ಪುರುಷ ಸೂಪರ್ ಹೀರೋಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾಳೆ ಹಾಲಿವುಡ್ಡಿನ ಈ ವಂಡರ್ ವುಮನ್

ಡಿಜಿಟಲ್ ಕನ್ನಡ ಟೀಮ್:

ಹಾಲಿವುಡ್ಡಿನ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಈಗ ಹವಾ ಸೃಷ್ಠಿಸಿರೋದು ‘ವಂಡರ ವುಮನ್’. ಈ ಹಿಂದೆ ತೆರೆ ಮೇಲೆ ಅಭಿಮಾನಿಗಳನ್ನು ರಂಜಿಸಿದ್ದ ಅನೇಕ ಸೂಪರ್ ಹೀರೋಗಳ ಚಿತ್ರಗಳ ಸರಣಿಗಳನ್ನೇ ಹಿಂದಿಕ್ಕುವಷ್ಟರ ಮಟ್ಟಿಗೆ ಈ ವಂಡರ್ ವುಮನ್ ನ ಹವಾ ಇದೆ. ಸದ್ಯ ಹಾಲಿವುಡ್ ನಲ್ಲಿ ನಿರೀಕ್ಷೆಯಂತೆ ಸದ್ದು ಮಾಡುತ್ತಿರುವ ವಂಡರ್ ವುಮನ್, ಹಾಲಿವುಡ್ ಮಾರುಕಟ್ಟೆಯ ಮೊದಲ ವಾರಾಂತ್ಯದಲ್ಲಿ 100.5 ಮಿಲಿಯನ್ ಅಮೆರಿಕನ್ ಡಾಲರ್ ಕಲೆಕ್ಷನ್ ಮಾಡಿದೆ.

ಡಿಸಿ ಕಾಮಿಕ್ಸ್ ಕಥೆ ಸರಣಿಯನ್ನು ಆಧರಿಸಿ ವಾರ್ನರ್ ಬ್ರೋಸ್ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿರುವ ಈ ಚಿತ್ರ ಭಾನುವಾರಕ್ಕೆ ನೂರು ಮಿಲಿಯನ್ ಗಡಿ ತಲುಪಿತ್ತು. ವಿಶ್ವದಾದ್ಯಂತ 4,165 ತೆರೆಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಚಿತ್ರದ ಒಟ್ಟಾರೆ ಕಲೆಕ್ಷನ್ 223 ಮಿಲಿಯನ್ ಅಮೆರಿಕನ್ ಡಾಲರ್ ಇದರೊಂದಿಗೆ ‘ದ ಡಾರ್ಕ್ ನೈಟ್ ರೈಡರ್ಸ್’ ಮತ್ತು  ‘ಸೂಸೈಡ್ ಸ್ಕ್ವಾಡ್’ ಚಿತ್ರಗಳ ನಂತರ ಅತಿ ಹೆಚ್ಚು ವಾರಾಂತ್ಯದ ಕಲೆಕ್ಷನ್ ಮಾಡಿರುವ ಡಿಸಿ ಕಾಮಿಕ್ಸ್ ಆಧಾರಿತ ಚಿತ್ರ ಎಂಬ ಖ್ಯಾತಿ ಪಡೆದಿದೆ.

ಹಾಲಿವುಡ್ಡಿನಲ್ಲಿ ಈ ಸೂಪರ್ ಹೀರೋ ಆಧಾರಿತ ಚಿತ್ರಗಳ ಟ್ರೆಂಡ್ ಇತ್ತೀಚೆಗೆ ಸತತವಾಗಿ ಹಿಟ್ ಆಗುತ್ತಲೇ ಇವೆ. ಆದರೆ ಈವರೆಗೂ ಬಂದ ಸೂಪರ್ ಹೀರೋ ಚಿತ್ರಗಳ ಪೈಕಿ ಸಿಂಹಪಾಲು ಚಿತ್ರಗಳಲ್ಲಿ ಪ್ರಮುಖವಾಗಿ ಬಿಂಬಿತವಾಗುತ್ತಿದ್ದದ್ದು ಪುರುಷ ಆಧಾರಿತ ಪಾತ್ರಗಳೆ. ಈ ಚಿತ್ರಗಳಲ್ಲಿ ಕೇವಲ ಪುರುಷ ಪಾತ್ರವನ್ನು ಸೂಪರ್ ಹೀರೋ ಆಗಿ ಮಾತ್ರ ಬಿಂಬಿಸಲಾಗುತ್ತಿತ್ತು. ಇವುಗಳ ನಡುವೆ ಕ್ಯಾಟ್ ವುಮನ್ ನಂತಹ ಕೆಲವೇ ಕೆಲವು ಚಿತ್ರಗಳು ಮಹಿಳೆಯನ್ನು ಸೂಪರ್ ಹೀರೋ ಆಗಿ ತೋರಿಸಿದ್ದವು. ಆದರೆ ಆ ಚಿತ್ರಗಳ ವಾಣಿಜ್ಯ ಯಶಸ್ಸು ಪುರುಷ ಸೂಪರ್ ಹೀರೋಗಳ ಚಿತ್ರದ ಮುಂದೆ ಮಂಕಾಗಿತ್ತು. ಈಗ ಈ ವಂಡರ್ ವುಮನ್ ಚಿತ್ರ ಅನೆಕ ಪುರುಷ ಆಧಾರಿತ ಸೂಪರ್ ಹೀರೋ ಚಿತ್ರಗಳ ಯಸಸ್ಸನ್ನು ಹಿಂದಿಕ್ಕಿರುವುದು ಗಮನ ಸೆಳೆಯುತ್ತಿದೆ. ಈ ವಂಡರ್ ವುಮನ್ ಚಿತ್ರದ ಯಶಸ್ಸು ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಿಳಾ ಸೂಪರ್ ಹೀರೋ ಚಿತ್ರಗಳು ತೆರೆ ಮೇಲೆ ಬರಲು ಉತ್ತಮ ದಾರಿ ತೋರಿಸಿಕೊಟ್ಟಿದೆ.

ಈ ಚಿತ್ರ ತೆರೆ ಕಾಣುವ ಮುನ್ನವೇ ಇತರೆ ಸೂಪರ್ ಹೀರೋ ಚಿತ್ರಗಳನ್ನು ಹಿಂದಿಕ್ಕುವ ನಿರೀಕ್ಷೆ ಇತ್ತು. ಆ ನಿರೀಕ್ಷೆಯಂತೆ ‘ಐರನ್ ಮ್ಯಾನ್’ (98.6 ಮಿಲಿಯನ್ ಡಾಲರ್), ‘ಡಾಕ್ಟರ್ ಸ್ಟ್ರೇಂಜ್’ (85 ಮಿಲಿಯನ್ ಡಾಲರ್), ‘ಥೋರ್’ (65.7 ಮಿಲಿಯನ್ ಡಾಲರ್), ಚಿತ್ರಗಳ ದಾಖಲೆಯನ್ನು ಮುರಿದಿದೆ. ಆದರೆ ‘ಡೆಡ್ ಪೂಲ್’ (132 ಮಿಲಿಯನ್ ಡಾಲರ್) ಮತ್ತು ‘ಮ್ಯಾನ್ ಆಫ್ ಸ್ಟೀಲ್’ (115.6 ಮಿಲಿಯನ್ ಡಾಲರ್) ಚಿತ್ರವನ್ನು ಮೀರಿಸುವಲ್ಲಿ ಯಶಸ್ವಿಯಾಗಲಿಲ್ಲ.

Leave a Reply