ಪಾರ್ವತಮ್ಮನವರ ಸರಕಾರಿ ಸಂಸ್ಕಾರ, ಸ್ಮಾರಕ ಎಷ್ಟು ಸರಿ?

ಅದೇನು ಗ್ರಹಚಾರವೋ ಏನೋ ಗಣ್ಯರ ಅಂತಿಮ ಸಂಸ್ಕಾರ, ಸಮಾಧಿ-ಸ್ಮಾರಕ ನಿರ್ಮಾಣ ವಿಚಾರ ಬೇಡ, ಬೇಡ ಎಂದರೂ ವಿವಾದಗಳಾಗಿ ಪರಿವರ್ತಿತವಾಗುತ್ತಿವೆ. ‘ಶರಣರ ಗುಣವನ್ನು ಮರಣದಲ್ಲಿ ಕಾಣು’ ಎನ್ನುವುದು ಇದೀಗ ‘ಗಣ್ಯರ ಗುಣವನ್ನು ಸಮಾಧಿಯಲ್ಲಿ ಕಾಣು’ ಎಂಬಲ್ಲಿಗೆ ಬಂದು ನಿಂತಿದೆ. ಪ್ರಮುಖರ ಸಾವಲ್ಲಿ ಅವರ ಗುಣಾವಗುಣಗಳ ಚರ್ಚೆ ಆಗುತ್ತದೆ. ಅವರ ಸದ್ಬುದ್ಧಿ, ಮಾಡಿದ ಸತ್ಕಾರ್ಯ, ಸಮಾಜ ಸೇವೆ, ನಾಡಿಗೆ ಕೊಟ್ಟ ಕೊಡುಗೆ ಚರ್ಚೆ ಆಗುವಂತೆಯೇ ಅವರ ದೌರ್ಬಲ್ಯ, ದುಷ್ಕಾರ್ಯ, ಜನಪೀಡನೆ ಎಲ್ಲವೂ ಈ ಸಂದರ್ಭದಲ್ಲಿ ಒರೆಗೆ ಹಚ್ಚಲ್ಪಡುತ್ತದೆ. ಅವರು ಗಣ್ಯರೆನಿಸಿಕೊಂಡಿದ್ದರೂ ಸಕಾರಾತ್ಮಕ ಗುಣಗಳಷ್ಟೇ ನಿಜ ಅರ್ಥದಲ್ಲಿ ಅವರನ್ನು ಆ ಪಟ್ಟದಲ್ಲಿ  ಕೂರಿಸುತ್ತದೆ. ವ್ಯತಿರಿಕ್ತ ಗುಣಗಳು ಖಳನಾಯಕನ ಸ್ಥಾನ ತಂದಿರುತ್ತದೆ. ಆದರೆ ಮೇಲ್ನೋಟಕ್ಕಷ್ಟೇ ಗಣ್ಯರೆನಿಸಿ ಕೊಂಡಿರುತ್ತಾರೆ.

ನಿಜ, ಒಬ್ಬ ವ್ಯಕ್ತಿ ಬಗ್ಗೆ ಪ್ರೀತಿ, ಗೌರವ, ಭಕ್ತಿ ಏನೂ ಇರುವುದಿಲ್ಲ. ಆದರೂ ಅವರಿಗೆ ಮರ್ಯಾದೆ ಸಿಗುತ್ತದೆ. ಈ ಮರ್ಯಾದೆ ಪ್ರೀತಿಯಿಂದ ಬರುವುದಿಲ್ಲ, ಬದಲಿಗೆ ಭೀತಿಯಿಂದ ಬಂದಿರುತ್ತದೆ. ಇದೊಂದು ರೀತಿ ಮಾಘಪ್ರೀತಿ. ಇಷ್ಟವಿಲ್ಲದಿದ್ದರೂ ತೋರಿಕೆಗಷ್ಟೇ ವ್ಯಕ್ತಪಡಿಸುವುದು. ಯಾರಾದರೂ ಏನಾದರೂ ಅಂದುಕೊಂಡಾರು ಎಂಬ ಮುನ್ನೆಚ್ಚರಿಕೆಯಿಂದ. ಅಲ್ಲಿ ಕೆಲಸ ಮಾಡುವುದು ಪ್ರಲೋಭವೇ ಹೊರತು ಗೌರವಾದರ ಎಂಥದ್ದೂ ಇರುವುದಿಲ್ಲ. ಒಳಗೊಳಗೆ ಇಷ್ಟವಿಲ್ಲದಿದ್ದರೂ ಸಮಾಜಕ್ಕೊಂದು ಸಂದೇಶ ರವಾನೆ ಮಾಡಲೋಸುಗ ಗೌರವ ಸಮರ್ಪಿಸುತ್ತಾರೆ. ಹೀಗೆ ಮಾಡುವಾಗ ಅವರ ವಿವೇಕವನ್ನು ವಿವೇಚನೆ ನುಂಗಿ ಹಾಕುವುದರಿಂದ ಕೆಲವೊಮ್ಮೆ ಸಾಕಷ್ಟು ಯಡವಟ್ಟುಗಳಾಗುತ್ತವೆ. ಅಂಥದೊಂದು ಯಡವಟ್ಟು ರಾಜ್ಯ ಸರಕಾರದಿಂದ ಇತ್ತೀಚೆಗೆ ನಿಧನರಾದ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಅಂತಿಮ ಸಂಸ್ಕಾರ ವಿಚಾರದಲ್ಲಿ ಘಟಿಸಿ ಹೋಗಿದ್ದು, ವಿವಾದದ ಸ್ವರೂಪ ಪಡೆದಿದೆ.

