ಇಸ್ರೋದ ಪಕ್ಕಾ ಸ್ವದೇಶಿ ಪರಾಕ್ರಮ! ಅತಿ ತೂಕದ ರಾಕೆಟ್ ಜಿಎಸ್ಎಲ್ವಿ-ಎಂಕೆ 3 ಯಶಸ್ವಿ ಉಡಾವಣೆ

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಸೋಮವಾರ ಮತ್ತೊಂದು ಇತಿಹಾಸ ಬರೆದಿದೆ. ಅದೇನೆಂದರೆ, ಅತಿ ಹೆಚ್ಚಿನ ತೂಕದ ಶಕ್ತಿಶಾಲಿ ರಾಕೆಟ್ ಎಂದೆ ಪರಿಗಣಿಸಲಾಗಿರುವ ಜಿಎಸ್ಎಲ್ವಿ-ಮಾರ್ಕ್ 3ಯನ್ನು ಯಶಸ್ವಿಯಾಗಿ ಉಡಾಯಿಸಿದೆ.

ಈ ರಾಕೆಟ್ 4 ಟನ್ ತೂಕದ ಸಂವಹನ ಉಪಗ್ರಹವನ್ನು ಹೊತ್ತು ಸಾಗಿದ್ದು, ಈ ಹಿಂದೆ ತಲುಪಿದ್ದಕ್ಕಿಂತ ಎತ್ತರದ ಕಕ್ಷೆಯಲ್ಲಿ ಉಪಗ್ರಹವನ್ನು ಸೇರಿಸಲಿದೆ. ಈ ರಾಕೆಟ್ ಗೆ ‘ಫ್ಯಾಟ್ ಬಾಯ್’ ಅಂತಲೇ ಹೆಸರಿಡಲಾಗಿದ್ದು, ಇದು 10 ಟನ್ ವರೆಗೂ ಹೊತ್ತು ಸಾಗಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಪೂರ್ಣ ಪ್ರಮಾಣದ ಸ್ವದೇಶಿ ನಿರ್ಮಿತ ರಾಕೆಟ್ ಇದಾಗಿದ್ದು, ಈ ಯಶಸ್ಸಿನೊಂದಿಗೆ ಇಸ್ರೋ ತನ್ನ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ. ಕ್ರಯೊಜೆನಿಕ್ ಎಂಜಿನ್ ಅಭಿವೃದ್ಧಿಗೆ ರಷ್ಯಾದ ಸಹಾಯ ಅವಲಂಬಿಸುವ, ಅದಕ್ಕೆ ಅಮೆರಿಕದ ಪ್ರತಿರೋಧ ಎದುರಿಸಿದ ದಿನಗಳ ಕಹಿ ನೆನಪನ್ನೆಲ್ಲ ಇವತ್ತಿಗೆ ಜಿಗಿದುಬಿಟ್ಟಿದೆ ಭಾರತ!

ಭವಿಷ್ಯದ ದೃಷ್ಟಿಯಿಂದ ಇದು ಭಾರಿ ‘ತೂಕದ’ ಹೆಜ್ಜೆ. ಏಕೆಂದರೆ ಈ ಸ್ವದೇಶಿ ರಾಕೆಟ್ ಬಾಹ್ಯಾಕಾಶಕ್ಕೆ ಮಾನವನ ಪ್ರಯಾಣವನ್ನೂ ಸಂಪನ್ನಗೊಳಿಸುವ ಸಾಮರ್ಥ್ಯ ಹೊಂದಿದೆ.

ದಶಕಗಳ ಹಿಂದೆಯೇ ಈ ರಾಕೆಟ್ ಅನ್ನು ಉಡಾವಣೆ ಮಾಡಲು ನಿರ್ಧರಿಸಲಾಗಿತ್ತಾದರೂ ಈಗ ಸಮಯ ಕೂಡಿಬಂದಿದೆ. ಈ ರಾಕೆಟ್ ಉಡಾವಣೆ ತಡವಾದರೂ ಇನ್ನು ಮುಂದೆ ಇಸ್ರೋ ಭಾರಿ ತೂಕದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ವಿದೇಶಿ ರಾಕೆಟ್ ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ. ಈವರೆಗೂ ಇಸ್ರೋ 4-6 ಟನ್ ತೂಕದ ಉಪಗ್ರಹ ಉಡಾವಣೆಗೆ ದ ಫ್ರೆಂಚ್ ಸ್ಪೇಸ್ ಏಜೆನ್ಸಿಯ ಏರಿಯನ್ ಸ್ಪೇಸ್ ಎಂಬ ರಾಕೆಟ್ ಅನ್ನು ಅವಲಂಬಿಸಿತ್ತು.

ಮುಂದಿನ ದಿನಗಳಲ್ಲಿ ಈ ರಾಕೆಟ್ ಮೂಲಕ ವಿದೇಶದ 2-4 ಟನ್ ತೂಕದ ಉಪಗ್ರಹಗಳನ್ನು ಉಡಾವಣೆ ಮಾಡುವ ಅವಕಾಶ ಸಿಕ್ಕರೆ, ಸಹಜವಾಗಿಯೇ ಇಸ್ರೋಗೆ ಆರ್ಥಿಕವಾಗಿ ಲಾಭವೂ ಸಿಗಲಿದೆ. ಈಗ ಉಡಾವಣೆ ಮಾಡಲಾಗಿರುವ ಜಿಎಸ್ಎಲ್ವಿ-ಎಂಕೆ 3 ರಾಕೆಟ್ ನಲ್ಲಿ 3,169 ಕೆ.ಜಿ ತೂಕದ ಜಿಸ್ಯಾಟ್-19 ಉಪಗ್ರಹವನ್ನು ಹೊತ್ತು ಸಾಗಿದೆ.

ಜಿಸ್ಯಾಟ್-19 ಉಪಗ್ರಹ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ತೊಡಗಿದರೆ, ಇದು ಈಗಾಗಲೇ ಹಳೆಯದಾಗಿರುವ 6-7 ಸಂವಹನ ಉಪಗ್ರಹಗಳ ಕಾರ್ಯವನ್ನು ಏಕಾಂಗಿಯಾಗಿ ಮಾಡಲಿದೆ.

Leave a Reply