ಡೇಟಾ ದರ ಕಡಿತದಿಂದ ಬೆಳೆಯುತ್ತಿರುವುದು ಡಿಜಿಟಲ್ ಇಂಡಿಯಾವೂ ಅಲ್ಲ, ಜ್ಞಾನವೂ ಅಲ್ಲ… ಪೋರ್ನ್ ವೀಕ್ಷಣೆ!

ಡಿಜಿಟಲ್ ಕನ್ನಡ ಟೀಮ್:

ಭಾರತದಲ್ಲಿ ಕಳೆದ 7-8 ತಿಂಗಳಲ್ಲಿ ಮೊಬೈಲ್ ಡೇಟಾ ಬೆಲೆ ಅತ್ಯಂತ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದೆ. ಈ ಡೇಟಾ ದರ ಇಳಿಕೆಯ ಸಂದರ್ಭದಲ್ಲಿ ಡಿಜಿಟಲ್ ಆಗಿ ಬದಲಾಗುತ್ತಿರುವ ಭಾರತಕ್ಕೆ ಇದೊಂದು ಕ್ರಾಂತಿಯಾಗಲಿದೆ. ಮಾಹಿತಿ ಹರಿವು ಹಾಗೂ ಜ್ಞಾನ ಪಸರಿಸಲು ಉತ್ತಮ ಮಾರ್ಗವಾಗಲಿದೆ… ಹೀಗೆ ಅನೇಕ ನಿರೀಕ್ಷೆಗಳನ್ನು ಹೊಂದಲಾಗಿತ್ತು.

ಆದರೆ ಆಗಿರುವುದೇನು ಎಂದು ನೋಡಿದರೆ ನಮಗೆ ಸಿಗುವ ಉತ್ತರ, ಡೇಟಾ ದರ ಕಡಿತದಿಂದ ಆಗಿರುವ ಕ್ರಾಂತಿ ಡಿಜಿಟಲ್ ಇಂಡಿಯಾನೂ ಅಲ್ಲ ಅಥವಾ ಜ್ಞಾನವೂ ಅಲ್ಲ. ಆಗಿರುವ ಕ್ರಾಂತಿ ಎಲ್ಲ ವಯಸ್ಕರ ಚಿತ್ರ ಹಾಗೂ ವಿಡಿಯೋ ವೀಕ್ಷಣೆಯಲ್ಲಿ ಮಾತ್ರ. ಅದು ಎಷ್ಟರ ಮಟ್ಟಿಗೆ ಅಂದರೆ, ಭಾರತದಲ್ಲಿ ಡೇಟಾ ದರ ಕಡಿತವಾದ ನಂತರ ಸ್ಮಾರ್ಟ್ ಫೋನಿನಲ್ಲಿ ವಯಸ್ಕರ ಚಿತ್ರ ವೀಕ್ಷಣೆಯ ಸಂಖ್ಯೆ ಬರೋಬ್ಬರಿ ಶೇ.75 ರಷ್ಟು ಏರಿಕೆಯಾಗಿದೆ. ವಿಡಿಯೋ ವೀಕ್ಷಕರ ಪ್ರಮಾಣವನ್ನು ನಿರ್ಧರಿಸುವ ವೂಡ್ಲಿ ನೀಡಿರುವ ವರದಿಯಲ್ಲಿ ಈ ಒಂದು ಅಂಶ ಬೆಳಕಿಗೆ ಬಂದಿದೆ. ಈ ವರದಿಯ ಪ್ರಕಾರ ಭಾರತದಲ್ಲಿ ವಯಸ್ಕರ ಚಿತ್ರ-ವಿಡಿಯೋ ವೀಕ್ಷಣೆಯ ಪ್ರಮಾಣ ಯಾವ ರೀತಿ ಹೆಚ್ಚಿದೆ ಎಂಬ ಅಂಶ ಹೀಗಿದೆ…

ರಿಲಯನ್ಸ್ ಜಿಯೋ ಗ್ರಾಹಕರಿಗೆ ನೀಡಿದ ಕಡಿಮೆ ದರದ ಮೊಬೈಲ್ ಡೇಟಾ, ಇತರೆ ಕಂನಿಗಳಾದ ಭಾರ್ತಿ ಏರ್ ಟೆಲ್ ವೊಡಫೋನ್ ಹಾಗೂ ಐಡಿಯಾ ಕಂಪನಿಗಳೂ ತನ್ನ ದರ ಕಡಿಮೆ ಮಾಡುವಂತೆ ಒತ್ತಡ ಹೇರಿತು. ಇದರ ಪರಿಣಾಮ ಎಲ್ಲೆಡೆ ಮೊಬೈಲ್ ಡೇಟಾ ಬಳಕೆ ಹೆಚ್ಚಾಯಿತು. 2 ಮತ್ತು 3ನೇ ಹಂತದ ನಗರಗಳಲ್ಲೂ ಡೇಟಾ ಬಳಕೆ ಹೆಚ್ಚುವುದರ ಜತೆಗೆ ವಯಸ್ಕರ ಚಿತ್ರ ವೀಕ್ಷಣೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

ಡೇಟಾ ದರ ಕಡಿಮೆಯಾದ ನಂತರ ದೇಶದ ಜನಸಂಖ್ಯೆಗಿಂತ ಡೌನ್ ಲೋಡ್ಗಳ ಸಂಖ್ಯೆಯೆ ಹೆಚ್ಚಾಗಿರುವುದು ಕಂಡು ಬಂದಿದೆ. ಕಳೆದ ಮಾರ್ಚ್ ತಿಂಗಳಾಂತ್ಯಕ್ಕೆ ಒಂದು ತಿಂಗಳಿಗೆ 1300 ಮಿಲಿಯನ್ (130 ಕೋಟಿ) ಜಿಬಿಯಷ್ಟು ಡೇಟಾ ಬಳಕೆಯಾಗಿದೆ. ಇದು ಕಳೆದ ವರ್ಷ ಜೂನ್ ತಿಂಗಳಿಗೆ ಹೋಲಿಕೆ ಮಾಡಿದರೆ 9 ಪಟ್ಟು ಹೆಚ್ಚಳವಾಗಿರುವುದು ತಿಳಿಯುತ್ತದೆ. ಈ ಡಾಟಾ ಬಳಕೆ ಪ್ರಮಾಣದಲ್ಲಿ ಶೇ.60 ರಷ್ಟು 2 ಮತ್ತು 3ನೇ ಹಂತದ ನಗರಗಳಿಂದಲೇ ಆಗುತ್ತಿದೆ. 18-34 ವಯೋಮಾನದೊಳಗಿನ ಜನರು ವಯಸ್ಕರ ಚಿತ್ರ ಹಾಗೂ ವಿಡಿಯೋ ಜತೆಗೆ ಸಂಗೀತ, ಮನರಂಜನೆ, ಸುದ್ದಿ (ಸ್ಥಳೀಯ ಭಾಷೆ), ಹಾಸ್ಯವನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ..

Leave a Reply