ನಿಮಗೆ ಗೊತ್ತೇ?: ಜಪಾನಿನಲ್ಲೂ ಗಣೇಶನಿದ್ದಾನೆ, ಆದರೆ ಎಲ್ಲ ಕಡೆ ದರ್ಶನವಿಲ್ಲ!

ಡಿಜಿಟಲ್ ಕನ್ನಡ ವಿಶೇಷ

ಬೌದ್ಧಮತದ ಪ್ರಭಾವಕ್ಕೆ ಸಿಕ್ಕ ಜಪಾನಿನಲ್ಲಿ ಭಾರತೀಯ ಧಾರ್ಮಿಕ ಪದ್ಧತಿಗಳ ಕುರುಹು ಇರುವುದು ಅಚ್ಚರಿಯ ಸಂಗತಿ ಅಲ್ಲವೇ ಅಲ್ಲ.

ಹಾಗೆಂದೇ ಇಲ್ಲಿ ಗಣಪನಿದ್ದಾನೆ. ಅಷ್ಟೇ ಏಕೆ, ಭಾರತದ ಬಹುಪಾಲು ದೇವದೇವತೆಗಳು ಹೆಸರು ಬದಲಿಸಿಕೊಂಡು ಇಲ್ಲಿನ ದೇವಾಲಯಗಳಲ್ಲಿ ನೆಲೆಸಿದ್ದಾರೆ. ಶಿವ (ದೈಜೈತೆನ್), ಬ್ರಹ್ಮ (ಬೊಂತೆನ್), ಇಂದ್ರ (ತೈಶಾಕುತೆನ್), ವರುಣ (ರೈಜಿನ್), ಯಮ (ಎನ್ಮತೆನ್), ಲಕ್ಷ್ಮೀ (ಕಿಚಿಜೊತೆನ್), ಸರಸ್ವತಿ (ಬೆಂಜೈತೆನ್) ಹೀಗೆ..

ಗಣೇಶನಿಲ್ಲಿ ಕಂಗಿತೆನ್. ಅಂದರೆ ಆನಂದದ ದೈವ. ವಿನಾಯಕ ತೆನ್, ಬಿನಾಯಕ ತೆನ್ ಎಂಬ ಹೆಸರುಗಳೂ ಚಾಲ್ತಿಯಲ್ಲಿರುವುದು ಭಾರತದ ಬೇರುಗಳನ್ನು ಪುಷ್ಟೀಕರಿಸುತ್ತದೆ. ಗಣಪತಿಯ ಮುಖ್ಯ ಗುರುತಾದ ಆನೆತಲೆಯಲ್ಲೇ ಅಲ್ಲೂ ಚಿತ್ರಿತಗೊಂಡಿರುವುದು. ಆದರೆ ಹೋಲಿಕೆ ಇಲ್ಲಿಗೇ ಕೊನೆಗೊಳ್ಳುತ್ತದೆ. ಏಕೆಂದರೆ ಇಲ್ಲಿ ಕಂಗಿತೆನ್ ಅರ್ಥಾತ್ ಗಣಪತಿ ಒಬ್ಬಂಟಿಯಲ್ಲ. ಹೆಣ್ಣು ಗಜಮುಖದವಳನ್ನು ಆಲಂಗಿಸಿಕೊಂಡ ಮಾದರಿಯಲ್ಲೇ ಪುರಾತನ ಮೂರ್ತಿಗಳಿವೆ. ಟೊಕಿಯೊದ ಮತ್ಸೊಚಿಯಾಮಾ ಗಣೇಶ ದೇವಾಲಯ ಅತ್ಯಂತ ಪ್ರಾಚೀನವಾದದ್ದು. 1603-1867ರ ಎಡೊ ಕಾಲಘಟ್ಟವು ಜಪಾನಿನ ಇತಿಹಾಸದಲ್ಲಿ ಆರ್ಥಿಕ ಉನ್ನತಿ, ಕಲೆ- ವಾಸ್ತುಶಿಲ್ಪ ವೃದ್ಧಿಗಳಿಗೆ ಪ್ರಸಿದ್ಧಿ. ಟೊಕಿಯೊ ದೇಗುಲವೂ ಸೇರಿದಂತೆ ಸಾವಿರಾರು ಕಂಗಿತೆನ್ ದೇಗುಲಗಳು ಈ ಅವಧಿಯಲ್ಲಿ ನಿರ್ಮಾಣಗೊಂಡವು. ಟೋಕಿಯೊದ ಈ ದೇವಾಲಯದಲ್ಲಂತೂ ಮುಖ್ಯ ಅರ್ಚಕನೂ ಮೂರ್ತಿಯನ್ನು ನೋಡದೇ ಪೂಜಿಸುತ್ತಾನಂತೆ. ಕಂಗಿತೆನ್ ಬಹಳ ಶಕ್ತಿಶಾಲಿ ಆಗಿರುವುದರಿಂದ ಆ ಶಕ್ತಿಯನ್ನು ಭಕ್ತ ತಡೆದುಕೊಳ್ಳುವುದು ಕಷ್ಟ ಎಂಬ ಪ್ರತೀತಿ. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ರಕ್ಷಣಾತ್ಮಕವಾಗಿ ಹುದುಗಿಸಿಟ್ಟಿದ್ದ ಮೂರ್ತಿಯನ್ನು ತೆಗೆದು ಮರು ಪ್ರತಿಷ್ಟಾಪಿಸುವಾಗಲಷ್ಟೇ ಇಲ್ಲಿನ ಕಂಗಿತೆನ್ ಮೂರ್ತಿಯನ್ನು ಕಣ್ಣೆತ್ತಿ ನೋಡಿದ್ದು. ನಂತರ ಗರ್ಭಗುಡಿಯಲ್ಲಿ ಬಂಧಿ.

ಆದರೆ ವಿಘ್ನಗಳನ್ನು ನಿವಾರಿಸು ಎದು ಜಪಾನಿಯರು ಗರ್ಭಗುಡಿ ಎದುರು ಪ್ರಾರ್ಥಿಸುವುದು ಹೆಚ್ಚುತ್ತಲೇ ಹೋಗಿದೆ. 1990ರಲ್ಲಿ ಜಪಾನಿನ ಆರ್ಥಿಕ ಶರವೇಗಕ್ಕೆ ಆಘಾತ ಬಿದ್ದಾಗ ಬಹಳಷ್ಟು ಮಂದಿ ಧಾರ್ಮಿಕತೆಯ ಮೊರೆ ಹೋದರಂತೆ. ನಮ್ಮ ಗಣೇಶ ಮೋದಕ ಪ್ರಿಯನಾದರೆ ಜಪಾನಿನ ಕಂಗಿತೆನ್ ಅಲ್ಲಿ ಸ್ಥಳೀಯವಾಗಿ ದೊರೆಯುವ ಬಿಳಿ ಮೂಲಂಗಿ ಪ್ರಿಯ. ಅಲ್ಲಿನ ಭಕ್ತಾದಿಗಳು ಮೂಲಂಗಿಯನ್ನೇ ಕಂಗಿತೆನ್ ಗೆ ಸಮರ್ಪಿಸುವುದು. ಹಾಗೆಂದೇ ನಮ್ಮ ದೇವಾಲಯಗಳ ಸಮೀಪ ಹಣ್ಣು-ಕಾಯಿ ಮಾರುವವರಿರುವಂತೆ ಅಲ್ಲಿ ಮೂಲಂಗಿ ಮಾರುವವರ ಭರಾಟೆ.

Leave a Reply