ತಲ್ಲಣಿಸಿದೆ ಪಾಕ್ ಕಳ್ಳಹಣದಿಂದ ಕೊಬ್ಬಿದ್ದ ಪ್ರತ್ಯೇಕತಾವಾದಿಗಳ ಧನಮೂಲ, ಈವರೆಗೆ ಯಾರೂ ಹೆಣೆದಿರದಿದ್ದ ಜಾಲ!

ಡಿಜಿಟಲ್ ಕನ್ನಡ ಟೀಮ್

ಜಮ್ಮು-ಕಾಶ್ಮೀರದಿಂದ ಶನಿವಾರ ಒಂದು ಒಳ್ಳೆ ಸುದ್ದಿ ಹಾಗೂ ಮತ್ತೊಂದು ಕೆಟ್ಟ ಸುದ್ದಿ ಎರಡೂ ವರದಿಯಾಗಿವೆ.

ಕೆಟ್ಟ ಸುದ್ದಿ: ಜಮ್ಮು-ಶ್ರೀನಗರ ಹೆದ್ದಾರಿಯ ಕ್ವಾಜಿಗುಂದ್ ನಲ್ಲಿ ಸೇನೆಯ ಗಸ್ತು ಪಡೆ ಮೇಲೆ ಉಗ್ರರು ಮಾಡಿರುವ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ. ವಾರದ ಹಿಂದಷ್ಟೇ ಮೃತ ಬುರ್ಹಾನ್ ವಾನಿಯ ಸಹಚರನಾದ ಹಿಜ್ಬುಲ್ ಉಗ್ರ ಸಬ್ಜಾರ್ ಭಟ್ ನನ್ನು ಕೊಲ್ಲುವ ಮೂಲಕ ಉಗ್ರರಿಗೆ ಸೇನೆಯು ನಿರ್ಣಾಯಕ ಆಘಾತ ನೀಡಿತ್ತು ಎಂಬುದಿಲ್ಲಿ ಉಲ್ಲೇಖನೀಯ.

ಒಳ್ಳೆ ಸುದ್ದಿ: ಉಗ್ರವಾದದ ಮೂಲಗಳನ್ನು ಹೊಸಕುವುದಕ್ಕೆ ಸರ್ಕಾರ ಸಮರ್ಥ ನಡೆಯೊಂದನ್ನು ಇಟ್ಟಿದೆ. ಅದರ ಪರಿಣಾಮವೇ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರ ಮನೆಗಳ ಮೇಲೆ ದಾಳಿ ನಡೆಸಿ ಅವರ ಹಣಕಾಸು ಮೂಲಗಳಿಗೆ ಆಘಾತ ನೀಡುವ ಪ್ರಯತ್ನ ಮಾಡಿದೆ. ಪ್ರತ್ಯೇಕತಾವಾದಿ ನಾಯಕರ ಮನೆಗಳಿಂದ ₹1.5 ಕೋಟಿ ಹಣವನ್ನೂ ವಶಪಡಿಸಿಕೊಳ್ಳಲಾಗಿದೆ. ಇವತ್ತಿನ ಬಹುಕೋಟಿ ಅವ್ಯವಹಾರಗಳ ನಡುವೆ ಈ ಮೊತ್ತ ಜುಜುಬಿಯಾಗಿ ಕಾಣಬಹುದಾದರೂ ಇದು ಆರಂಭ ಮಾತ್ರ. ಅಲ್ಲದೇ ಈ ಸಣ್ಣ ಮೊತ್ತದ ಹಣವೇ ಚಿಕ್ಕ ಮಕ್ಕಳನ್ನು ಹಾಗೂ ಯುವಕರನ್ನು ಕಲ್ಲು ತೂರಿಸುವುದಕ್ಕೆ ಉಪಯೋಗವಾಗುತ್ತಿತ್ತು, ರಾಜ್ಯವನ್ನು ಬಂದ್ ಮತ್ತು ಹಿಂಸಾಚಾರ ತ್ರಸ್ತವಾಗಿಡುವುದಕ್ಕೆ ಬಳಕೆ ಆಗುತ್ತಿತ್ತು ಎಂಬುದನ್ನು ಪರಿಗಣಿಸಿದಾಗ ಇದು ಮುಖ್ಯ ವಿದ್ಯಮಾನವೇ ಆಗುತ್ತದೆ.

