ಅಲ್ಲಾಹುವಿಗಾಗಿ ಎನ್ನುತ್ತ ಇರಿದಿರಿದು ಕೊಂದರು: ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್… ಫಾಲಿಂಗ್ ಡೌನ್; ಬೆನ್ನುಹುರಿ ಗಡುಸಾಗಿಸಿಕೊಳ್ಳಬೇಕಿದೆ ಬ್ರಿಟನ್!

 

ಡಿಜಿಟಲ್ ಕನ್ನಡ ಟೀಮ್

ಕೆಲ ದಿನಗಳ ಹಿಂದೆ ಸಂಗೀತ ಸಮಾರಂಭವೊಂದರ ಮೇಲೆ ಇಸ್ಲಾಂ ತೀವ್ರವಾದಿಯ ಆತ್ಮಹತ್ಯೆ ದಾಳಿಯಿಂದ 22 ಸಾವು ಅಂತ ಲೆಕ್ಕ ಬರೆದುಕೊಂಡಿದ್ದ ಇಂಗ್ಲೆಂಡ್, ಶನಿವಾರದ ಮುಂಜಾವಿಗೆಲ್ಲ ಇನ್ನೊಂದು ಲೆಕ್ಕ ಬರೆದುಕೊಂಡಿದೆ.

ಆಗಂತುಕರ ಇರಿತದಿಂದ 6 ಸಾವು ಹಾಗೂ 48ಕ್ಕೂ ಹೆಚ್ಚು ಮಂದಿಗೆ ಗಾಯ.

ಲಂಡನ್ ಸೇತುವೆ ಮೇಲಿದ್ದ ಪಾದಚಾರಿಯೊಬ್ಬನಿಗೆ ಕಾರು ಗುದ್ದುವ ಮೂಲಕ ವಿಧ್ವಂಸ ಶುರುವಾಗಿದೆ. ನಂತರ ಬಿಳಿ ಕಾರಿನಿಂದ ಇಳಿದ ಮೂವರು ಹತ್ತಿರದ ಬೌರೊ ಮಾರುಕಟ್ಟೆ ಪ್ರದೇಶಕ್ಕೆ ನುಗ್ಗಿ ಸಿಕ್ಕ ಸಿಕ್ಕವರನ್ನೆಲ್ಲ ಮನಬಂದಂತೆ ಇರಿದಿದ್ದಾರೆ. ಜನರನ್ನು ಹೆದರಿಸುವುದಕ್ಕೆ ನಕಲಿ ಬಾಂಬ್ ಧಿರಿಸನ್ನೂ ಇವರು ಧರಿಸಿದ್ದರು. ಮೂವರನ್ನೂ ಪೊಲೀಸರು ಹೊಡೆದುಹಾಕಿದ್ದಾರೆ, ಅದಕ್ಕೂ ಮೊದಲು ಉಗ್ರರಿಂದ ಇರಿತಕ್ಕೊಳಗಾಗಿದ್ದಾರೆ. ಇಂಗ್ಲೆಂಡಿನಲ್ಲಿ ಮೂರು ತಿಂಗಳಲ್ಲಿ ಆಗುತ್ತಿರುವ ಮೂರನೇ ದಾಳಿ ಇದು.

ಗೆರಾದ್ ಎಂಬ ಪ್ರತ್ಯಕ್ಷದರ್ಶಿ ಪ್ರಕಾರ- ‘ಇದು ಅಲ್ಲಾಹುವಿಗಾಗಿ ಎಂದು ಕೂಗುತ್ತ ಯುವತಿಯೊಬ್ಬಳನ್ನು 10-15 ಬಾರಿ ಇರಿಯುತ್ತ ಹೋದರು. ಆಕೆ ಹೆಲ್ಪ್ ಹೆಲ್ಪ್ ಎಂದು ಕೂಗಿಕೊಳ್ಳುತ್ತಿದ್ದಳು.’

ಇರಿತಕ್ಕೆ ಇಳಿಯುವುದಕ್ಕೂ ಮೊದಲೇ ವ್ಯಾನಿನ ಮೂಲಕ 5-6 ಮಂದಿಗೆ ಗುದ್ದಿರುವುದಾಗಿ ಇನ್ನೊಬ್ಬ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಲಂಡನ್ ಬ್ರಿಡ್ಜಿಗೆ ಹತ್ತಿರದಲ್ಲೇ ಇರುವ ಪಬ್ ಒಳಗೆ ಹೊಕ್ಕಿ ಇರಿಯುವ ಪ್ರಯತ್ನ ನಡೆಯಿತಾದರೂ ಬೌನ್ಸರ್ ಗಳು ತ್ವರಿತವಾಗಿ ಬಾಗಿಲು ಹಾಕಿಕೊಂಡಿದ್ದರಿಂದ ಹಲವರ ಪ್ರಾಣ ಉಳಿಯಿತೆಂಬುದು ಇನ್ನೊಬ್ಬ ಪ್ರತ್ಯಕ್ಷದರ್ಶಿ ವಿವರಣೆ.

