ವಿಜಯಪುರ: ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಕುಟುಂಬಸ್ಥರೇ ಮುಸ್ಲಿಂ ಯುವತಿಯನ್ನು ಜೀವಂತ ಸುಟ್ಟರು

(ಸಾಂದರ್ಭಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಮರ್ಯಾದೆ ಹತ್ಯೆ ಪ್ರಕರಣ ಮತ್ತೊಮ್ಮೆ ಸದ್ದು ಮಾಡಿದೆ. ಪ್ರಕರಣ ನಡೆದಿರುವುದು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಎಂಬುದು ತಲೆತಗ್ಗಿಸಬೇಕಾದ ಸಂಗತಿ. ಮುಸ್ಲಿಂ ಯುವತಿಯೊಬ್ಬಳು ದಲಿತ ಯುವಕನನ್ನು ಮದುವೆಯಾದಳು ಎಂಬ ಕಾರಣಕ್ಕಾಗಿ ಕಳೆದ ಶನಿವಾರ ರಾತ್ರಿ ಆಕೆಯನ್ನು ಸಜೀವ ದಹನ ಮಾಡಿ ಹತ್ಯೆ ಮಾಡಲಾಗಿದೆ. ಆಕೆ ಗರ್ಭಿಣಿ ಎಂದು ತಿಳಿದಿದ್ದರೂ ಆಕೆಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿರುವುದು ಕುಟುಂಬಸ್ಥರ ಅಮಾನವೀಯ ಕೃತ್ಯಕ್ಕೆ ಸಾಕ್ಷಿಯಾಗಿದೆ.

ದ ನ್ಯೂಸ್ ಮಿನಿಟ್ ವರದಿಯ ಪ್ರಕಾರ, ಮುದ್ದೆಬಿಹಾಳ ತಾಲೂಕಿನ ಗುಂಡಕನಲ ಹಳ್ಳಿಯ ನಿವಾಸಿಗಳಾದ 21 ವರ್ಷದ ಯುವತಿ ಬಾನು ಬೇಗಂ ಹಾಗೂ 24 ವರ್ಷದ ಯುವಕ ಸಯಾಬಣ್ಣ ಶರಣಪ್ಪ ಕೊನ್ನೂರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಮನೆಯವರು ತಮ್ಮ ಪ್ರೀತಿಯನ್ನು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಈ ಇಬ್ಬರು ಪ್ರೀತಿಯ ವಿಷಯವನ್ನು ಗುಟ್ಟಾಗಿಟ್ಟಿದ್ದರು. ಜನವರಿ 22 ರಂದು ಇವರ ಪ್ರೀತಿಯ ವಿಷಯ ತಿಳಿದ ಬಾನು ಕುಟುಂಬಸ್ಥರು ಶರಣಪ್ಪನ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದರು. ಜತೆಗೆ ಪೊಲೀಸ್ ಠಾಣೆಗೆ ಹೋಗಿ, ತಮ್ಮ ಮಗಳು ಇನ್ನು ಅಪ್ರಾಪ್ತ ವಯಸ್ಕಳಾಗಿದ್ದು ಶರಣಪ್ಪನ ವಿರುದ್ಧ ಪೊಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ರಂಪಾಟ ಮಾಡಿದರು. ಈ ಹಂತದಲ್ಲಿ ಪೊಲೀಸರು ಶರಣಪ್ಪನವರ ವಿರುದ್ಧ ಲಿಖಿತ ದೂರು ದಾಖಲಿಸಿಕೊಂಡಿದ್ದರು. ತಮ್ಮ ಪ್ರೀತಿಗೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾದ ಪರಿಣಾಮ ಈ ಇಬ್ಬರು ಜನವರಿ 24ರಂದು ಮನೆ ಬಿಟ್ಟು ಗೋವಾಗೆ ಓಡಿಹೋಗಿದ್ದರು. ನಂತರ ಫೆಬ್ರವರಿಯಲ್ಲಿ ಮದುವೆಯಾಗಿ ಅಲ್ಲಿಯೇ ನೆಲೆಸಲು ಆರಂಭಿಸಿದರು.