ಹೌದು, ಪಾರ್ವತಮ್ಮ ರಾಜ್‌ಕುಮಾರ್ ಅವರ ಅಂತಿಮ ಸಂಸ್ಕಾರಕ್ಕೆ ಸರಕಾರದ ಸುಪರ್ದಿಯ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಜಾಗ ಕಲ್ಪಿಸಿದ್ದು ಹಾಗೂ ಅವರ ಪಾರ್ಥೀವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ, ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಡಾ. ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಹೆಮ್ಮೆ. ಭಾರತೀಯ ಚಿತ್ರರಂಗದಲ್ಲಿ  ಕನ್ನಡಕ್ಕೊಂದು ಮೇರು ಸ್ಥಾನ ಸಿಗುವಲ್ಲಿ ಅವರ ಕೊಡುಗೆ ಅನನ್ಯ. ಒಬ್ಬ ನಟನಾಗಿ ನಾನಾ ಪಾತ್ರಗಳಲ್ಲಿ ಮುಳುಗೇಳುವ ಮೂಲಕ ಸಮಾಜೋದ್ಧಾರದ ನಾನಾ ಆಯಾಮಗಳನ್ನು ತೆರೆಯ ಮೇಲೆ ತೆರೆದಿಟ್ಟ ಧೃವತಾರೆ. ಅಜ್ಜ, ತಂದೆ, ಮಗ, ಪತಿ, ಅಣ್ಣ, ತಮ್ಮ, ನಾಯಕ, ಚಕ್ರವರ್ತಿ, ಸೇವಕ, ಸೈನಿಕ, ಭಕ್ತ, ಸಂತ, ವಿಜ್ಞಾನಿ, ಉಪನ್ಯಾಾಸಕ, ಗಾಯಕ, ವಾದಕ – ಹೀಗೆ ಹತ್ತಾರು ಪಾತ್ರಗಳಲ್ಲಿ ಮೈನವಿರೇಳಿಸುವ ನಟನೆ ಮೂಲಕ ಸಮಾಜಮುಖಿ, ಸಕಾರಾತ್ಮಕ ಸಂದೇಶಗಳನ್ನು ಸಾರಿದ ಸಾಧಕ. ಬರೀ ನಟನೆ ಮಾತ್ರವಲ್ಲದೆ ಕನ್ನಡ ನೆಲ, ಜಲ, ಭಾಷೆ ವಿಚಾರ ಬಂದಾಗ ಹೋರಾಟದ ಮುಂಚೂಣಿಯಲ್ಲಿ ನಿಂತು ಆಡಳಿತರೂಢ ಸರಕಾರಗಳನ್ನು ನಡುಗಿಸಿದ ಭೂಪ. ಕರ್ನಾಟಕ ರತ್ನ, ದಾದಾ ಸಾಹೇಬ್ ಪಾಲ್ಕೆ, ಪದ್ಮಭೂಷಣ ಸೇರಿದಂತೆ ಹತ್ತಾರು ಮೇರು ಪ್ರಶಸ್ತಿಗಳಿಗೇ ಗೌರವ ತಂದ ಪ್ರತಿಭಾವಂತ. ಹೀಗಾಗಿ ಸರಕಾರಿ ಗೌರವಗಳೊಡನೆ ರಾಜ್‌ಕುಮಾರ್ ಅವರ ಅಂತಿಮ ಸಂಸ್ಕಾರ ನೆರವೇರಿಸಿದ್ದು ಹಾಗೂ ಸ್ಮಾರಕ ನಿರ್ಮಾಣಕ್ಕೆ ಸರಕಾರಿ ಸ್ವಾಮ್ಯದ ಕಂಠೀರವ ಸ್ಟುಡಿಯೋ ಆವರಣದಲ್ಲಿ ಜಾಗ ಕಲ್ಪಿಸಿದ್ದು ಸರಿಯಿದೆ. ಆ ಮೂಲಕ ಸರಕಾರ ತನಗೇ ತಾನೇ ಗೌರವ ಸಮರ್ಪಣೆ ಮಾಡಿಕೊಂಡಿದೆ. ಆದರೆ ಪಾರ್ವತಮ್ಮ ರಾಜ್‌ಕುಮಾರ್ ವಿಚಾರದಲ್ಲಿಯೂ ಇಂಥದ್ದೇ ನಿಲುವು ಪ್ರದರ್ಶಿಸಲು ಹೋಗಿ ಸರಕಾರ ಯಡವಟ್ಟು ಮಾಡಿಕೊಂಡಿದೆ. ಕಂಠೀರವ ಸ್ಟುಡಿಯೋ ಅವರಣದಲ್ಲಿ ಪಾರ್ವತಮ್ಮ ಅವರ ಅಂತಿಮ ಸಂಸ್ಕಾರ, ಸಮಾಧಿ ನಿರ್ಮಾಣಕ್ಕೆ ಆಸ್ಪದ ಮಾಡಿಕೊಟ್ಟು ನಾಡಿನ ಜನರ ಟೀಕೆ-ಟಿಪ್ಪಣಿಗಳಿಗೆ ತನ್ನನ್ನು ಒಡ್ಡಿಕೊಂಡಿದೆ. ಬರೀ ಸರಕಾರವಷ್ಟೇ ಅಲ್ಲ ಅದರ ಎಡಬಿಡಂಗಿತನದಲ್ಲಿ ಪಾಲು ಪಡೆದಿರುವ ಪಾರ್ವತಮ್ಮ ರಾಜ್‌ಕುಮಾರ್ ಕುಟುಂಬ ಸದಸ್ಯರು ಕೂಡ ಟೀಕೆಗಳಿಗೆ ವಸ್ತುವಾಗಿದ್ದಾರೆ.

ನಿಜ, ಪಾರ್ವತಮ್ಮ ಅವರು ನಿರ್ಮಾಪಕಿಯಾಗಿ ಕನ್ನಡಕ್ಕೆ ಒಂದಷ್ಟು ಸದಭಿರುಚಿ ಚಿತ್ರಗಳನ್ನು ನೀಡಿದ್ದಾರೆ. ಹಳ್ಳಿಗಾಡಿನ ಹೆಣ್ಣುಮಗಳು ಪಟ್ಟಣದ ಸವಾಲುಗಳನ್ನು ಜಯಿಸಿ ವಜ್ರೇಶ್ವರಿ ಕಂಬೈನ್‌ಸ್‌ ಸಂಸ್ಥೆ ಕಟ್ಟುವ ಮೂಲಕ ಕನ್ನಡ ಚಿತ್ರರಂಗದ ಜತೆಜತೆಗೆ ತಮ್ಮ ಕುಟುಂಬವನ್ನೂ ಶ್ರೀಮಂತಗೊಳಿಸಿಕೊಂಡಿದ್ದಾರೆ. ಡಾ. ರಾಜ್‌ಕುಮಾರ್ ಎಂಬ ವಿಗ್ರಹ ಕೆತ್ತನೆ ಹಿಂದೆ ಪಾರ್ವತಮ್ಮನವರ ಪರಿಶ್ರಮವಿದೆ. ಅವರ ವ್ಯಕ್ತಿತ್ವ ರಚನೆಯಲ್ಲಿ ಪಾರ್ವತಮ್ಮನವರ ಕುಸುರಿ ಕೆಲಸವಿದೆ. ಪ್ರತಿ ಯಶಸ್ವಿ ಗಂಡಿನ ಹಿಂದೆ ಹೆಣ್ಣೊಂದು ಇರುವಂತೆ, ರಾಜ್‌ಕುಮಾರ್ ಯಶಸ್ಸಿನಲ್ಲಿ ಪಾರ್ವತಮ್ಮನವರ ಶ್ರಮವಿದೆ. ನಾಡಿನ ಅನೇಕ ಯಶಸ್ವಿ ಪುರುಷರ ಹಿಂದೆ ಅವರವರ ‘ರೆಸ್ಟೆಕ್ಟಿವ್’ ಪತ್ನಿಯರ ಕೊಡುಗೆ ಇರುವಂತೆ. ತನ್ನ ಸಂಸಾರ, ಕುಟುಂಬ, ಗಂಡ, ಮಕ್ಕಳ ಉನ್ನತಿಗೆ ಪ್ರತಿ ಮಹಿಳೆಯೂ ಹಪಹಪಿಸುತ್ತಾರೆ, ಕಾಳಜಿ ವಹಿಸುತ್ತಾರೆ, ಶ್ರಮಿಸುತ್ತಾರೆ. ಇದರಲ್ಲಿ ಹೇಳಿಕೊಳ್ಳುವಂಥ ವಿಶೇಷವೇನೂ ಇಲ್ಲ. ಅದೇ ರೀತಿ ಪಾರ್ವತಮ್ಮನವರು ಚಿತ್ರ ಜಗತ್ತಿಗೆ ನೀಡಿರುವ ಕೊಡುಗೆಯಲ್ಲಿ ವ್ಯವಹಾರ ಕೌಶಲ್ಯದ ಕೌಟುಂಬಿಕ ಜವಾಬ್ದಾರಿ ಕಾಣಬಹುದೇ ಹೊರತು ಸಮಾಜ ಸೇವೆಯನ್ನಾಗಲಿ, ದೇಶಸೇವೆಯನ್ನಾಗಲಿ ಅರಸಲು ಸಾಧ್ಯವಿಲ್ಲ. ಏಕೆಂದರೆ ಚಿತ್ರ ನಿರ್ಮಾಣ ಕೂಡ ಒಂದು ಬಿಸಿನೆಸ್. ಹಣ ಹಾಕಿ ಲಾಭ ತೆಗೆಯುವುದು ಅದರ ಹಿಂದಿನ ಉದ್ದೇಶ. ಯಾರೂ ಸಿನಿಮಾ ಮಾಡಿ ಪ್ರೇಕ್ಷಕರಿಗೆ ಪುಕ್ಸಟ್ಟೆ ತೋರಿಸುವುದಿಲ್ಲ. ಹೀಗಾಗಿ ಅವರ ಅಂತ್ಯ ಸಂಸ್ಕಾರ, ಸಮಾಧಿ ನಿರ್ಮಾಣಕ್ಕೆ ಕಂಠೀರವ ಸ್ಟುಡಿಯೋ ಅವರಣದಲ್ಲಿ ಅವಕಾಶ ಕಲ್ಪಿಸಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಕನ್ನಡ ಚಿತ್ರರಂಗಕ್ಕೆ ದಿವಂಗತ ಗುಬ್ಬಿ ವೀರಣ್ಣ, ಬಿ.