ಗಲ್ಫ್ ದೇಶಗಳ ದಿಗ್ಬಂಧನದಿಂದ ಕತಾರ್ ಬಡವಾದರೆ ಭಾರತಕ್ಕೆ ನಷ್ಟವಾಗುವುದೇ?

ಡಿಜಿಟಲ್ ಕನ್ನಡ ಟೀಮ್:

ಅನಿರೀಕ್ಷಿತ ರಾಜತಾಂತ್ರಿಕ ಬೆಳವಣಿಗೆಯಲ್ಲಿ ಸೌದಿ ಅರೆಬಿಯಾ ನೇತೃತ್ವದ ರಾಷ್ಟಗಳ ಬಣವು ಕತಾರ್ ಅನ್ನು ಗಲ್ಫ್ ದೇಶಗಳ ಗುಂಪಿನಿಂದ ದೂರವಿಡಲು ನಿರ್ಧರಿಸಿದೆ. ಕತಾರ್ ನಿಂದ ತಮ್ಮ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿರುವ ಇತರೆ ಗಲ್ಫ್ ರಾಷ್ಟ್ರಗಳು, ಕತಾರ್ ಜತೆಗಿನ ವಿಮಾನ ಸಂಪರ್ಕವನ್ನು ನಿಲ್ಲಿಸಿದೆ. ಆ ಮೂಲಕ ಕತಾರ್ ಜತೆಗಿನ ಎಲ್ಲಾ ವ್ಯವಹಾರಗಳಿಂದ ದೂರ ಉಳಿಯಲು ನಿರ್ಧರಿಸಿವೆ.

ಕತಾರ್ ಹಾಗೂ ಇತರೆ ಗಲ್ಫ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಮಸ್ಯೆ ಉದ್ಭವಿಸಿರುವ ಸಂದರ್ಭದಲ್ಲಿ ಅದು ಭಾರತದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಕತಾರ್ ಅರ್ಥವ್ಯವಸ್ಥೆ ಏನಾದರೂ ಈ ವಿದ್ಯಮಾನದಿಂದ ಕುಸಿತ ಕಂಡರೆ ದೀರ್ಘಾವಧಿಯಲ್ಲಿ ಭಾರತಕ್ಕೆ ಕೆಲವು ಆತಂಕಗಳಿರುವುದು ಸುಳ್ಳಲ್ಲ.

ಭಾರತ ಹಾಗೂ ಕತಾರ್ ನಡುವೆ ಹೇಳಿಕೊಳ್ಳುವಂತಹ ದೊಡ್ಡ ಪ್ರಮಾಣದ ಆರ್ಥಿಕ ಒಪ್ಪಂದಗಳೇನು ಆಗಿಲ್ಲ. 2013-14ನೇ ಸಾಲಿನಲ್ಲಿ 16.68 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟಿದ್ದ ಉಭಯ ದೇಶಗಳ ವ್ಯಾಪಾರ ಒಪ್ಪಂದ 2015-16ನೇ ಹಣಕಾಸು ವರ್ಷದಲ್ಲಿ 9.93 ಬಿಲಿಯನ್ ಅಮೆರಿಕನ್ ಡಾಲರ್ ಗೆ ಕುಸಿದಿತ್ತು. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕುಸಿತ ಇದಕ್ಕೆ ಪ್ರಮುಖ ಕಾರಣ. ಇಂತಹ ಪರಿಸ್ಥಿತಿಯಲ್ಲೂ ಕತಾರ್ ಹಾಗೂ ಇತರೆ ಗಲ್ಫ್ ರಾಷ್ಟ್ರಗಳ ನಡುವಣ ತಿಕ್ಕಾಟದಿಂದ ಭಾರತಕ್ಕೆ ದೊಡ್ಡ ಪ್ರಮಾಣದಲ್ಲೇ ನಷ್ಟವಾಗಲಿದೆ. ಅದು ಹೇಗೆ ಎಂಬುದನ್ನು ನೋಡೋಣ ಬನ್ನಿ…

  • ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಹೆಚ್ಚಳವಾದ ನಂತರ ಕತಾರ್ ಮುಂದಿನ ಐದು ವರ್ಷಗಳಲ್ಲಿ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಗೆ ಉತ್ಸುಕವಾಗಿತ್ತು. ಮೂಲ ಸೌಕರ್ಯಾಭಿವೃದ್ಧಿ, ನಿರ್ಮಾಣ ಕಾಮಗಾರಿ ಮುಂತಾದ ವಿಷಯಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಭಾರತಕ್ಕೆ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಬೇಕಾಗಿದೆ. ಗಲ್ಫ್ ನ ಶ್ರೀಮಂತ ರಾಷ್ಟ್ರ ಕತಾರ್, ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ರಿಯಲ್ ಎಸ್ಟೇಟ್, ರಸ್ತೆ ಮತ್ತು ಹೆದ್ದಾರಿ, ವಿಮಾನಯಾನ ಹಾಗೂ ವಿಮಾನ ನಿಲ್ದಾಣ, ಬಂದರು, ರಸಗೊಬ್ಬರ, ತೈಲ ವ್ಯಾಪಾರ, ಪ್ರವಾಸೋದ್ಯಮ ಹೀಗೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಂಡವಾಳ ಹೂಡುವ ನಿರೀಕ್ಷೆಯಲ್ಲಿದೆ. ಆದರೆ ಈಗ ಕತಾರ್ ಎದುರಿಸುತ್ತಿರುವ ರಾಜತಾಂತ್ರಿಕ ಸಮಸ್ಯೆ ಈ ಹೂಡಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಎದುರಾಗಿದೆ.
  • ಇದರ ಜತೆಗೆ ಭಾರತದ ಅನೇಕ ಐಟಿ ಕಂಪನಿಗಳು ಹಾಗೂ ಬ್ಯಾಂಕುಗಳು ಕತಾರ್ ನಲ್ಲಿ ವ್ಯಾಪಾರ ನಡೆಸುತ್ತಿವೆ. ಆ ಪೈಕಿ ಎಲ್ ಅಂಡ್ ಟಿ, ಪುಂಜ್ ಲೊಯ್ಡ್, ಶಪೂರ್ ಜಿ ಪಲ್ಲೊನ್ ಜಿ, ವೊಲ್ಟಾಸ್, ಸಿಂಪ್ಲೆಕ್ಸ್, ಟಿಸಿಎಸ್, ವಿಪ್ರೊ, ಮಹೀಂದ್ರಾ ಟೆಕ್, ಎಚ್ಸಿಎಲ್, ಎಸ್ಬಿಐ ಮತ್ತು ಐಸಿಐಸಿಐ. ರಾಜತಾಂತ್ರಿಕ ಸಮಸ್ಯೆಯಿಂದ ಕತಾರ್ ತತ್ತರಿಸಿದರೆ, ಈ ಕಂಪನಿಗಳಿಗೂ ದೊಡ್ಡ ಪೆಟ್ಟು ಬೀಳಲಿದೆ.
  • 2022ರ ಪ್ರತಿಷ್ಠಿತ ಫಿಫಾ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸಿರುವುದು ಕತಾರ್. ಈ ಟೂರ್ನಿಗಾಗಿ ವಿಶ್ವದರ್ಜೆಯ ಕ್ರೀಡಾಂಗಣದಿಂದ ಹಿಡಿದು ಇತರೆ ಮೂಲಭೂತ ಸೌಕರ್ಯಗಳ ತಯಾರಿಯಲ್ಲಿ ತೊಡಗಿರುವ ಕಾರ್ಮಿಕರಲ್ಲಿ ಭಾರತೀಯ ಮೂಲದವರೇ ಹೆಚ್ಚಾಗಿದ್ದಾರೆ. ಒಂದು ವೇಳೆ ಕತಾರ್ ಈ ಸಮಸ್ಯೆಯಿಂದ ವಿಶ್ವಕಪ್ ಆಯೋಜನೆಗೆ ತೊಂದರೆ ಎದುರಾದರೆ, ಉದ್ಯೋಗ ಹುಡುಕಿಕೊಂಡು ಕತಾರ್ ಗೆ ತೆರಳಿರುವವರು ಸಂಕಷ್ಟಕ್ಕೆ ಸಿಲುಕುವುದು ಖಚಿತ. ಆಗ ಈ ನೌಕರರು ಅಲ್ಲಿ ಉದ್ಯೋಗವಿಲ್ಲದೆ ಬರಿಗೈಯಲ್ಲಿ ಭಾರತಕ್ಕೆ ಮರಳುವ ಆತಂಕ ಕೂಡ ಹೆಚ್ಚಿದೆ. ಕತಾರ್ ನಲ್ಲಿ ಇರುವ ಭಾರತೀಯರ ಸಂಖ್ಯೆ ಬರೋಬ್ಬರಿ 6,50,000.

Leave a Reply