ಬಹಳ ಮುಖ್ಯವಾಗಿ, ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನದಿಂದ ಹಣ ಸಂದಾಯವಾಗುತ್ತಿರುವುದು ಬಹಿರಂಗ ಸತ್ಯವಾಗಿತ್ತು. ರಾಷ್ಟ್ರೀಯ ಸುದ್ದಿವಾಹಿನಿಗಳ ಎದುರು ಹಲವರು ಇದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದರು. ಪ್ರತ್ಯೇಕತಾವಾದಿಗಳ ಗೃಹಬಂಧನ, ಅವರೊಂದಿಗೆ ಮಾತುಕತೆ ನಿರಾಕರಣೆ ಇಂಥ ಕ್ರಮಗಳೆಲ್ಲ ಈ ಹಿಂದೆ ಜರುಗಿದ್ದವಾದರೂ ಅವರ ಹಣಮೂಲವನ್ನು ಬತ್ತಿಸುವ ಗಂಭೀರ ಯತ್ನಗಳಾಗಿರಲಿಲ್ಲ. ಈ ಪ್ರತ್ಯೇಕತಾವಾದಿಗಳು ಪಾಕ್ ಹಣದಿಂದ ಕಂಡವರ ಮಕ್ಕಳ ಕೈಗೆ ಕಲ್ಲು ಕೊಡಿಸಿ ತಾವು ಐಷಾರಾಮಿ ಜೀವನ ಮಾಡುತ್ತಿದ್ದದ್ದೂ ವಾಸ್ತವ.

ಆದರೆ ಶನಿವಾರದ ದಾಳಿಯಲ್ಲಿ ಈ ಪ್ರತ್ಯೇಕತಾವಾದಿ ಧುರೀಣರ 14 ಕಾಶ್ಮೀರಿ ನೆಲೆಗಳು ಹಾಗೂ ದೆಹಲಿಯ 8 ನೆಲೆಗಳ ಮೇಲೆ ದಾಳಿಯಾಗಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಹುರಿಯತ್ ನ ಸಯ್ಯದ್ ಶಾ ಗಿಲಾನಿಯ ಸಂಬಂಧಿಕರು ಮತ್ತು ಆಪ್ತರ ಮನೆಗಳ ಮೇಲೆ, ಉದ್ಯಮಿ ಜಹೂರ್ ವತಾಲಿ, ಶಾಹಿದ್ ಉಲ್ ಇಸ್ಲಾಂ, ನಯೀಂ ಖಾನ್ ಹಾಗೂ ಹುರಿಯತ್ ನ ರಜಾ ಕಲ್ವಾಲ್ ನಿವಾಸಗಳ ಮೇಲೆ ದಾಳಿಗಳಾಗಿವೆ.

2002ರಲ್ಲೊಮ್ಮೆ ಗಿಲಾನಿ ಸೇರಿದಂತೆ ಪ್ರತ್ಯೇಕತಾವಾದಿ ಮುಖಂಡರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ಆಗಿದ್ದು ಬಿಟ್ಟರೆ ಇವರನ್ನು ಮುಟ್ಟಿದವರೇ ಇರಲಿಲ್ಲ. ಇದೀಗ ಎನ್ಐಎ ಬಿಸಿ ಮುಟ್ಟಿಸಿದೆ. ಈಗಲೂ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ. ಆದರೆ ಹುರಿಯತ್ ಕಾನ್ಫರೆನ್ಸ್, ಹಿಜ್ಬುಲ್ ಮುಜಾಹಿದೀನ್, ದುಖ್ತರನ್ ಎ ಮಿಲ್ಲಾತ್ ಈ ಎಲ್ಲ ಸಂಘಟನೆಗಳನ್ನು ಎಫ್ಐಆರ್ ನಲ್ಲಿ ಹೆಸರಿಸಲಾಗಿದೆ.