ಆರ್ ಪಂತಲು, ಆರ್.ನಾಗೇದ್ರ ರಾಯರು, ಜಿ.ವಿ ಅಯ್ಯರ್ ಮತ್ತಿತರರು ನೀಡಿರುವ ಕೊಡುಗೆ ಅಪಾರ. ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸಿದ ಮಹಾನ್ ದಿಗ್ಗರ್ಷಕರು. ಅವರಾರಿಗೂ ಇಂತಹ ಗೌರವ ಸಂದಿಲ್ಲ. ಅವರಿಗೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇವರಿಗೆ ಸಿಗಬಾರದು ಎಂಬುದು ಇಲ್ಲಿನ ವಾದವಲ್ಲ. ಆದರೆ, ಸಮಾನ ದೃಷ್ಟಿಕೋನದಲ್ಲಿ ಎಲ್ಲರನ್ನು ಕಾಣಬೇಕು ಎನ್ನುವುದಷ್ಟೇ ಇಲ್ಲಿನ ಉದ್ದೇಶ.

ಇಲ್ಲಿ ರಾಜ್ಯ ಸರಕಾರ ಮತ್ತೊಂದು ಯಡವಟ್ಟು ಮಾಡಿದೆ. ದೇಶಸೇವೆ ಮಾಡಿದವರು, ಹುತಾತ್ಮ ಯೋಧರು, ದೇಶಕ್ಕಾಗಿ ಪ್ರಾಣ ತೆತ್ತವರಿಗಷ್ಟೇ ಸೀಮಿತವಾದ ರಾಷ್ಟ್ರಧ್ವಜವನ್ನು ಪಾರ್ವತಮ್ಮನವರ ಪಾರ್ಥೀವ ಶರೀರದ ಮೇಲೆ ಹೊದಿಸುವ ಮೂಲಕ ಆ ಪರಿಪಾಠಕ್ಕಿದ್ದ ಗೌರವಕ್ಕೇ ಚ್ಯುತಿ ತಂದಿದ್ದು, ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹಾಗೆ ನೋಡಿದರೆ ಅಂತಿಮ ಸಂಸ್ಕಾರದ ವೇಳೆ ರಾಜ್‌ಕುಮಾರ್ ಪಾರ್ಥೀವ ಶರೀರಕ್ಕೂ ರಾಷ್ಟ್ರಧ್ವಜ ಹೊದಿಸಿರಲಿಲ್ಲ. ರಾಜ್‌ಕುಮಾರ್ ಅವರಿಗೇ ಸಮರ್ಪಿಸದ ಗೌರವವನ್ನು ಪಾರ್ವತಮ್ಮನವರಿಗೆ ಸಲ್ಲಿಸಿದ್ದರಲ್ಲಿ ಸರಕಾರ ಅನ್ವೇಷಿಸಿದ ತರ್ಕವಾದರೂ ಏನು, ಪ್ರೇರಣೆಯಾದರೂ ಎಲ್ಲಿಂದ ಬಂತು, ಅದನ್ನು ಕಾಡಿದ ಭಾವತೀವ್ರತೆಯಾದರೂ ಏನು ಎಂಬುದೇ ಗೊತ್ತಾಗುತ್ತಿಲ್ಲ. ಇಲ್ಲಿ ರಾಜ್‌ಕುಮಾರ್ ಮತ್ತು ಪಾರ್ವತಮ್ಮ ಇವರಿಬ್ಬರಲ್ಲಿ ಯಾರು ಮಿಗಿಲು ಎಂಬ ಅಂಶಕ್ಕಿಂತ ರಾಜ್ಯ ಸರಕಾರದ ಆತ್ಮಾಭಿಮಾನದ ಕೊರತೆಯೇ ಎದ್ದು ಕಾಣುತ್ತಿದೆ. ಅದ್ಯಾರನ್ನು ಓಲೈಸಲು ಸರಕಾರ ಈ ತೀರ್ಮಾನ ತೆಗೆದುಕೊಂಡಿತೋ, ಅದ್ಯಾವ ದೂರಗಾಮಿ ಮತ ರಾಜಕೀಯವನ್ನು ಇದರಲ್ಲಿ ಹುಡುಕಿತೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ. ರಾಷ್ಟ್ರಧ್ವಜ ಗೌರವ ಸಂರಕ್ಷಣೆ ವಿಚಾರದಲ್ಲಿರುವ ನಿರ್ದಿಷ್ಟ ನೀತಿ-ನಿಯಮಗಳನ್ನು ಗಾಳಿಗೆ ತೂರುವ ಮೂಲಕ ರಾಜ್ಯ ಸರಕಾರ ತನ್ನ ಮೌಢ್ಯವನ್ನು ಅನಾವರಣ ಮಾಡಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಝಾಡಿಸಿಕೊಳ್ಳುತ್ತಿದೆ. ಸಾರ್ವಜನಿಕರ ಕೈಗೆ ಕೋಲು ಕೊಟ್ಟು ಹೊಡೆಸಿಕೊಳ್ಳುವುದು ಎಂದರೆ ಇದೇ.

ಇಲ್ಲಿ ಇನ್ನೂ ಒಂದು ವಿಚಾರ. ಶಿವಮೊಗ್ಗ ತೀರ್ಥಹಳ್ಳಿ ಸಮೀಪ ಕುಪ್ಪಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ನಿವಾಸ ಮತ್ತು ಮನೆ ಮುಂದಿನ ಎಕರೆಗಟ್ಟಲೆ ಜಾಗವನ್ನು ಮಕ್ಕಳು ರಾಜ್ಯ ಸರಕಾರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸರಕಾರ ಕುವೆಂಪು ಪ್ರತಿಷ್ಠಾನ ಮಾಡಿ, ಅಲ್ಲಿ ಸ್ಮಾರಕವಾಗಿ ‘ಕವಿಮನೆ’ ನಿರ್ಮಿಸಿದೆ. ಕುವೆಂಪು ಬದುಕಿನುದ್ದಕ್ಕೂ ಬಳಸಿದ ವಸ್ತ್ರ, ವಸ್ತುಗಳು, ಪುಸ್ತಕಗಳು, ಪ್ರಶಸ್ತಿಗಳನ್ನು ಸಂಗ್ರಹಿಸಿಡಲಾಗಿದೆ. ಅದೀಗ ಅಧ್ಯಯನ ಕೇಂದ್ರವಾಗಿ, ಆಕರ್ಷಣೀಯ ಪ್ರವಾಸಿ ತಾಣವಾಗಿದೆ. ಅದೇ ರೀತಿ ಧಾರವಾಡದ ಸಾಧನಕೇರಿಯಲ್ಲಿರುವ ಜ್ಞಾನಪೀಠ ಪುರಸ್ಕೃತ ದ.ರಾ. ಬೇಂದ್ರೆ ಅವರಿಗೆ ಸೇರಿದ ಜಾಗವನ್ನು ಬೇಂದ್ರೆ ಪ್ರತಿಷ್ಠಾನಕ್ಕೆ ನೀಡಲಾಗಿದೆ. ವಾಸ್ತವವಾಗಿ ಮುಂಬೈಯಲ್ಲಿ ಕೊನೆಯುಸಿರೆಳೆದ ಬೇಂದ್ರೆಯವರ ಪಾರ್ಥೀವ ಶರೀರವನ್ನು ಧಾರವಾಡಕ್ಕೆ ತಂದು ಸರಕಾರಿ ಗೌರವಗಳೊಡನೆ ಅಂತ್ಯ ಸಂಸ್ಕಾರ ಮಾಡಲಿಲ್ಲ. ಬದಲಿಗೆ ಮುಂಬೈಯ ವಿದ್ಯುತ್ ಚಿತಾಗಾರದಲ್ಲೇ ಸುಟ್ಟು ಬರಲಾಯಿತು. ಆಗಿನ ಸರಕಾರ ಬೇಂದ್ರೆಯವರಿಗೆ ಕನಿಷ್ಠ ಗೌರವವನ್ನೂ ಕೊಡಲಿಲ್ಲ. ಆದರೂ ಅವರ ಕುಟುಂಬ ಸದಸ್ಯರು ಸ್ವಂತ ಜಾಗವನ್ನು ಬೇಂದ್ರೆ ಭವನಕ್ಕೆ ಕೊಟ್ಟು ಹೃದಯವೈಶಾಲ್ಯ ಮೆರೆದರು. ಚಾಮರಾಜನಗರದ ಬಿಳಿಗಿರಿರಂಗನಬೆಟ್ಟ ಬುಡದಲ್ಲಿರುವ ವಂಡರಬಾಳು ಗ್ರಾಮದ 182 ಎಕರೆ ಭೂಮಿಯಲ್ಲಿ ರೈತ ಸಂಘದ ಧುರೀಣ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಸಮಾಧಿ-ಸ್ಮಾರಕ ‘ಅಮೃತಭೂಮಿ’ ನಿರ್ಮಿಸಲಾಗಿದೆ. ಅಲ್ಲಿ ಸುಸ್ಥಿರ ಕೃಷಿ ಅಭಿವೃದ್ಧಿ ಕೇಂದ್ರ, ರೈತರಿಗೆ ಕೃಷಿ ತರಬೇತಿ ಕೇಂದ್ರ, ದೇಶಿ ತಳಿಗಳ ಅಭಿವೃದ್ಧಿ ಕೇಂದ್ರ ನಿರ್ಮಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಜಮೀನು ರಾಜ್ಯ ಸರಕಾರ ಕೊಟ್ಟಿದ್ದೇನೂ ಅಲ್ಲ. ಎಂಡಿಎನ್ ಕುಟುಂಬ ಸದಸ್ಯರು, ಸ್ನೇಹಿತರು, ಅಭಿಮಾನಿಗಳು ಸೇರಿ ರೈತ ಸಂಘದ ಹೆಸರಲ್ಲಿ ಟ್ರಸ್ಟ್‌ ರಚಿಸಿ, ಮಾಡಿರುವ ಅದ್ಭುತ ಮಾದರಿ ಕೆಲಸವಿದು.

ಇದೇ ಚಾಮರಾಜನಗರ ಜಿಲ್ಲೆಯ ಗಾಜನೂರು ರಾಜ್‌ಕುಮಾರ್ ಅವರ ಹುಟ್ಟೂರು. ಇಲ್ಲಿ ರಾಜ್‌ಕುಮಾರ್ ಕುಟುಂಬಕ್ಕೆ ಸೇರಿದ ಜಮೀನೂ ಇತ್ತು. ರಾಜ್‌ಕುಮಾರ್ ಮಕ್ಕಳು ಮನಸ್ಸು ಮಾಡಿದ್ದರೆ ಇಲ್ಲೇ ರಾಜ್‌ಕುಮಾರ್ ಸಮಾಧಿ ಮತ್ತು ಸ್ಮಾರಕ ನಿರ್ಮಿಸಿ, ಅದನ್ನೊಂದು ಪ್ರವಾಸಿತಾಣವಾಗಿ ಮಾಡುವುದು ಎಷ್ಟೊತ್ತಿನ ಮಾತಾಗಿತ್ತು? ಇದಲ್ಲದೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಿಡದಿ ಸಮೀಪ ರಾಜ್‌ಕುಮಾರ್ ಕುಟುಂಬಕ್ಕೆ ಸೇರಿದ 25 ಎಕರೆಗೂ ಮಿಗಿಲಾದ ಪುನೀತ್ ಫಾರಂ ಇತ್ತು. ಇಲ್ಲೂ ಸಮಾಧಿ-ಸ್ಮಾರಕ ಮಾಡಬಹುದಿತ್ತು. ರಾಜ್‌ಕುಮಾರ್ ಮ್ಯೂಸಿಯಂ ಸ್ಥಾಪಿಸಬಹುದಿತ್ತು. ಆದರೆ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಈ ಜಾಗದಲ್ಲಿ ಸಮಾಧಿ-ಸ್ಮಾರಕ ನಿರ್ಮಿಸಲು ಕುಟುಂಬ ಸದಸ್ಯರಿಗೆ ಮನಸ್ಸಾಗಿಲ್ಲ ಎಂದು ಕಾಣುತ್ತದೆ. ಸರಕಾರಿ ಸ್ವಾಮ್ಯದ ಕಂಠೀರವ ಸ್ಟುಡಿಯೋದಲ್ಲಿ ರಾಜ್‌ಕುಮಾರ್ ಸ್ಮಾರಕ ನಿರ್ಮಾಣ ತಪ್ಪಲ್ಲ. ಅಲ್ಲಿ ಸರಕಾರದ ಎರಡೆಕರೆ ಜಾಗಕ್ಕೆ ಬಡಿದಾಡುವುದಕ್ಕಿಂಥ ತಮ್ಮ ಬಳಿಯೇ ಇದ್ದ ಹತ್ತಾರು ಎಕರೆ ವಿಸ್ತಾರ ಜಾಗದಲ್ಲಿ ಸ್ಮಾರಕ ನಿರ್ಮಿಸಿದ್ದರೆ ರಾಜ್‌ಕುಮಾರ್ ಮಕ್ಕಳೂ ಮಾದರಿ ಆಗುತ್ತಿದ್ದರು. ನಿಜ ಜೀವನದಲ್ಲೂ ಕಸ್ತೂರಿ ನಿವಾಸದ ‘ರಾಜ್‌ಕುಮಾರ್’, ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಆಗುತ್ತಿದ್ದರು.

