ಮನಮೋಹನ್ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್, ಇನ್ನು ಹತ್ತಿರ-ಹತ್ತಿರ…ಬಿಜೆಪಿಗೆ

ಡಿಜಿಟಲ್ ಕನ್ನಡ ಟೀಮ್:

ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ತಮ್ಮ ಮುಂದಿನ ಚಿತ್ರದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಅವರು ಬರೆದಿರುವ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂಬ ಪುಸ್ತಕದ ಆಧಾರದ ಮೇಲೆ ಹೊಸ ಚಿತ್ರ ನಿರ್ಮಾಣವಾಗಲಿದ್ದು, ಆ ಚಿತ್ರದಲ್ಲಿ ಮನಮೋಹನ್ ಸಿಂಗ್ ಅವರ ಪಾತ್ರದಲ್ಲಿ ಅನುಪಮ್ ಖೇರ್ ಕಾಣಿಸಿಕೊಳ್ಳಲಿದ್ದಾರೆ.

ಮನಮೋಹನ್ ಸಿಂಗ್ ಅವರು ಮೊದಲ ಅವಧಿಯಲ್ಲಿ ಪ್ರಧಾನಿಯಾಗಿದ್ದನ್ನು ವಿಮರ್ಶಾತ್ಮಕವಾಗಿ ಈ ಪುಸ್ತಕದಲ್ಲಿ ಬರೆಯಲಾಗಿದೆ. ಕಾಕತಾಳಿಯ ಎಂಬಂತೆ ಈ ಪುಸ್ತಕ 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಈಗ ಈ ಪುಸ್ತಕ ಆಧಾರಿತ ಚಿತ್ರ 2018ರ ಡಿಸೆಂಬರ್ ನಲ್ಲಿ ತೆರೆ ಮೇಲೆ ಬರುವ ನಿರೀಕ್ಷೆ ಇದ್ದು, ಇದು 2019ರ ಲೋಕಸಭೆ ಚುನಾವಣೆಗೂ ಮುನ್ನ ಬಿಡುಗಡೆಯಾಗುವ ಗುರಿ ಹೊಂದಿದೆ.

ಅನುಪಮ್ ಖೇರ್ ಅವರ ಪತ್ನಿ ಕಿರಣ್ ಅವರು ಬಿಜೆಪಿ ಸಂಸದರು. ಅನುಪಮ್ ಖೇರ್ ಬಿಜೆಪಿ ಮತ್ತು ಮೋದಿ ಪರ ಮಾತನಾಡುವುದಕ್ಕೆ ಮುಜುಗರ ಇಟ್ಟುಕೊಂಡವರಲ್ಲ. ಬಿಜೆಪಿ ಅವಧಿಯ ಪ್ರಮುಖ ಸಿನಿಮಾ ಬುದ್ಧಿಜೀವಿ ಸ್ಥಾನವನ್ನು ಖೇರ್ ಗಟ್ಟಿಗೊಳಿಸಿಕೊಳ್ಳುವ ಎಲ್ಲ ಸೂಚನೆಗಳು ಈ ಮೂಲಕ ಕಾಣುತ್ತಿವೆ.

ಈ ಚಿತ್ರದ ಫಸ್ಟ್ ಲುಕ್ ಅನ್ನು ಬುಧವಾರ ಬಿಡುಗಡೆ ಮಾಡಲಾಗುವುದು. ಈ ಸಿನಿಮಾದ ಚಿತ್ರಕಥೆಯನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಹನ್ಸಾಲ್ ಮೆಹ್ತಾ ಬರೆದಿದ್ದು, ವಿಜಯ್ ರತ್ನಾಕರ್ ಗುಟ್ಟೆ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

‘ಈ ಚಿತ್ರದಲ್ಲಿ ಮನಮೋಹನ್ ಸಿಂಗ್ ಅವರ ಪಾತ್ರವನ್ನು ಅನುಪಮ್ ಖೇರ್ ನಿರ್ವಹಿಸುವುದು ಅಂತಿಮವಾಗಿದೆ. ಉಳಿದಂತೆ ಇತ್ರದ ಇತರೆ ಪಾತ್ರಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಮುಂದಿನ ವರ್ಷಾಂತ್ಯದಲ್ಲಿ ಈ ಚಿತ್ರ ತೆರೆ ಮೇಲೆ ಬರಲಿದೆ’ ಎಂದಿದ್ದಾರೆ ಚಿತ್ರದ ನಿರ್ಮಾಪಕ ಸುನಿಲ್ ಬೊಹ್ರಾ.

ಮನಮೋಹನ್ ಸಿಂಗ್ ಅವರ ಪಾತ್ರ ನಿರ್ವಹಿಸುತ್ತಿರುವುದನ್ನು ಅಧಿಕೃತವಾಗಿ ಪ್ರಕಟಿಸಿದ ಅನುಪಮ್ ಖೇರ್, ಈ ಕುರಿತಾಗಿ ಹೇಳಿದಿಷ್ಟು…

‘ಸಮಕಾಲಿನ ಇತಿಹಾಸದ ವ್ಯಕ್ತಿಯ ಪಾತ್ರವನ್ನು ಸಿನಿಮಾದಲ್ಲಿ ನಿರ್ವಹಿಸುವುದು ದೊಡ್ಡ ಸವಾಲಿನ ಕೆಲಸ. ಚಿತ್ರದಲ್ಲಿ ನಮ್ಮ ಅಭಿನಯವನ್ನು ಸಹಜವಾಗಿಯೇ ಹೇಲಿಕೆ ಮಾಡುತ್ತಾರೆ. ಮೊದಲ ಸಿನಿಮಾದಿಂದಲೂ ನಾನು ಇಂತಹ ಸವಾಲುಗಳನ್ನು ಎದುರಿಸುತ್ತಲೇ ಬಂದಿದ್ದು, ಈಗ ಮನಮೋಹನ್ ಸಿಂಗ್ ಅವರ ಪಾತ್ರವನ್ನು ನಿರ್ವಹಿಸಲು ಎದುರುನೋಡುತ್ತಿದ್ದೇನೆ.’

Leave a Reply