ಅಯೋಧ್ಯೆಯಿಂದ ರಾಮೇಶ್ವರಕ್ಕೆ ನೇರ ರೈಲ್ವೇ ಸಂಪರ್ಕ, ರೈಲ್ವೇ ಮೂಲಕ ದಕ್ಷಿಣ ಭಾರತದಲ್ಲಿ ಪ್ರಭಾವ ಬೀರಲು ಬಿಜೆಪಿ ತಂತ್ರ?

ಡಿಜಿಟಲ್ ಕನ್ನಡ ಟೀಮ್:

ಇದೇ ಮೊದಲ ಬಾರಿಗೆ ಅಯೋಧ್ಯೆಯಿಂದ ದಕ್ಷಿಣ ಭಾರತದ ರಾಜ್ಯಕ್ಕೆ ನೇರ ರೈಲ್ವೇ ಸಂಪರ್ಕ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಪ್ರಭುತ್ವ ಸಾಧಿಸಲು ಎಲ್ಲ ರೀತಿಯ ಕಸರತ್ತು ನಡೆಸುತ್ತಿರುವ ಬಿಜೆಪಿ ಈಗ ಈ ರಾಜ್ಯಗಳಲ್ಲಿ ತನ್ನ ಪ್ರಭಾವ ಬೀರುವ ಪ್ರಯತ್ನವನ್ನು ರೈಲ್ವೇ ಸಂಪರ್ಕದ ಮೂಲಕ ಆರಂಭಿಸಲು ಹೊರಟಿದೆ ಎಂದು ಬಣ್ಣಿಸಲಾಗುತ್ತಿದೆ.

ಜುಲೈ ತಿಂಗಳ ಅಂತ್ಯದ ವೇಳೆಗೆ ಈ ರೈಲ್ವೇ ಸೇವೆ ಆರಂಭವಾಗಲಿದ್ದು. ಅಯೋಧ್ಯೆಯಿಂದ ಸೇರಿದಂತೆ ಉತ್ತರ ಪ್ರದೇಶದ ಪ್ರಮುಖ ನಗರದಿಂದ ದಕ್ಷಿಣ ಭಾರತದ ಪ್ರಮುಖ ಹಿಂದು ಪವಿತ್ರ ಸ್ಥಳಗಳಿಗೆ ನೇರ ಸಂಪರ್ಕ ಕಲ್ಪಿಸುವುದು ಈ ರೈಲ್ವೆ ಮಾರ್ಗದ ಉದ್ದೇಶ. ಅಯೋಧ್ಯೆಯ ಬಿಜೆಪಿ ಸಂಸದ ಲಲ್ಲೂ ಸಿಂಗ್ ನೀಡಿರುವ ಹೇಳಿಕೆ ಪ್ರಕಾರ, ‘ಈ ರೈಲ್ವೆ ಸಂಪರ್ಕ ಜುಲೈ 29ರಂದು ಉದ್ಘಾಟನೆಯಾಗಲಿದೆ.’

ಸರ್ಕಾರದ ಈ ನಿರ್ಧಾರದ ಹಿಂದೆ ಯಾವುದೇ ಲೆಕ್ಕಾಚಾರವಿಲ್ಲ ಎನ್ನುತ್ತಿದ್ದಾರೆ ಲಲ್ಲೂ ಸಿಂಗ್. ಈ ಬಗ್ಗೆ ಅವರು ಹೇಳಿರುವುದಿಷ್ಟು…

‘ಇದು ಪವಿತ್ರ ಅಯೋಧ್ಯೆ ನಗರದ ಅಭಿವೃದ್ಧಿ ಯೋಜನೆಯ ಒಂದು ಭಾಗ. ಭಕ್ತಾದಿಗಳು ಈ ಪವಿತ್ರ ಸ್ಥಳಗಳನ್ನು ನೋಡಲು ಸಾಕಷ್ಟು ಆಸಕ್ತರಾಗಿದ್ದಾರೆ. ಹೀಗಾಗಿ ಅವರ ನೆರವಾಗುವ ಉದ್ದೇಶದಿಂದ ಈ ರೈಲ್ವೇ ಸಂಪರ್ಕ ಕಲ್ಪಿಸಲಾಗುತ್ತಿದೆ. ಜನರಲ್ಲಿ ವಿಶೇಷ ಭಾವನೆ ಹೊಂದಿರುವ ಅಯೋಧ್ಯೆ ನಗರದ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರದಾಗಿದೆ.’

ಆದರೆ, ಕೇಂದ್ರದ ಈ ನಿರ್ಧಾರವನ್ನು ವಿಶ್ಲೇಷಕರು ಬಿಜೆಪಿಯ ರಾಜಕೀಯ ಲಾಭದ ಲೆಕ್ಕಾಚಾರವಿದೆ ಎಂದು ಹೇಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ತನ್ನ ನಿಯಂತ್ರಣ ಸಾಧಿಸುವ ಪ್ರಯತ್ನವನ್ನು ಬಿಜೆಪಿ ರಾಮಜನ್ಮಭೂಮಿಯಿಂದಲೇ ಆರಂಭಿಸಲು ಈ ನಿರ್ಧಾರ ತೆಗೆದುಕೊಂಡಿದೆ ಎಂಬುದು ಅವರ ವಾದ. ಒಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ರಾಜಕೀಯ ಶಕ್ತಿಯಾಗಿ ಮೆರೆಯಲು ಬಿಜೆಪಿ ಮುಂದಿನ ದಿನಗಳಲ್ಲಿ ಯಾವ ಯಾವ ಕಾರ್ಯತಂತ್ರ ರೂಪಿಸಲಿದೆ ಎಂಬ ಕೂತೂಹಲ ಮೂಡಿದೆ.

Leave a Reply