ಸೋಮವಾರದಿಂದ ಮಳೆಗಾಲದ ಅಧಿವೇಶನ, ಈ ಬಾರಿಯೂ ನಾನೇ ಸಭಾಪತಿ ಅಂದ್ರು ಶಂಕರಮೂರ್ತಿ

ಡಿಜಿಟಲ್ ಕನ್ನಡ ಟೀಮ್:

ಸತತ ಬರಗಾಲ, ಕುಡಿಯುವ ನೀರಿನ ಸಮಸ್ಯೆ, ರೈತರ ಆತ್ಮಹತ್ಯೆ, ರೈತರ ಸಾಲ ಹೀಗೆ ಹತ್ತು ಹಲವು ಗಂಭೀರ ಸಮಸ್ಯೆಗಳು ರಾಜ್ಯದಲ್ಲಿ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸೋಮವಾರದಿಂದ ಮಳೆಗಾಲದ ಅಧಿವೇಶನ ಆರಂಭವಾಗುತ್ತಿದೆ.

ಈ ಬಾರಿಯ ಅಧಿವೇಶನದಲ್ಲಿ ಈ ಗಂಭೀರ ಸಮಸ್ಯೆಗಳ ಕುರಿತಾಗಿ ಚರ್ಚೆ ನಡೆದು, ಸೂಕ್ತ ಪರಿಹಾರ ಕೈಗೊಳ್ಳಲಾಗುವುದೇ ಎಂಬುದು ಸದ್ಯ ಎಲ್ಲರ ಮುಂದಿರುವ ಪ್ರಶ್ನೆ. ಕಾರಣ, ಸರ್ಕಾರ ಈ ಬಾರಿ ಕೇವಲ 10 ದಿನಗಳ ಕಾಲ ಮಾತ್ರ ಅಧಿವೇಶನ ಕರೆದಿದ್ದು, ಪೂರ್ಣ ಪ್ರಮಾಣದ ಬಜೆಟ್ ಅಂಗೀಕಾರಕ್ಕೂ ಕರೆ ಕೊಟ್ಟಿದೆ. ಹೀಗಾಗಿ ಇರುವ ಅಲ್ಪಾವಧಿಯಲ್ಲಿ ಪ್ರತಿಪಕ್ಷಗಳು ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುತ್ತಾರೋ ಅಥವಾ ರಾಜಕೀಯ ಲಾಭಕ್ಕಾಗಿ ಸರ್ಕಾರದ ವಿರುದ್ಧ ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತದೆಯೋ ಕಾದು ನೋಡಬೇಕು.

ಈ ಅಧಿವೇಶನದಲ್ಲಿ ಬಜೆಟ್ ನ ಮುಂದುವರಿದ ಅಧಿವೇಶನವಾಗಿದ್ದು ಇಲಾಖಾವಾರು ಬೇಡಿಕೆಗಳ ಚರ್ಚೆಗೂ ಅವಕಾಶ ಕಲ್ಪಿಸಬೇಕಿದೆ. ಆದರೆ ಕೇವಲ ಹತ್ತು ದಿನಗಳಲ್ಲಿ 30 ಇಲಾಖೆಗಳ ಬಗ್ಗೆ ಚರ್ಚೆ ನಡೆಸಿ ಉತ್ತರ ನೀಡಲು ಸಾಧ್ಯವಾಗುವುದಿಲ್ಲ. ಇದರ ಜತೆಗೆ ಜಿಎಸ್ಟಿ ವಿಧೇಯಕ, ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಏಕರೂಪ ಶಿಕ್ಷಣ ಕಾಯ್ದೆ ಸೇರಿದಂತೆ ಮಹತ್ವದ ವಿಧೇಯಕಗಳು ಚರ್ಚೆಗೆ ಬರಲಿವೆ.

ಈ ಎಲ್ಲ ಪ್ರಮುಖ ವಿಚಾರಗಳ ಜತೆಗೆ ಇತ್ತೀಚೆಗೆ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳ ಸ್ಥಿತಿ, ವಿದ್ಯುತ್ ಸಮಸ್ಯೆಯ ವಿಷಯಗಳು ಸದನಗಳಲ್ಲಿ ಪ್ರತಿಧ್ವನಿಸುವ ನಿರೀಕ್ಷೆ ಇದೆ.

ಇನ್ನು ಈ ಬಾರಿಯ ಅಧಿವೇಶನದಲ್ಲಿ ಸಭಾಪತಿಯಾಗಿ ನಾನೇ ಮುಂದುವರಿಯಲಿದ್ದೇನೆ ಎಂದು ವಿಧಾನಪರಿಷತ್ ಸಭಾಧ್ಯಕ್ಷ ಶಂಕರಮೂರ್ತಿ ಅವರು ತಿಳಿಸಿದ್ದಾರೆ. ‘ಸಭಾಪತಿ ವಿರುದ್ಧ ನಿಯಮ 165ರ ಪ್ರಕಾರ ಅವಿಶ್ವಾಸ ನಿರ್ಣಯ ಬಂದರೆ 14 ದಿನಗಳ ಬಳಿಕ ಯಾವುದಾದರೂ ಒಂದು ದಿನ ನಿರ್ಣಯ ಮಂಡಿಸಲು ಸಭಾಪತಿ ಇಚ್ಛಿಸಿದರೆ ಅವಕಾಶ ದೊರೆಯುತ್ತದೆ. ಈ ಬಾರಿ ಸದನ ನಡೆಯುತ್ತಿರುವುದೇ ಕೇವಲ 10 ದಿನ. ಹೀಗಾಗಿ ಸಭಾಪತಿ ವಿರುದ್ಧ ಅವಿಶ್ವಾಸ ಮಂಡಿಸಲು ಸಾಧ್ಯವೇ ಇಲ್ಲ. ನಿರ್ಣಯ ಮಂಡನೆಗೆ ಕನಿಷ್ಠ ಹತ್ತು ಮಂದಿ ಸದಸ್ಯರು ಎದ್ದು ನಿಲ್ಲಬೇಕು. ನಿರ್ಣಯ ಮಂಡನೆಗೆ ಒಪ್ಪಿಗೆ ಕೊಟ್ಟರೆ ಆದು ದಿನದೊಳಗೆ ಮತದಾನ ನಡೆಸಬೇಕಾಗುತ್ತದೆ. ಅಂದರೆ ಈ ಪ್ರಕ್ರಿಯೆಗಳು ಪೂರ್ಣಗೊಳ್ಳಲು 24 ದಿನ ಅಧಿವೇಶನ ಕರೆದಾಗ ಮಾತ್ರ ಸಾಧ್ಯ’ ಎಂದು ಅವರು ವಿವರಿಸಿದರು.

Leave a Reply