ಕುಂಬ್ಳೆ ಕೋಚ್ ಆಗಿ ನೇಮಕವಾಗಿದ್ದನ್ನೇ ಪ್ರಶ್ನಿಸಿದ್ದರಂತೆ ಕೊಹ್ಲಿ, ಬಿಸಿಸಿಐ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ಬಿಚ್ಚಿಟ್ಟ ಸತ್ಯವೇನು?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಈ ಟೂರ್ನಿಯ ಕುರಿತಾಗಿ ತಂಡದ ಆಟಗಾರರ ತಯಾರಿ, ಯೋಜನೆ ಕುರಿತಾಗಿ ಟೀಂ ಇಂಡಿಯಾ ಕಡೆಯಿಂದ ಯಾವುದೇ ಸುದ್ದಿ ಬರುತ್ತಿಲ್ಲ. ಬರುತ್ತಿರುವುದೆಲ್ಲಾ ಕೇವಲ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಣ ಮುಸುಕಿನ ಗುದ್ದಾಟದ ಸುದ್ದಿಗಳು.

ಈ ಇಬ್ಬರ ನಡುವಣ ಬಿಕ್ಕಟ್ಟಿಗೆ ಕುರಿತಾಗಿ ಈ ವರೆಗೂ ಬಂದಿರುವ ವರದಿಗಳನ್ನು ನೋಡಿದರೆ, ಒಂದು ಅಂಶ ಸ್ಪಷ್ಟವಾಗುತ್ತದೆ. ಅದೇನೆಂದರೆ, ಈ ಇಬ್ಬರು ಪರಸ್ಪರ ಒಬ್ಬರ ಅಭಿಪ್ರಾಯ ಹಾಗೂ ನಿರ್ಧಾರವನ್ನು ಮತ್ತೊಬ್ಬರು ಗೌರವಿಸುತ್ತಿಲ್ಲ ಎಂದು. ಆದರೆ ಈ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದ್ದು ಯಾವಾಗ? ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಲೇ ಇತ್ತು. ಈಗ ಈ ಪ್ರಶ್ನೆಗೆ ಬಿಸಿಸಿಐ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ಉತ್ತರಿಸಿದ್ದಾರೆ. ಕೊಹ್ಲಿ ಹಾಗೂ ಕುಂಬ್ಳೆ ನಡುವಣ ಅಸಮಾಧಾನದ ಬಗ್ಗೆ ಶಿರ್ಕೆ ನೀಡಿರುವ ಮಾಹಿತಿ ಹೀಗಿದೆ…

‘ಕೊಹ್ಲಿ ಹಾಗೂ ಕುಂಬ್ಳೆ ನಡುವಣ ಅಸಮಾಧಾನದ ಪ್ರಕರಣ ನಿನ್ನೆ ಮೊನ್ನೆಯದಲ್ಲ. ಒಂದು ವರ್ಷದ ಹಳೆಯದು. ಅಂದರೆ, ಕುಂಬ್ಳೆ ಕೋಚ್ ಆಗಿ ನೇಮಕವಾದಾಗಿನಿಂದಲೂ ಈ ಇಬ್ಬರ ನಡುವೆ ಅಸಮಾಧಾನವಿತ್ತು. ಕುಂಬ್ಳೆ ಅವರನ್ನು ಕೋಚ್ ಆಗಿನ ನೇಮಕ ಮಾಡಿದ ನಿರ್ಧಾರವನ್ನು ಟೀಂ ಇಂಡಿಯಾ ನಾಯಕ ಕೊಹ್ಲಿ ಪ್ರಶ್ನಿಸಿದ್ದರು. ಆ ಸಂದರ್ಭದಲ್ಲಿ ನಮ್ಮ ಅಧ್ಯಕ್ಷರು (ಅನುರಾಗ್ ಠಾಕೂರು) ಮಧ್ಯಸ್ಥಿಕೆ ವಹಿಸಿ ಈ ಇಬ್ಬರ ನಡುವಣ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದರು. ಕುಂಬ್ಳೆ ಹಾಗೂ ಕೊಹ್ಲಿ ಇಬ್ಬರ ಜತೆಗೂ ಮಾತುಕತೆ ನಡೆಸಿದ್ದರು. ಸಲಹಾ ಸಮಿತಿಯ ಶಿಫಾರಸ್ಸಿನಂತೆ ಕುಂಬ್ಳೆ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿದೆ. ಈ ನಿರ್ಧಾರದಂತೆಯೇ ನಾವು ಮುಂದುವರಿಯಲೇಬೇಕು ಎಂದು ಅವರು ಕೊಹ್ಲಿಗೆ ಮನವರಿಕೆ ಮಾಡಿದ್ದರು.

ಕುಂಬ್ಳೆ ಕೋಚ್ ಆಗಿ ನೇಮಕದ ಬಗ್ಗೆ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರಿಂದಲೇ ಕುಂಬ್ಳೆ ಅವರನ್ನು ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಕೋಚ್ ಆಗಿ ನೇಮಕ ಮಾಡಿಕೊಳ್ಳಲಾಯಿತು. ಈ ಇಬ್ಬರ ನಡುವಣ ಹೊಂದಾಣಿಕೆ ನೋಡಿಕೊಂಡು ಭವಿಷ್ಯದಲ್ಲಿ ಕುಂಬ್ಳೆ ಅವಧಿ ವಿಸ್ತರಣೆ ಮಾಡಲು ನಿರ್ಧರಿಸಿದ್ದೆವು.’

Leave a Reply