ಸ್ವಾಮಿ ನಾರಾಯಣ ಸನ್ನಿಧಿಯಲ್ಲಿ ಇಂಗ್ಲೆಂಡ್ ಪ್ರಧಾನಿ: ಭಾರತದ ಸಾಫ್ಟ್ ಪವರ್ ಬಿಂಬಿಸುತ್ತಿದೆ ಈ ಚಿತ್ರ

ಡಿಜಿಟಲ್ ಕನ್ನಡ ಟೀಮ್

ಜೂನ್ 8ರಂದು ಇಂಗ್ಲೆಂಡ್ ಚುನಾವಣೆ ಎದುರಿಸುತ್ತಿದೆ. ಇವತ್ತಿನಮಟ್ಟಿಗೆ ಅಲ್ಲಿ ಉಗ್ರರು ಹತ್ಯೆಗಳನ್ನು ನಡೆಸಿರುವ ಕರಾಳ ಸುದ್ದಿ. ಆದರೆ ಲಂಡನ್ ಬ್ರಿಡ್ಜ್ ಬಳಿ ಈ ಘೋರ ಕೃತ್ಯ ನಡೆಯುವುದಕ್ಕೂ ಸ್ವಲ್ಪ ಮುಂಚೆ ಅಲ್ಲಿನ ಪ್ರಧಾನಿ ಥೆರೆಸಾ ಮೆ, ಸ್ವಾಮಿ ನಾರಾಯಣ ದೇವಸ್ಥಾನವನ್ನು ಸಂದರ್ಶಿಸಿದರು.

ಭಾರತದ ಹೊರಗಡೆ ಇರುವ ಅತಿದೊಡ್ಡ ಹಿಂದು ದೇವಾಲಯ ಎಂಬ ಖ್ಯಾತಿ ಬ್ರಿಟನ್ನಿನ ಸ್ವಾಮಿ ನಾರಾಯಣ ದೇಗುಲದ್ದು. ಪತಿಯ ಒಡಗೂಡಿ ದೇವಾಲಯವನ್ನು ಸಂದರ್ಶಿಸಿದ ಬ್ರಿಟನ್ ಪ್ರಧಾನಿ ಅಲ್ಲಿನ ಹಿಂದು ಸಂಪ್ರದಾಯಗಳನ್ನೆಲ್ಲ ಪಾಲಿಸಿದರು. ಚಪ್ಪಲ್ಲಿ ಬಿಚ್ಚಿಟ್ಟು ದೇವಸ್ಥಾನ ಪ್ರವೇಶಿಸಿ ಸ್ವಾಮಿ ನಾರಾಯಣಗೆ ಅಭಿಷೇಕ, ಹೂವಿನಲಂಕಾರಗಳಿಂದ ಪೂಜಿಸಿದರು.

ಇದಾದ ನಂತರ 20 ನಿಮಿಷಗಳ ಭಾಷಣವಿತ್ತು. ‘ಇಂಗ್ಲೆಂಡ್ ಅನ್ನು ಅರ್ಹತೆಗೆ ಮಣೆ ಹಾಕುವ ಅತ್ಯುನ್ನತ ನೆಲವನ್ನಾಗಿ ಮಾಡುವುದಕ್ಕೆ ನೀವೆಲ್ಲರೂ ಸಹಕರಿಸಬೇಕು.ಜಾಗತಿಕ ಬ್ರಿಟನ್ ನಿರ್ಮಾಣಕ್ಕೆ, ಭಾರತದೊಂದಿಗಿನ ಕೊಂಡಿಗಳನ್ನು ಮತ್ತಷ್ಟು ಸುಭದ್ರಗೊಳಿಸುವುದಕ್ಕೆ ನೀವೆಲ್ಲ ನನ್ನ ಜತೆ ಇರಬೇಕು. ಬಲಿಷ್ಟ, ನ್ಯಾಯಸಮ್ಮತ, ಸಮೃದ್ಧ ದೃಷ್ಟಿಕೋನವೊಂದನ್ನು ನಾವು ಸೃಷ್ಟಿಸೋಣ’ ಎಂದು ಸುಮಾರು 2000 ಸಂಖ್ಯೆಯಲ್ಲಿದ್ದ ಭಕ್ತಗಣಕ್ಕೆ ಮನವಿ ಮಾಡಿಕೊಂಡರು. ಬ್ರಿಟನ್ನಿನ ಭಾರತೀಯರು ಜೀವನದ ಎಲ್ಲ ರಂಗಗಳಲ್ಲಿ ಮಾದರಿಯಾಗಿದ್ದಾರೆ ಅಂತಲೂ ಕೊಂಡಾಡಿದರು.

2013ರಲ್ಲಿ ಸ್ವಾಮಿ ನಾರಾಯಣ ದೇವಾಲಯಕ್ಕೆ ನೀಡಿದ್ದ ಭೇಟಿಯ ನಂತರದ ಎರಡನೇ ಸಂದರ್ಶನವಿದು. ಹಿಂದು ಭಾವನೆಗಳ ಮುಖಾಂತರ ವಿದೇಶಗಳಲ್ಲಿ ಭಾರತವು ಪ್ರತಿನಿಧಿಸುತ್ತಿರುವ ಸಾಫ್ಟ್ ಪವರ್ ಎಂಥಾದ್ದು ಎಂಬುದರ ಸುಳಿವೊಂದನ್ನು ಈ ಭೇಟಿಯ ಚಿತ್ರಗಳು ಕಟ್ಟಿಕೊಡುತ್ತವೆ.

Leave a Reply