ಅದೆಲ್ಲ ಹೋಗಲಿ, ರಾಜ್‌ಕುಮಾರ್ ಬಹಳ ಇಷ್ಟಪಟ್ಟು ನಿರ್ಮಿಸಿಕೊಂಡಿದ್ದ, ಕೌಟುಂಬಿಕ ಬದುಕನ್ನು ಸಂಭ್ರಮಿಸಿದ್ದ, ಅಭಿಮಾನಿಗಳ ಪ್ರೀತಿಧಾರೆಗೆ ಸಾಕ್ಷಿಯಾಗಿದ್ದ ಸದಾಶಿವನಗರದ ನಿವಾಸವೂ ಮೂಲಸ್ಥಿತಿ ಕಳೆದುಕೊಂಡಿದೆ. ರಾಜ್‌ಕುಮಾರ್ ನೆನಪಿನ ಬುತ್ತಿ ಬಿಚ್ಚಬಹುದಾಗಿದ್ದ, ಅವರ ವಸ್ತುಗಳ ಸಂಗ್ರಹಾಲಯವೂ ಆಗಬಹುದಾಗಿದ್ದ ಮೂಲ ನಿವಾಸವನ್ನು ಕೆಡವಿ ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಎರಡು ಪ್ರತ್ಯೇಕ ಮನೆ ನಿರ್ಮಿಸಿಕೊಂಡು, ರಾಜ್‌ಕುಮಾರ್ ಹೆಜ್ಜೆಗುರುತುಗಳನ್ನು ಮಾಯ ಮಾಡಿದ್ದಾರೆ. ರಾಜ್‌ಕುಮಾರ್ ಕನ್ನಡಿಗರ ಆಸ್ತಿ. ಅವರ ಆಸ್ತಿಯಲ್ಲಿ ಕನ್ನಡಿಗರು ಅಣ್ಣಾವ್ರ ನೆನಪು ಕಣ್ತುಂಬಿಕೊಂಡಿದ್ದರೆ ಅದೇನೂ ಪ್ರಮಾದ ಆಗುತ್ತಿರಲಿಲ್ಲ. ಆದರೆ ಅಪ್ಪನ ಆಸ್ತಿಗೆ ಮಕ್ಕಳು ವಾರಸುದಾರರು. ಇದರ ಮುಂದೆ ಕನ್ನಡಿಗರ ಆಸ್ತಿ ಕಳೆದು ಹೋಗಿದೆ. ಶ್ರೀಮಂತಿಕೆ ಮತ್ತು ಹೃದಯ ಶ್ರೀಮಂತಿಕೆ ಎರಡೂ ಪ್ರತ್ಯೇಕ ಶಬ್ದಗಳು. ಶ್ರೀಮಂತಿಕೆ ಮುಂದೆ ಹೃದಯ ಶ್ರೀಮಂತಿಕೆ ಕಳೆದು ಹೋಗಿದ್ದರೆ ಅದು ರಾಜ್‌ಕುಮಾರ್ ಅಭಿಮಾನಿಗಳ ತಪ್ಪಲ್ಲ!

