿಸಬೇಕಿದೆ. ಟ್ರಂಪ್ ಅವರ ಈ ನಿರ್ಧಾರಕ್ಕೆ ಬರಾಕ್ ಒಬಾಮಾ ಸೇರಿದಂತೆ ಅಮೆರಿಕದ ಮಾಜಿ ಅಧ್ಯಕ್ಷರುಗಳು ಟೀಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೇವಲ ಅಮೆರಿಕದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಟ್ರಂಪ್ ಭಾರತ ಹಾಗೂ ಚೀನಾವನ್ನು ಉದಾಹರಿಸಿರುವುದು ದುರಾದೃಷ್ಟಕರ ಸಂಗತಿ.

Leave a Reply