ರಷ್ಯಾದಲ್ಲಿ ಪತ್ರಿಕಾ ಸಂವಾದದ ವೇಳೆ ಪ್ರಧಾನಿ ಮೋದಿ ಉಗ್ರವಾದದ ವಿರುದ್ಧ ಆಡಿದ ಮಾತುಗಳು ಹೀಗಿದ್ದವು- ‘ಉಗ್ರರಿಗೆ ಅವರದ್ದೇ ಶಸ್ತ್ರ ಉತ್ಪಾದನೆ ಕಾರ್ಖಾನೆಗಳಿಲ್ಲ, ಅವರದ್ದೇ ಕರೆನ್ಸಿ ವ್ಯವಸ್ಥೆ ಇಲ್ಲ. ಹೀಗಾಗಿ ಸರ್ಕಾರಗಳ ಸಹಕಾರವಿಲ್ಲದೇ ಉಗ್ರವಾದ ಹೇಗೆ ಉಳಿದುಕೊಳ್ಳುತ್ತದೆ ಎಂಬುದನ್ನು ನಾವು ಯೋಚಿಸಬೇಕು..’

ಮೋದಿ ಸರ್ಕಾರ ಈ ತತ್ವವನ್ನು ನಿಧಾನವಾಗಿ ದೇಶದೊಳಗಿನ ಪ್ರತ್ಯೇಕತಾವಾದಕ್ಕೂ ವಿಸ್ತರಿಸಿದಂತಿದೆ. ಈ ಹಿಂದೆ ಎಡಪಂಥೀಯ ಹಿಂಸಾಚಾರಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ದ ಹಲವು ಎನ್ಜಿಒಗಳ ಹಣದ ಹರಿವನ್ನು ಸರ್ಕಾರ ನಿರ್ಬಂಧಿಸಿತ್ತು. ಪ್ರಾರಂಭದಲ್ಲಿ ನೋಟು ಅಮಾನ್ಯವೂ ಕಾಶ್ಮೀರದ ಕಲ್ಲು ತೂರಾಟಗಾರರ ಕೈಯನ್ನು ಬರಿದಾಗಿಸಿತ್ತು. ಇದೀಗ ಪ್ರತ್ಯೇಕತಾವಾದಿಗಳ ಹಣದ ಹರಿವನ್ನು ನಿಯಂತ್ರಿಸುವುದರತ್ತ ಸರ್ಕಾರದ ಚಿತ್ತ ಹರಿದಿದೆ. ಈ ಪ್ರತ್ಯಾಕತಾವಾದಿ ಧುರೀಣರಿಗೆ ಸರ್ಕಾರದ ಕಡೆಯಿಂದ ನೀಡಿರುವ ಭದ್ರತೆ ಮತ್ತಿತರ ಸೌಲಭ್ಯಗಳನ್ನು ತೆಗೆದುಹಾಕಬೇಕೆಂಬ ಒತ್ತಯಾವಂತೂ ಸಾಮಾಜಿಕ ಜಾಲತಾಣಗಳಲ್ಲಿ ಮೊದಲಿನಿಂದ ವ್ಯಕ್ತವಾಗುತ್ತಿದೆ. ಇವೆಲ್ಲವನ್ನೂ ಕೇದ್ರ ಹಾಗೂ ರಾಜ್ಯ ಸರ್ಕಾರಗಳು ಯಾವ ತಾರ್ಕಿಕ ಹಂತಕ್ಕೆ ಮುಟ್ಟಿಸುತ್ತವೆ ಎಂಬುದರ ಬಗ್ಗೆ ಕುತೂಹಲವಿದೆ.

ಅಂದಹಾಗೆ, ಜಮ್ಮು-ಕಾಶ್ಮೀರದ ಎಲ್ಲ ವಿದ್ಯಮಾನಗಳ ಬಗ್ಗೆಯೂ ಟ್ವೀಟ್ ಮಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಪ್ರತ್ಯೇಕತಾವಾದಿಗಳ ಬಾಲ ತುಂಡರಿಯುವ ಈ ಯತ್ನದ ಬಗ್ಗೆ ಮಾತ್ರ ಪ್ರತಿಕ್ರಿಯಿಸುವುದಕ್ಕೆ ನಿರಾಕರಿಸಿದ್ದಾರೆ.

Leave a Reply