ಪ್ಯಾರೀಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದ್ದು ಚೀನಾಗೆ ಲಾಭವಾಗುತ್ತಿರೋದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಪ್ಯಾರೀಸ್ ಒಪ್ಪಂದದಿಂದ ಅಮೆರಿಕ ಯೂಟರ್ನ್ ತೆಗೆದುಕೊಂಡಿರುವುದಕ್ಕೆ ವಿಶ್ವದಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿವೆ. ಸಿರಿಯಾದಂತಹ ಅತ್ಯಂತ ದುರ್ಬಲ ರಾಷ್ಟ್ರಗಳು ಸಹ ಪ್ಯಾರೀಸ್ ಒಪ್ಪಂದಕ್ಕೆ ಬದ್ಧರಾಗಿರುವಾಗ ಅಮೆರಿಕ ಈ ಜವಾಬ್ದಾರಿಯಿಂದ ಜಾರಿಕೊಂಡು ತನ್ನ ಮಾನವನ್ನು ತಾನೇ ಹರಾಜಾಕಿಕೊಂಡಿದೆ. ಅಮೆರಿಕದ ಈ ನಿರ್ಧಾರ ಚೀನಾ ಪಾಲಿಗೆ ಪರೋಕ್ಷವಾಗಿ ದೊಡ್ಡ ಲಾಭವಾಗುತ್ತಿದೆ.

ಅಮೆರಿಕ ಪ್ಯಾರೀಸ್ ಒಪ್ಪಂದಕ್ಕೆ ಬದ್ಧವಾಗದಿರುವುದು ಭೂಮಿಯ ವಾತಾವರಣ ಮತ್ತಷ್ಟು ಹದಗೆಡುವಂತೆ ಮಾಡಲಿದೆ. ಸಹಜವಾಗಿಯೇ ಇದರಿಂದಾಗುವ ದುಷ್ಪರಿಣಾಮಗಳನ್ನು ವಿಶ್ವದ ಇತರೆ ದೇಶಗಳೂ ಅನುಭವಿಸಬೇಕಿದೆ. ಅಮೆರಿಕ ತನ್ನ ಈ ನಿರ್ಧಾರದಿಂದ ಕೇವಲ ಬೇರೆ ದೇಶಗಳಿಗೆ ಮೋಸ ಮಾಡುತ್ತಿಲ್ಲ. ಪರೋಕ್ಷವಾಗಿ ತನಗೆ ತಾನೇ ದ್ರೋಹ ಬಗೆದುಕೊಳ್ಳುತ್ತಿದೆ ಎನ್ನುತ್ತಿದ್ದಾರೆ ಪಂಡಿತರು. ಅದು ಹೇಗೆ? ಈ ನಿರ್ಧಾರದಿಂದ ಅಮೆರಿಕಕ್ಕೆ ಆಗುವ ನಷ್ಟವೇನು? ಚೀನಾಕ್ಕೆ ಆಗುವ ಲಾಭವೇನು? ನೋಡೋಣ ಬನ್ನಿ…

ಸದ್ಯ ವಿಶ್ವದ ಎಲ್ಲ ರಾಷ್ಟ್ರಗಳು ಅವಲಂಬಿತವಾಗಿರುವುದು ನೈಸರ್ಗಿಕವಾಗಿ ಸಿಗುವ ಕಚ್ಚಾ ತೈಲದಂತಹ ನವೀಕರಿಸಲಾಗದ ಇಂಧನ ಸಂಪನ್ಮೂಲಗಳ ಮೇಲೆ. ಇಂತಹ ಪರಿಸ್ಥಿತಿಯಲ್ಲಿ ಸಾಕಷ್ಟು ದೂರದೃಷ್ಟಿ ಹೊಂದಿರುವ ಚೀನಾ ಈ ನವೀಕರಿಸಲಾಗದ ಇಂಧನಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ಗುರಿಯತ್ತ ತನ್ನ ಪಯಣ ಆರಂಭಿಸಿ ಇತರೆ ರಾಷ್ಟ್ರಗಳಿಗಿಂತ ಸಾಕಷ್ಟು ಮುನ್ನಡೆಯಲ್ಲಿದೆ. ಅದು ಯಾವ ಮಟ್ಟಿಗೆ ಎಂದರೆ, ಚೀನಾ ಈಗ ಸೋಲಾರ್ ನಂತರ ನವೀಕರಿಸಬಹುದಾದ ಸಂಪನ್ಮೂಲ ಬಳಕೆಯಲ್ಲಿ ಇತರೆ ರಾಷ್ಟ್ರಗಳಿಗಿಂತ ಮುಂದಿದೆ. ಈ ಇಂಧನ ಬಳಕೆಯ ಕುರಿತಾದ ತಂತ್ರಜ್ಞಾನದಲ್ಲೂ ಚೀನಾ ಮೇಲುಗೈ ಸಾಧಿಸಿದೆ.

