ನಟಿ ಅವಂತಿಕಾರ ಲೈಂಗಿಕ ದೌರ್ಜನ್ಯ ಆರೋಪ: ನಡೆದಿದ್ದೇನು ಎಂಬುದರ ಬಗ್ಗೆ ಅವರೇ ನೀಡಿದ ವಿವರಗಳು

ಭಾನುಮತಿ ಬಿ ಸಿ

ರಂಗಿತರಂಗ, ಕಲ್ಪನಾ ೨ ಚಿತ್ರದಲ್ಲಿ ಅಭಿನಯಿಸಿ  ಮೆಚ್ಚುಗೆ ಗಳಿಸಿದ್ದ ಅವಂತಿಕಾ ಶೆಟ್ಟಿ “ರಾಜು ಕನ್ನಡ ಮೀಡಿಯಂ”  ಚಿತ್ರದ ನಿರ್ಮಾಪಕ ಸುರೇಶ ಹಾಗು ಸೆಟ್ ನಲ್ಲಿದ್ದ ಹುಡುಗರ ಮೇಲೆ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದಾರೆ.

ತನ್ನ ಟ್ವಿಟ್ಟರ್ ಖಾತೆಯಲ್ಲಿ ಹೆಣ್ಣುಮಕ್ಕಳು ಚಿತ್ರರಂಗದಲ್ಲಿ ನಿಜಕ್ಕೂ ಸೇಫ್ ಆಗಿದ್ದಾರಾ? ಅನ್ನುವಂಥ ಶೀರ್ಷಿಕೆ ಅಡಿಯಲ್ಲಿ ನಿರ್ಮಾಪಕ ಸುರೇಶ್ ವಿನಾಕಾರಣ ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡಿರುವುದನ್ನು ಹೇಳಿಕೊಂಡಿದ್ದಾರೆ.

ಅವಂತಿಕಾ – ಈ ಫೀಲ್ಡ್ನಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆನೇ ಇಲ್ಲ.  ಸಿನಿಮಾ ಶುರುವಾಗುವ ಮುನ್ನವೇ ನಾನು ತೀರಾ ಮೈಯೆಲ್ಲಾ ಕಾಣುವಂಥಾ ಬಟ್ಟೆ ಹಾಕುವುದಿಲ್ಲ ಎನ್ನುವುದನ್ನು ನಿರ್ಮಾಪಕ ,ನಿರ್ದೇಶಕರಿಗೆ ಸ್ಪಷ್ಟವಾಗಿ ಹೇಳಿದ್ದೆ. ಆದರೂ ಸೆಟ್ ಗೆ ಬಂದ ಮೇಲೆ ಮಾತಿಗೆ ತಪ್ಪಿದರು.  ಬಾಂಬೆಯಲ್ಲಿದ್ದೀರಿ ಇಂಥಾ (expose ಆಗೋವಂಥದ್ದು) ಬಟ್ಟೆ ಹಾಕಲ್ವ ? ಎಲ್ಲಾ ನಟಿಯರು ಹಾಕ್ತಾರೆ ನಿಮಗೇನು ಕಷ್ಟ ? ಅಂದ್ರು . ಅದಕ್ಕೆ ನಾನು ಬಾಂಬೆಯವರು ಬರೀ ಮೈಯಲ್ಲಿ ಓಡಾಡ್ತಾರಾ? ಆವ್ರೇನು ಬಟ್ಟೆ ಹಾಕಲ್ವಾ ಅಂತ ಕೇಳಿದ್ದೆ. ನಾನು ಸೆಟ್ ನಲ್ಲಿ ಮಿನಿ ಸ್ಕರ್ಟ್ ಹಾಕೊಂಡಿದ್ರೆ ಅಲ್ಲಿದ್ದ ಲೈಟ್ ಬಾಯ್ಸ್ ಕೂಡ ಸಕ್ಕತಾಗಿ ಕಾಣ್ತಿದ್ದೀರಾ ಅಂತ ಕಾಮುಕ ಕಣ್ಣುಗಳಿಂದ ನೋಡ್ತಾ ಕಾಮೆಂಟ್ ಮಾಡ್ತಿದ್ರು. ಮೈಕ್ ಹಾಕೋ ನೆಪದಲ್ಲಿ ಮೈ ಮುಟ್ಟುತ್ತಿದ್ರು.

ಸೆಟ್ ನಲ್ಲಿ ಬಹಳ ಸಭ್ಯರ ಹಾಗೆ ನಡೆದುಕೊಳ್ತಿದ್ದ ನಿರ್ಮಾಪಕ ಸುರೇಶ್ ನನ್ನನ್ನ ಎಲ್ರ ಜೊತೆ ಫ್ರೆಂಡ್ಲಿ ಆಗಿರಿ. ಸೆಟ್ ಗೆ ಬಂದ  ತಕ್ಷಣ ಎಲ್ರಿಗೂ ಹಾಯ್ ಹೇಳಿ ಎಲ್ರಿಗೂ ಸಹಕರಿಸಿ ಅಂತಿದ್ರು. ನಾನು ಬಂದಿರೋದು ನಟಿಸೋಕೆ ಅಷ್ಟೇ .ಎಲ್ಲರ ಜೊತೆ ಹರಟೆ ಹೊಡೆಯೋಕೆ, ಓಲೈಸೋಕೆ ಅಲ್ಲ ಅಂದಿದ್ದೆ. ಅದು ನನ್ನ ಸ್ವಭಾವಾನು ಅಲ್ಲ. ಯಾವಾಗ ನಾನು ಅವರಿಚ್ಛೆಯಂತೆ ನಡೆಯಲಿಲ್ಲವೋ ಆಮೇಲೆ ಕಂಪ್ಲೇಂಟ್ ಮಾಡೋದಿಕ್ಕೆ ಶುರು ಮಾಡಿದ್ರು. ನನ್ನ ನಟನೆ ಬಗ್ಗೆ ಅಪಸ್ವರ ಎತ್ತಿದರು. ಅವರು ಕೊಟ್ಟ ಚೆಕ್ ಬೌನ್ಸ್ ಆಗಿದೆ. ಕೇಸ್ ಕೂಡ ಹಾಕಿದ್ದೇನೆ. ಇದೇ ವಿಚಾರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಏಪ್ರಿಲ್ ೧೨ ಕ್ಕೆ ಪತ್ರ  ಕೂಡ ಬರೆದಿದ್ದೇನೆ. ಆದರೆ ಅಲ್ಲಿಂದ ಯಾವ ಉತ್ತರಾನೂ ಬಂದಿಲ್ಲ.

ಶೂಟಿಂಗ್ ಆದಮೇಲೆ  ಬೆಂಗಳೂರಿನ  ಗೋಲ್ಡ್ ಫಿಂಚ್ ಹೋಟೆಲ್ ಗೆ ನಿರ್ಮಾಪಕ ಸುರೇಶ್ ಬರೋದಿಕ್ಕೆ ಹೇಳಿದ್ರು. ನಾನು ಅಲ್ಲಿಗೆ ಹೋದೆ. ಅಲ್ಲಿದ್ದ ಮ್ಯಾನೇಜರ್ ನ ಪರ್ಸನಲ್ ಆಗಿ ಮಾತಾಡ್ಬೇಕು ಅಂತ ಹೊರಕ್ಕೆ ಕಳಿಸಿದ್ರು. ಆಮೇಲೆ ನಂಗೆ ನೀವು ಫ್ರೆಂಡ್ಲಿ ಯಾಗಿ ಮೂವ್ ಮಾಡ್ಬೇಕು ಅಂದ್ರು . ನಾನು ನೀವು ಇಂಡೈರೆಕ್ಟ್ ಆಗಿ ಏನ್ ಹೇಳ್ತಿದ್ದೀರಿ ಅನ್ನೋದು ಗೊತ್ತಾಗ್ತಿದೆ. ನಾನು ಆ ಥರ ಇರೋದಿಕ್ಕೆ ಸಾಧ್ಯವೇ ಇಲ್ಲ ಅಂತ  ಡೈರೆಕ್ಟ್ ಆಗಿ ಹೇಳೇ ಬಿಟ್ಟೆ . ನಂಗೆ ತುಂಬಾ ಭಯ ಆಯ್ತು. ಅಲ್ಲಿಂದ ತಕ್ಷಣ ಆಚೆ ಬಂದು ಬಿಟ್ಟೆ . ನಮಗೆ ಇಷ್ಟವಿಲ್ಲದಿರೋರ ಜೊತೆಯಲ್ಲಿ ಶೇಕ್ ಹ್ಯಾಂಡ್ ಕೂಡ ಮಾಡೋದಿಕ್ಕೆ ಸಾಧ್ಯವಾಗೋದಿಲ್ಲ. ಅಂಥಾದ್ದರಲ್ಲಿ ಒಂದು ಸಿನಿಮಾ ಅವಕಾಶಕ್ಕೋಸ್ಕರ ಯಾರ್ಯಾರ್ ಜೊತೇನೋ ಹೊಂದಾಣಿಕೆ ಮಾಡಿಕೊಳ್ಳೋಕೆ ಆಗತ್ತಾ? ನಾನು ನಟಿಯರು ಅಂದ್ದಾಕ್ಷಣ ಯಾರ್ ಜೊತೆ ಹೇಗೆ ಬೇಕಾದ್ರೂ ಇರೋದು ಸಾಧ್ಯನಾ ?

ನಾನು ನೇರವಾಗಿ ಅವರ ಇಷ್ಟದಂತೆ ನಡೆದುಕೊಳ್ಳೋಕೆ ಆಗಲ್ಲ ಅಂದಮೇಲೆ ನನ್ನ ಬಗ್ಗೆ, ನನ್ನ ನಟನೆಯ ಬಗ್ಗೆ ಚೀಪ್ ಆಗಿ ಮಾತಾಡಿದ್ದಾರೆ.  ನನ್ನ ಮೇಲು ಕೂಗಾಡೋಕೂ ಶುರು ಮಾಡಿದ್ರು .ನನ್ನ ಪರ್ಫಾರ್ಮೆನ್ಸ್ ಸರಿಯಿಲ್ಲ ಅಂತ ಮೊದಲೇ ಗೊತ್ತಾಗಬೇಕಿತ್ತಲ್ಲ ಅಷ್ಟೆಲ್ಲ ಶೂಟಿಂಗ್ ಮುಗಿದ ಮೇಲೆ ಬೇಕಂತ ತಗಾದೆ ತೆಗೆದಿದ್ದಾರೆ. ನನ್ನ ನಡತೆಯ ಬಗ್ಗೆ , ನನ್ನ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆ ಬರೋ ಹಾಗೆ ಮಾತಾಡಿ ಆರ್ಟಿಕಲ್ ಮಾಡಿಸಿದ್ದಾರೆ. ಇದು ನನ್ನ ಕೆರಿಯರ್ ದೃಷ್ಟಿಯಿಂದ ತುಂಬಾ ತೊಂದ್ರೆ ಅನ್ನಿಸತ್ತೆ ನಂಗೆ . ಅಷ್ಟೇ ಅಲ್ಲ  ನಡತೆಯ ಬಗ್ಗೆ ತಪ್ಪಾಗಿ ಬಿಂಬಿಸಿದ್ರೆ ಯಾರಿಗೇ ಆದ್ರೂ  ಮಾನಸಿಕ  ಕಿರುಕುಳ ಆಗಲ್ವ ? ನಂಗಂತೂ ತುಂಬಾ ಹಿಂಸೆ ಆಗ್ತಿದೆ. (ಬಿಕ್ಕಿ ಬಿಕ್ಕಿ ಅಳ್ತಾ …)

ಗೋಲ್ಡ್ ಫಿಂಚ್ ಘಟನೆ ಆದಮೇಲೆ ನಾನು ಸೈಲೆಂಟ್ ಆಗ್ಬಿಟ್ಟೆ. ಇದನ್ನೇ ಯೋಚನೆ ಮಾಡ್ತಾ ಕೂತ್ರೆ ಕೆಲಸ  ಮಾಡಕ್ಕಾಗಲ್ಲ . ಇಲ್ಲಿಗೇ ಬಿಟ್ಟು ಬಿಡೋಣ ಅಂದ್ಕೊಡಿದ್ದೆ. ಆದ್ರೆ ಅವರ ಮೇಲೆ ಚೆಕ್ ಬೌನ್ಸ್ ಕೇಸ್  ಹಾಕಿದ ಮೇಲೆ ನನ್ನ ಮೇಲೆ ಸುಳ್ಳು ಅಪವಾದ ಸೃಷ್ಟಿ ಮಾಡಿದ್ರು. ಸುಳ್ಳುಗಳೇ  ತುಂಬಿದ ಕೆಟ್ಟ ಆರ್ಟಿಕಲ್  ಬಂತು. ಈಗ ನಂಗೆ ಮಾತಾಡಲೇ ಬೇಕು ಅನ್ನಿಸ್ತು. ಸತ್ಯ ಹೇಳೋ ತಾಕತ್ತು ಇಲ್ಲದಿರೊವ್ರು ಸುಳ್ಳುಗಳನ್ನ ಸೃಷ್ಟಿ ಮಾಡಿ ತಮ್ಮ ತಪ್ಪನ್ನ ಮುಚ್ಚಿಕೊಳ್ತಾರೆ. ಸುರೇಶ್  ಕೂಡ ಅದನ್ನೇ ಮಾಡಿದ್ದು. ಆತ ತುಂಬಾ ಸ್ಮಾರ್ಟ್ ಇದ್ದಾರೆ. ಅವರೊಳಗಿನ ಇನ್ನೊಂದು ಮುಖ ಗೊತ್ತೇ ಆಗಲ್ಲ. ಹತ್ತಿರದಿಂದ ನೋಡಿದರೇನೇ ಗೋಮುಖವ್ಯಾಘ್ರ ಅಂತ ಗೊತ್ತಾಗೋದು.

Leave a Reply