ಇವೇನೇ ಇರಲಿ. ಇಲ್ಲಿ ಸತ್ತವರ ಸಂಖ್ಯೆ ಎಷ್ಟು ಎಂಬುದರ ಮೇಲೆ ಇದರ ಭೀಕರತೆ ನಿರ್ಧಾರವಾಗುವುದಿಲ್ಲ. ಬದಲಿಗೆ, ಕೇವಲ 2 ವಾರಗಳ ಹಿಂದೆ ಮ್ಯಾಂಚೆಸ್ಟರಿನಲ್ಲಿ ಉಗ್ರ ದಾಳಿಯಾಗಿ ಇಂಗ್ಲೆಂಡ್ ತನ್ನ ಭದ್ರತೆ ಹೆಚ್ಚಿಸಿಕೊಂಡ ಮೇಲೂ ಯಾವುದೋ ಮಾರ್ಗದಲ್ಲಿ ವಿಧ್ವಂಸ- ಪ್ರಾಣಹಾನಿ ಸೃಷ್ಟಿಸಿಯೇ ಸಿದ್ಧ ಎಂಬುದನ್ನು ಉಗ್ರರು ನಿರೂಪಿಸಿದ್ದಾರೆ. ಈ ಬಾರಿ ಬಾಂಬ್ ಸಿಕ್ಕಿಲ್ಲ, ಆದರೇನಂತೆ ಇರಿದು ಕೊಂದಾದರೂ ಆತಂಕವಾದ ಹರಡುತ್ತೇವೆ ಎಂದು ನುಗ್ಗಿರುವುದು ಸ್ಪಷ್ಟ.

ಅಲ್ಲಿಗೆ ಬ್ರಿಟನ್ ಜನಮಾನಸದಲ್ಲಿ ಪ್ರತಿಕ್ಷಣದ ಆತಂಕವೊಂದನ್ನು ನೆಟ್ಟುಬಿಟ್ಟಿದ್ದಾರೆ ಉಗ್ರರು. ಜೂನ್ 8ಕ್ಕೆ ಚುನಾವಣೆ ಎದುರಿಗಿರಿಸಿಕೊಂಡಿರುವಾಗಲೇ ಇನ್ಯಾವ ದಾಳಿಯಾಗುತ್ತದೋ, ಮುಂದಿನ ದಾಳಿ ಮತಗಟ್ಟೆಯಲ್ಲೇ ಆದೀತಾ ಎಂದು ಹೆದರಬೇಕಾದ ಪರಿಸ್ಥಿತಿ ಬ್ರಿಟನ್ನಿಗರದ್ದು. ಈ ನಿಟ್ಟಿನಲ್ಲಿ ಮನೋಯುದ್ಧವೊಂದನ್ನು ಉಗ್ರರು ಗೆಲ್ಲುತ್ತಿದ್ದಾರೆ ಎಂದೇ ವಿಶ್ಲೇಷಿಸಬಹುದು.

ಇಷ್ಟಕ್ಕೂ ಬ್ರಿಟನ್ನಿಗೆ ಇಂಥ ಪರಿಸ್ಥಿತಿ ಬಂದಿದ್ದು ಹೇಗೆ, ಇಸ್ಲಾಮಿಕ್ ಉಗ್ರವಾದಕ್ಕೆ ಅದು ಹೇಗೆ ಮಂಡಿ ಊರುತ್ತಿದೆ ಎಂಬುದನ್ನು ಈ ಹಿಂದಿನ ಲೇಖನದಲ್ಲಿ ವಿವರಿಸಿದ್ದೆವು.

ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್, ಫಾಲಿಂಗ್ ಡೌನ್ ಎಂಬುದು ಪ್ರಸಿದ್ಧ ನರ್ಸರಿ ಪದ್ಯ. ಭೌತಿಕವಾಗಿ ಲಂಡನ್ ಸೇತುವೆ ಗಟ್ಟಿಯಾಗಿಯೇ ನಿಂತಿದೆಯಾದರೂ ಮನೋಸ್ಥೈರ್ಯ ಕುಸಿದಿರುವುದು ಸುಳ್ಳಲ್ಲ. ಬಿಲ್ಡ್ ಇಟ್ ಅಪ್ ವಿತ್ ವುಡ್ ಆ್ಯಂಡ್ ಕ್ಲೆ, ಮೈ ಫೇರ್ ಲೇಡಿ – ಬೀಳುತ್ತಿರುವ ಲಂಡನ್ ಸೇತುವೆಯನ್ನು ಕಟ್ಟಿಗೆ ಗಾರೆಗಳಿಂದ ಕಟ್ಟಬೇಕಿದೆ ರಾಣಿಯೇ ಎಂದು ಪದ್ಯ ಗುನುಗುತ್ತದೆ.

ಆದರೆ ನಿಜಾರ್ಥದಲ್ಲಿ ಇಂಗ್ಲೆಂಡ್ ಕಟ್ಟಿಕೊಳ್ಳಬೇಕಿರುವುದು ಮನೋಸ್ಥೈರ್ಯವನ್ನು. ಇಸ್ಲಾಂ ಉಗ್ರವಾದದ ವಿರುದ್ಧ ಬಿಗು ನಿಲುವನ್ನು. ಕಟ್ಟಿಗೆ, ಇಟ್ಟಿಗೆ, ಸಿಮೆಂಟುಗಳಲ್ಲೆಲ್ಲ ಕಟ್ಟುವುದಕ್ಕೆ ಬ್ರಿಟನ್ ಚುರುಕಿದ್ದಿರಬಹುದು. ಆದರೀಗ ಬೇಕಿರುವುದು ಭೌತಿಕ ಪದಾರ್ಥವಲ್ಲ, ಬೆನ್ನುಹುರಿ! ತಾನ್ಯಾರೆಂಬ ಐಡೆಂಟಿಟಿ ಕಂಡುಕೊಂಡು ಎದ್ದು ನಿಲ್ಲದಿದ್ದರೆ ಬ್ರಿಟನ್ ಸೋತು ಶರಮಾಗುತ್ತದೆ ಇಲ್ಲವೇ ಅನುಕ್ಷಣವೂ ಆತಂಕದಲ್ಲಿ ಸಾಯುತ್ತ ಬದುಕಿರುತ್ತದೆ.

Leave a Reply