ಕಳೆದ ಮೂರು ತಿಂಗಳು ಗೋವಾದಲ್ಲಿ ನೆಲೆಸಿದ ನಂತರ ಬಾನು ಗರ್ಭಿಣಿಯಾದಳು. ಈ ವಿಷಯ ಕೇಳಿದರೆ ಇಬ್ಬರೂ ಮನೆ ಕಡೆಯವರು ನಮ್ಮ ಪ್ರೀತಿಯನ್ನು ಒಪ್ಪಬಹುದು ಎಂದು ಭಾವಿಸಿ ಶನಿವಾರ ಬೆಳಗ್ಗೆಯಷ್ಟೇ ತಮ್ಮ ಗ್ರಾಮಕ್ಕೆ ಮರಳಿದರು. ನಂತರ ಬಾನು ಗರ್ಭಿಣಿಯಾಗಿರುವ ಸುದ್ದಿಯನ್ನು ತಮ್ಮ ಮನೆಯವರಿಗೆ ತಿಳಿಸಿದರು.

ಆದರೆ ಇವರ ಲೆಕ್ಕಾಚಾರ ತಪ್ಪಾಗಿತ್ತು. ಈ ಸುದ್ದಿ ಕೇಳಿ ಕೋಪಗೊಂಡ ಕುಟುಂಬಸ್ಥರು ಈ ಇಬ್ಬರನ್ನು ಹಿಡಿದು ಹೊಡೆಯಲು ಆರಂಭಿಸಿದರು. ಶರಣಪ್ಪನವರ ಮೇಲೆ ಬಾನು ಮನೆ ಕಡೆಯವರು ದಾಳಿ ಮಾಡಿದರು. ಈ ಹಂತದಲ್ಲಿ ಬಾನು ತಾಯಿ ಸಹ ಶರಣಪ್ಪನಿಗೆ ಕಲ್ಲಿನಲ್ಲಿ ಹೊಡೆಯಲು ಆರಂಭಿಸಿದರು. ಈ ಹಂತದಲ್ಲಿ ಅವರಿಂದ ತಪ್ಪಿಸಿಕೊಂಡು ಓಡಿಹೋದ ಶರಣಪ್ಪ, ತಾಳಿಕೋಟೆ ಪೊಲೀಸ್ ಠಾಣೆಗೆ ಓಡಿ ಹೋದರು. ಆ ಮೂಲಕ ಇವರ ಕೈಯಿಂದ ಪಾರಾದರು. ಆದರೆ, ಪಾರಾಗಲು ಸಾಧ್ಯವಾಗದ ಬಾನು ಜೀವಂತವಾಗಿರುವಾಗಲೇ ತನ್ನ ಮನೆಯವರು ಇಟ್ಟ ಬೆಂಕಿಗೆ ಬಲಿಯಾದಳು. ಪೊಲೀಸ್ ಠಾಣೆಯಲ್ಲಿ ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ವಿವರಿಸಿ ರಕ್ಷಣೆ ಬೇಡಿದ ಶರಣಪ್ಪ ಮತ್ತೆ ಊರಿಗೆ ಮರಳುವಷ್ಟರಲ್ಲಿ ಬಾನುವಿಗೆ ಆಕೆಯ ಕುಟುಂಬಸ್ಥರು ಬೆಂಕಿ ಹಚ್ಚಿಬಿಟ್ಟಿದ್ದರು. ಈ ಹಂತದಲ್ಲಿ ಬೆಂಕಿಗೆ ಆಹುತಿಯಾಗಿ ನರಳಾಡುತ್ತಿದ್ದ ತನ್ನ ಪತ್ನಿಯನ್ನು ಕಂಡ ಶರಣಪ್ಪ, ಆಕೆಯನ್ನು ರಕ್ಷಿಸಿ ಎಂದು ಸ್ಥಳೀಯರ ಬಳಿ ಅಂಗಲಾಚಿ ಬೇಡಿಕೊಂಡ. ಆದರೆ ಯಾರೊಬ್ಬರು ಆಕೆಯನ್ನು ರಕ್ಷಿಸಲು ಧಾವಿಸಲೇ ಇಲ್ಲ.

ಭಾನುವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾನುವಿನ ತಾಯಿ, ಒಬ್ಬ ಸಹೋದರ ಮತ್ತು ಸಹೋದರಿ ಹಾಗೂ ಮಾವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ ಪಿ.ಕೆ ಪಾಟೀಲ್, ‘ಬಂಧಿತರ ವಿರುದ್ಧ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಬಾನುವಿಗೆ ಬೆಂಕಿ ಹಚ್ಚುವ ಮುನ್ನ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿರುವ ಬಾನುವಿನ ಮತ್ತಿಬ್ಬರು ಸಹೋದರರು ಹಾಗೂ ಸಹೋದರಿಯರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

Leave a Reply