ಕಾರ್ಪೋರೇಟ್ ಮಾದರಿಯಲ್ಲಿ ವೇತನ ಕೊಟ್ಟರೂ ಸರ್ಕಾರಿ ಆಸ್ಪತ್ರೆಗೆ ವೈದ್ಯರು ಬರುತ್ತಿಲ್ಲ: ಅಸಹಾಯಕತೆ ವ್ಯಕ್ತಪಡಿಸಿದ್ರು ಸಚಿವ ರಮೇಶ್ ಕುಮಾರ್

ಡಿಜಿಟಲ್ ಕನ್ನಡ ಟೀಮ್:

‘ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಕಲ್ಪಿಸಿಕೊಡಲು ಸರ್ಕಾರ ಸಾಕಷ್ಟು ಪ್ರಯತ್ನಪಡುತ್ತಿದೆ. ಕಾರ್ಪೋರೇಟ್ ವಲಯದಲ್ಲಿ ನೀಡುವಂತೆ ಉತ್ತಮ ವೇತನ ನೀಡುತ್ತಿದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ವೈದ್ಯರು ಮುಂದೆ ಬರುತ್ತಿಲ್ಲ…’ ಇದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ವಿಧಾನಸಭೆಯಲ್ಲಿ ವ್ಯಕ್ತಪಡಿಸಿದ ಅಸಹಾಯಕತೆ.

ಶೂನ್ಯವೇಳೆಯಲ್ಲಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಿ.ಟಿ. ರವಿ ಸೇರಿದಂತೆ ಹಲವು ಸದಸ್ಯರು ಸರ್ಕಾರಿ ಆಸ್ಪತ್ರೆಯ ಸ್ಥಿತಿಗತಿಗಳನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಉತ್ತರಿಸಿದ ಸಚಿವರು, ‘ಕಾರ್ಪೋರೇಟ್ ವಲಯದಲ್ಲಿ ನೀಡುವಷ್ಟೇ ವೇತನ ನೀಡಲು ಸರ್ಕಾರ ಮುಂದಾಗಿದೆ. ಆದರೂ ತಜ್ಞ ವೈದ್ಯರು ನಮ್ಮ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಮುಂದೆ ಬರುತ್ತಿಲ್ಲ. ರಾಜ್ಯದಲ್ಲಿ 53 ವೈದ್ಯಕೀಯ ಕಾಲೇಜುಗಳಿವೆ. ನಮ್ಮಲ್ಲಿ ಸದ್ಯಕ್ಕೆ 980 ವೈದ್ಯರ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಲು ಪದವಿ ಪಡೆದ ವೈದ್ಯರು ಮುಂದೆ ಬರುತ್ತಿಲ್ಲ. ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರನ್ನು ಭರ್ತಿ ಮಾಡುವ ಉದ್ದೇಶದಿಂದ ಕಾರ್ಪೋರೇಟ್ ವಲಯದಲ್ಲಿ ನೀಡುವಷ್ಟೇ ಅಂದರೆ ಮಾಸಿಕ ₹1.25 ಲಕ್ಷ ರೂ. ವೇತನ ನೀಡುತ್ತಿದ್ದರೂ ಇಲ್ಲಿ ಸೇವೆ ಸಲ್ಲಿಸಲು ಯಾರೂ ಮುಂದೆ ಬರುತ್ತಿಲ್ಲ. ಇವರು ಶಿಕ್ಷಣ ಪಡೆಯುವಾಗ ಎಲ್ಲಾ ರೀತಿಯ ಸರ್ಕಾರಿ ಸವಲತ್ತು ಪಡೆಯುತ್ತಾರೆ, ಆದರೆ ಬಡವರು ಮತ್ತು ಗ್ರಾಮೀಣ ಜನತೆಯ ಸೇವೆ ಸಲ್ಲಿಸಲು ಮುಂದೆ ಬನ್ನಿ ಎಂದರೆ ಕಾಣದಂತೆ ಹೋಗುತ್ತಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ನಮ್ಮ ಆಸ್ಪತ್ರೆಗಳಲ್ಲಿ ಕಲ್ಪಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ 146 ತಾಲ್ಲೂಕು ಆಸ್ಪತ್ರೆಗಳಲ್ಲಿ ಡೈಯಾಲಿಸಿಸ್ ಕೇಂದ್ರ, ಜಿಲ್ಲಾಸ್ಪತ್ರೆಗಳಲ್ಲಿ ಸಿ.ಟಿ, ಎಂ.ಆರ್.ಐ ಸ್ಕ್ಯಾನರ್ ಕೇಂದ್ರಗಳನ್ನು ತೆರೆಯಲಾಗಿದೆ. ಸದ್ಯ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿದೆ ಎಂದು ಹೇಳುವ ಧೈರ್ಯ ನನಗಿಲ್ಲ. ಆದರೆ ಕೆಲ ಪ್ರಗತಿದಾಯಕ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ.’

Leave a Reply