ರೈತರ ಕಾವೇರಿ ಪ್ರತಿಭಟನೆ: ಪ್ರಕರಣ ಹಿಂಪಡೆಯುತ್ತೀವಿ ಅಂದ್ರು ಪರಮೇಶ್ವರ್; ಕಲಾಪದ ಪ್ರಮುಖಾಂಶಗಳು

ಡಿಜಿಟಲ್ ಕನ್ನಡ ಟೀಮ್:

ಕಾವೇರಿ ನದಿ ನೀರಿನ ವಿಚಾರದಲ್ಲಿ ಹೋರಾಟ ನಡೆಸಿದ ರೈತರ ವಿರುದ್ಧ ಹೂಡಿರುವ ಪ್ರಕರಣಗಳನ್ನು ಹಿಂತೆಗೆಯುವ ಬಗ್ಗೆ ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ ಗೃಹ ಸಚಿವ ಪರಮೇಶ್ವರ್.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಚಲುವರಾಯಸ್ವಾಮಿ ಅವರ ಪ್ರಸ್ತಾವಕ್ಕೆ ಸಚಿವರು ಉತ್ತರಿಸಿದ್ದು ಹೀಗೆ…

‘ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರಿಂ ಕೋರ್ಟಿ ತೀರ್ಪಿನ ವಿರುದ್ದ ರೈತರು ಹಾಗೂ ಸಾರ್ವಜನಿಕರು ನಡೆಸಿದ ಸತ್ಯಾಗ್ರಹ, ರಸ್ತೆ ತಡೆ, ಮೊದಲಾದ ಹೋರಾಟದಲ್ಲಿ 61 ಪ್ರಕರಣಗಳು ಮಂಡ್ಯ ಜಿಲ್ಲೆಯಲ್ಲೇ ದಾಖಲಾಗಿರುತ್ತವೆ. ಇವುಗಳಲ್ಲಿ ಏಳು ಪ್ರಕರಣಗಳಿಗೆ ಸಿ ಅಂತಿಮ ವರದಿ ನೀಡಲಾಗಿದೆ. ಉಳಿದ 54 ಪ್ರಕರಣಗಳಲ್ಲಿ 1026 ಜನರ ವಿರುದ್ಧ ಮೊಕದ್ದಮೆಗಳು ದಾಖಲಾಗಿವೆ. ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 61 ಪ್ರಕರಣಗಳಲ್ಲಿ 27 ಪ್ರಕರಣಗಳಿಗೆ ಸಂಬಂಧಿಸಿದಂತೆ 255 ಜನರನ್ನು ಬಂಧಿಸಲಾಗಿತ್ತು. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸದರಿ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ಬಗ್ಗೆ ಸರ್ಕಾರದ ಪರಿಶೀಲನೆಯಲ್ಲಿದ್ದು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯಿಂದ ಅಭಿಪ್ರಾಯ ಸ್ವೀಕರಿಸಿದ ನಂತರ ನಿಯಮಾನುಸಾರ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು.’

ಸುನಿಲ್ ಕುಮಾರ್ ಅವರ ಪ್ರತ್ಯೇಕ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ‘ಕಳೆದ ಮೂರು ನಾಲ್ಕು ವರ್ಷಗಳಲ್ಲಿ 21,053 ಮಹಿಳೆಯರು ನಾಪತ್ತೆ ಪ್ರಕರಣ ದಾಖಲಾಗಿದ್ದು, ಇದರಲ್ಲಿ 1302 ಪ್ರಕರಣಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. 2014ರಲ್ಲಿ 5989, 2015ರಲ್ಲಿ 5975, 2016ರಲ್ಲಿ 6316, ಪ್ರಸಕ್ತ ವರ್ಷ ಮೇ ಅಂತ್ಯದವರೆಗೆ 2773 ಮಹಿಳೆಯರು ನಾಪತ್ತೆಯಾಗಿರುವ ಪ್ರಕರಣಗಳು ದಾಖಲಾಗಿವೆ. ನಾಪತ್ತೆಯಾದವರ ಪತ್ತೆಗಾಗಿ ಎಲ್ಲಾ ರೀತಿಯ ಕ್ರಮ ಜರುಗಿಸಲಾಗಿದೆ.’

ಉಳಿದಂತೆ ಅಧಿವೇಶನದಲ್ಲಿ ಚರ್ಚೆಯಾದ ವಿಷಯಗಳು ಹೀಗಿವೆ…

  • ರಾಜ್ಯದಲ್ಲಿ ಸತತ ಬರಗಾಲದಿಂದ ಜಲಮೂಲ ಬತ್ತಿ ಹೋಗಿದ್ದು, ತೆಂಗು ಕೃಷಿ ಸಂಪೂರ್ಣ ವಿನಾಶದತ್ತ ತಲುಪಿದೆ. ಹೀಗಾಗಿ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ, ರೈತರ ಕೈ ಹಿಡಿಯುವಂತೆ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಆಗ್ರಹಿಸಿದರು.
  • ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಮೆಟ್ರೋ ರೈಲು ಸೌಲಭ್ಯ ವಿಸ್ತರಿಸುವ ಮಾರ್ಗ ಅಂತಿಮಗೊಳಿಸಿದ್ದು, ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ವಿಧಾನಸಭೆಯಲ್ಲಿ ತಿಳಿಸಿದರು.
  • ರಾಜ್ಯಾದ್ಯಂತ ಶಾಲೆ, ಅಗ್ನಿಶಾಮಕದಳ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಿಗೆ ಅಗತ್ಯದ ಭೂಮಿ ಒದಗಿಸಲು ವಿಳಂಬ ಮಾಡಬಾರದು. ಅಗತ್ಯ ಬಿದ್ದರೆ ಕಾಯ್ದೆಗೆ ತಿದ್ದುಪಡಿ ತರಬೇಕು. ರಾಜ್ಯದಲ್ಲಿ ಹೊಸತಾಗಿ 64 ಅಗ್ನಿ ಶಾಮಕ ಠಾಣೆಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಮಧ್ಯೆ ಹದಿನೈದು ಹೊಸ ತಾಲ್ಲೂಕುಗಳಾಗಿವೆ. ಈ ತಾಲ್ಲೂಕುಗಳಲ್ಲಿ ಅಗ್ನಿ ಶಾಮಕ ದಳಗಳು ಇಲ್ಲದಿದ್ದರೆ ಏನರ್ಥ? ಎಂದು ಅಪ್ಪಾಜಿ ನಾಡಗೌಡ ವಿಧಾನಸಭೆಯಲ್ಲಿ ಪ್ರಶ್ನಿಸಿದರು.

Leave a Reply