ಒಂದು ವೇಳೆ ಅಮೆರಿಕ ಪ್ಯಾರೀಸ್ ಒಪ್ಪಂದದಲ್ಲಿ ಮುಂದುವರಿದಿದ್ದೇ ಆಗಿದ್ದರೆ, ನವೀಕರಿಸಲಾಗದ ಇಂಧನ ಮೇಲಿನ ಅವಲಂಬನೆಯನ್ನು ಬಲವಂತವಾಗಿಯಾದರೂ ಕಡಿಮೆ ಮಾಡಿಕೊಳ್ಳಬೇಕಿತ್ತು. ಇದರಿಂದ ಅಮೆರಿಕ ಬದಲಿ ಇಂಧನ ಅಥವಾ ನವೀಕರಿಸಬಹುದಾದ ಇಂಧನದ ಹುಡುಕಾಟ, ಆವಿಷ್ಕಾರ ನಡೆಸಲು ಉತ್ತಮ ದಾರಿ ಮಾಡಿಕೊಡುತ್ತಿತ್ತು. ಆದರೆ ಅಮೆರಿಕ ಒಪ್ಪಂದದಿಂದ ಹಿಂದೆ ಸರಿದಿರುವುದು, ಅಮೆರಿಕದ ಈ ದಾರಿಯತ್ತ ಸಾಗುವ ಅವಕಾಶಗಳಿಗೆ ತೆರೆ ಎಳೆದಂತಾಗಿದೆ.

ಈ ನವೀಕರಿಸಬಹುದಾದ ಇಂಧನ ಬಳಕೆ ಹಾಗೂ ಅವುಗಳ ತಂತ್ರಜ್ಞಾನ ಆವಿಷ್ಕಾರದಲ್ಲಿ ಚೀನಾ ಸಾಕಷ್ಟು ಪ್ರಗತಿ ಸಾಧಿಸಿದೆ. ಇಂತಹ ಸಂದರ್ಭದಲ್ಲಿ ಅಮೆರಿಕದಿಂದ ಚೀನಾಗೆ ಸ್ಪರ್ಧೆ ಎದುರಾಗುವ ಸಾಧ್ಯತೆ ಇತ್ತು. ಇದು ಚೀನಾ ಪಾಲಿಗೆ ದೊಡ್ಡ ಸವಾಲಾಗುತ್ತಿತ್ತು. ಆದರೆ ಅಮೆರಿಕ ತನ್ನ ನಿರ್ಧಾರ ಬದಲಿಸಿರುವುದರಿಂದ ಚೀನಾಗೆ ಯಾವುದೇ ಎದುರಾಳಿ ಇಲ್ಲದಂತೆ ನವೀಕರಿಸಬಹುದಾದ ಇಂಧನ ಹಾಗೂ ಅವುಗಳಿಗೆ ಸಂಬಂಧಿಸಿದ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾರ್ವಭೌಮನಾಗಿ ಬೆಳೆಯುವ ಅತ್ಯಮೂಲ್ಯ ಅವಕಾಶವೊಂದನ್ನು ಒದಗಿಸಿಕೊಟ್ಟಿದೆ.

ಸದ್ಯದ ಪರಿಸ್ಥಿತಿಯಲ್ಲಿ ಚೀನಾ ಆರ್ಥಿಕವಾಗಿ ವಿಶ್ವದ ಪ್ರಬಲ ರಾಷ್ಟ್ರವಾಗಿ ಬೆಳೆದು ನಿಂತಿದೆ. ಅದು ಕೆಲವೇ ದಶಕದ ಅವಧಿಯಲ್ಲಿ. ಇಷ್ಟೇ ಅಲ್ಲದೇ ವಿಶ್ವದ ಇತರೆ ರಾಷ್ಟ್ರಗಳಲ್ಲಿ ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ, ಮಿಲಿಟರಿ ಕ್ಷೇತ್ರದಲ್ಲಿನ ಪ್ರಗತಿ, ಸಾಗರ ತೀರಗಳ ಮಾರ್ಗದ ಮೇಲಿನ ಹಿಡಿತ ಸೇರಿದಂತೆ ಜಾಗತಿಕವಾಗಿ ಎಲ್ಲ ಆಯಾಮದಲ್ಲೂ ಚೀನಾದ ಪ್ರಗತಿ ವೇಗ ದಿನೇ ದಿನೇ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕದ ನಿರ್ಧಾರ, ಚೀನಾ ಇಂಧನ- ತಂತ್ರಜ್ಞಾನ ಕ್ಷೇತ್ರದಲ್ಲೂ ವಿಶ್ವದ ಬಲಿಷ್ಟ ರಾಷ್ಟ್ರವಾಗಿ ಬೆಳೆಯಲು ಅತ್ಯುತ್ತಮ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ.

Leave a Reply