ನಿಜ, ಹತ್ತು ವರ್ಷಗಳ ಹಿಂದೆ ನಿಧನರಾದ ರಾಜ್‌ಕುಮಾರ್ ಸ್ಮಾರಕ ನಿರ್ಮಾಣ ವಿಳಂಬದ ಹಿಂದೆ ವಾಣಿಜ್ಯ ಅಂಶಗಳದೇ ಅಡ್ಡಗಾಲು. ಕಂಠೀರವ ಸ್ಟುಡಿಯೋ ಆವರಣದಲ್ಲಿ ಸರಕಾರ ಮೂರು ಎಕರೆ ಜಾಗ ಕೊಟ್ಟಿದೆ. ಆದರೆ ಕುಟುಂಬ ಸದಸ್ಯರು ರಾಜ್ ಪ್ರತಿಷ್ಠಾನದ ಮೂಲಕ ಚಿತ್ರೀಕರಣ ಸ್ಟುಡಿಯೋ, ಗ್ರಂಥಾಲಯ, ಚಿತ್ರ ಪ್ರದರ್ಶನಾಲಯ, ಮತ್ತಿತರ ನಿರ್ಮಾಣಗಳಿಗಾಗಿ ಇನ್ನೂ ಎರಡು ಎಕರೆ ಹೆಚ್ಚುವರಿ ಜಾಗ ಕೇಳಿದ್ದರು. ಅದಿನ್ನೂ ಇತ್ಯರ್ಥವಾಗದೆ ಸ್ಮಾರಕ ಸಮುಚ್ಛಯ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಬಹು ಅಂತಸ್ತಿನ ಕಟ್ಟಡ ನಿರ್ಮಿಸಿ, ಟ್ರಸ್ಟ್‌‌ನ ಎಲ್ಲ ಬಯಕೆಗಳನ್ನು ಈಡೇರಿಸಿಕೊಳ್ಳಲು ಅವಕಾಶವಿದೆ. ಆದರೆ ಅದ್ಯಾಕೋ ಅನುಷ್ಠಾನಕ್ಕೆ ಬರುತ್ತಿಲ್ಲ. ಸ್ಮಾರಕಕ್ಕೆ ರಾಜ್‌ಕುಮಾರ್ ಹೆಸರಿಂದ ಗೌರವ, ಮೌಲ್ಯ ಬರುತ್ತದೆಯೇ ಹೊರತು ಹೆಚ್ಚುವರಿ ಜಮೀನು, ವಾಣಿಜ್ಯ ವ್ಯವಹಾರಗಳಿಂದ ಅಲ್ಲ. ಏಕೆಂದರೆ ರಾಜ್‌ಕುಮಾರ್ ತಮ್ಮ ಹೆಸರು ಮೀರಿ ಕನ್ನಡಿಗರ ಮನಸ್ಸಲ್ಲಿ ನೆಲೆಸಿದ್ದಾರೆ. ಅದನ್ನು ವಾಣಿಜ್ಯ ಮನಸ್ಸಿಂದ ಅಳೆಯಲು ಸಾಧ್ಯವಿಲ್ಲ.

ಇನ್ನು ಈ ರಾಜ್ಯವನ್ನಾಳಿದ ಅನೇಕ ಮುಖ್ಯಮಂತ್ರಿಗಳಿಗೇ ಸ್ಮಾರಕಗಳಿಲ್ಲ. ಹಿಂದುಳಿದ ವರ್ಗಗಳ ಹರಿಕಾರರೆಂದೇ ಹೆಸರಾದ ದೇವರಾಜ ಅರಸು ಅವರ ಸ್ಮಾರಕ ನಿರ್ಮಾಣ ಮಾಡಲು ಅವರು ದಿವಂಗತರಾಗಿ ದಶಕಗಳೇ ಕಳೆದರೂ, ಈ ರಾಜ್ಯವನ್ನಾಳಿದ ಅನೇಕರಿಗೆ ಪುರುಸೊತ್ತಾಗಿಲ್ಲ. ಅವರ ಪ್ರತಿಮೆಯನ್ನು ವಿಧಾನಸೌಧದ ಎದುರು ನಿಲ್ಲಿಸುವಲ್ಲಿಗೆ ಸರಕಾರಗಳು ತಮ್ಮ ಜವಾಬ್ದಾರಿ ಕಳೆದುಕೊಂಡಿವೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಪಾರ್ವತಮ್ಮನವರ ಸಮಾಧಿ-ಸ್ಮಾರಕಕ್ಕೆ ಅವಕಾಶ ಮಾಡಿಕೊಟ್ಟಿರುವ ಅಹಿಂದ ವರ್ಗಗಳ ‘ಪ್ರವರ್ತಕ’ ಮುಖ್ಯಮಂತ್ರಿ ಸಿದ್ದರಾಮರಯ್ಯನವರಿಗೂ ‘ಅರಸು ಸ್ಮಾರಕ’ ನಿರ್ಮಾಣ ನೆನಪಾಗದಿರುವುದು ಮಾತ್ರ ನಾಡಿನ ದುರಂತ.

ಲಗೋರಿ: ಸ್ಮಾರಕಗಳು ಅಭಿಮಾನದ ಪ್ರತೀಕವಾಗಬೇಕೆ ಹೊರತು ಅಪಮಾನದ ವಸ್ತುಗಳಾಗಬಾರದು.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply