ಸ್ವಬಾಂಧವ ಕತಾರ್ ವಿರುದ್ಧ ಮುಸ್ಲಿಂ ರಾಷ್ಟ್ರಗಳೇಕೆ ಕತ್ತಿ ಮಸೆದಿವೆ? ಯಾವುದೀ ಜಾಗತಿಕ ಆಟ?

ಚೈತನ್ಯ ಹೆಗಡೆ

ಅರಬ್ ರಾಷ್ಟ್ರಗಳೆಲ್ಲ ಕತಾರ್ ಅನ್ನು ಬಹಿಷ್ಕರಿಸಿರುವುದು ನಿನ್ನೆಯ ಸುದ್ದಿ. ಇವತ್ತಿಗೆ ಜಗತ್ತು ಅದರ ಕಂಪನಗಳೇನು ಎಂಬುದನ್ನು ಲೆಕ್ಕ ಹಾಕುತ್ತಿದೆ. ಏಕೆಂದರೆ ಇದು ಅಂತಿಂಥ ಬಹಿಷ್ಕಾರವಲ್ಲ. ಸೌದಿ ಅರೇಬಿಯಾ, ಯುಎಇ, ಈಜಿಪ್ತ್ ಹೀಗೆ ಅರಬ್ ಒಕ್ಕೂಟದ ದೈತ್ಯ ದೇಶಗಳೆಲ್ಲ ಕತಾರ್ ನಲ್ಲಿರುವ ತಮ್ಮ ರಾಜತಾಂತ್ರಿಕರನ್ನೆಲ್ಲ ಹಿಂದಕ್ಕೆ ಕರೆಸಿಕೊಂಡು, ವಿಮಾನಗಳ ಹಾರಾಟವನ್ನೇ ನಿಲ್ಲಿಸಿವೆ.

ಕತಾರ್ ನ ಬಹಿಷ್ಕಾರಕ್ಕೆ ಸೌದಿ ಅರೇಬಿಯಾವು ನೀಡಿರುವ ಕಾರಣವನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಏಕೆಂದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ಹಾಡಿದಂತಿದೆ. ‘ಕತಾರ್ ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವುದರಿಂದ ಅದರೊಂದಿಗೆ ಸಂಬಂಧ ಕಡಿದುಕೊಳ್ಳುತ್ತಿದ್ದೇವೆ’ ಅಂತ ಇಸ್ಲಾಂ ತೀವ್ರವಾದಕ್ಕೆ ಧನಮೂಲವಾಗಿರುವ ಸೌದಿ ಹೇಳಿದರೆ ನಗದೇ ಇನ್ನೇನು ಮಾಡೋದು. ವಾಸ್ತವ ತುಂಬ ಸ್ಪಷ್ಟ. ಅರಬ್ ದೇಶಗಳಿಗಾಗಲೀ, ಅಮೆರಿಕಕ್ಕಾಗಲೀ ಉಗ್ರವಾದದ ವಿರುದ್ಧ ಯಾವ ಗಟ್ಟಿ ನಿಲುವೂ ಇಲ್ಲ. ಎಲ್ಲರೂ ತಮ್ಮ ಲಾಭಕ್ಕೆ ಬೇಕಾದಾಗ ಉಗ್ರವಾದವನ್ನು ಬಳಸಿಕೊಂಡವರೇ. ನನ್ನ ಉಗ್ರ ಒಳ್ಳೆಯವ, ನಿನ್ನವ ಕೆಟ್ಟವ ಎಂಬ ಕ್ಷುಲ್ಲಕ ಜಗಳ ಇವರೆಲ್ಲರದ್ದು.

ನಿಜ. ಈ ಹಿಂದೆ ಕತಾರ್ ಈಜಿಪ್ತಿನ ‘ಇಸ್ಲಾಮಿಕ್ ಬ್ರದರ್ ಹುಡ್’ ಅನ್ನು ಬೆಂಬಲಿಸಿತ್ತು. ಇದನ್ನು ವಿರೋಧಿಸಿ 2014ರಲ್ಲಿ ಸೌದಿ, ಬಹರೈನ್, ಯುಎಇ ತಮ್ಮ ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡು ಕತಾರ್ ಅನ್ನು ಹೆದರಿಸಿದ್ದವು. ಆದರೆ ಇದೇ ಸೌದಿ ಹಾಗೂ ಟರ್ಕಿ ಜತೆಗೂಡಿ ಕತಾರ್ 2015ರಲ್ಲಿ ಸಿರಿಯಾ ಕಲಹದಲ್ಲಿ ಬಂಡಾಯ ಗುಂಪುಗಳನ್ನು ಬೆಂಬಲಿಸಿದೆ. ಈ ಗುಂಪುಗಳು ಅಲ್ ಕೈದಾ, ಅಲ್ ನುಸ್ರಾ ಎಂಬೆಲ್ಲ ಇಸ್ಲಾಂ ಉಗ್ರವಾದಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವಂಥವು.

ಅರ್ಥಾತ್…

ಕತಾರ್ ಉಗ್ರವಾದವನ್ನು ಬೆಂಬಲಿಸುತ್ತಿದೆಯಾದ್ದರಿಂದ ನಮ್ಮದೀ ಕಠಿಣ ನಿಲುವು ಎಂಬ ಸೌದಿ ಮತ್ತಿತರ ರಾಷ್ಟ್ರಗಳ ಪ್ರತಿಪಾದನೆ ಬೋಗಸ್. ಹಾಗಾದರೆ ಸುನ್ನಿ ಪ್ರಮುಖ ಮುಸ್ಲಿಂ ಕುಲಬಾಂಧವನೇ ಆಗಿರುವ ಕತಾರ್ ವಿರುದ್ಧ ಅರಬ್ ದೇಶಗಳೇಕೆ ಕತ್ತಿ ಮಸೆದಿವೆ?

ಇಲ್ಲಿರುವುದು ಧರ್ಮಕಾರಣವಲ್ಲ, ಅರ್ಥ ರಾಜಕಾರಣ!

  • ಸೌದಿ ಸೇರಿದಂತೆ ಬಹುತೇಕ ಅರಬ್ ರಾಷ್ಟ್ರಗಳು ಕಚ್ಚಾತೈಲವನ್ನಷ್ಟೇ ತಮ್ಮ ಆರ್ಥಿಕತೆಗೆ ನೆಚ್ಚಿಕೊಂಡಿವೆ. ಹಾಗೆಂದೇ ತೈಲ ಬೆಲೆ ಕುಸಿದಿರುವಾಗ ಒತ್ತಡವನ್ನೂ ಅನುಭವಿಸುತ್ತಿವೆ. ಹೆಚ್ಚಿನ ಸಂದರ್ಭಗಳಲ್ಲಿ ಅಮೆರಿಕದ ದಾಳವಾಗಿ ತಮ್ಮನ್ನು ಒಡ್ಡಿಕೊಳ್ಳುವ ದೇಶಗಳು ಇವೆಲ್ಲ. ಆದರೆ ಕತಾರ್ ತನ್ನ ಹೂಡಿಕೆಗಳನ್ನು ಬೇರೆಡೆಯೂ ವಿಸ್ತರಿಸಿಕೊಂಡು ಆ ಪ್ರದೇಶದಲ್ಲೇ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಬೆಳೆದು ನಿಂತಿದೆ. ಇದು ಆ ಪ್ರದೇಶದ ನೆರೆಹೊರೆಯವರಲ್ಲಿ, ವಿಶೇಷವಾಗಿ ಸೌದಿ ಹೊಟ್ಟೆಯಲ್ಲಿ ಮತ್ಸರವನ್ನು ಬಿತ್ತಿರುವುದು ಸ್ಪಷ್ಟ.
  • ಕತಾರ್ ಆಡಳಿತ ಸೂತ್ರ ಮುಖ್ಯಸ್ಥನನ್ನು ಎಮಿರ್ ಎಂಬ ಹುದ್ದೆಯಿಂದ ಗುರುತಿಸುತ್ತಾರೆ. ಇಲ್ಲೂ ವಂಶವಾಹಿ ಆಡಳಿತವೇ ನಡೆದುಬಂದಿದೆ. ಆದರೆ 1995ರಲ್ಲಿ ಸೌದಿ ಹೇಳಿದಂತೆ ತಲೆ ಅಲ್ಲಾಡಿಸಿಕೊಂಡು ಎಮಿರ್ ಆಗಿದ್ದ ತಂದೆಯನ್ನು ಪಕ್ಕಕ್ಕಿರಿಸಿ ಆತನ ಮಗ, ಈಗಿನ ಶೇಖ್ ತಮಿಮ್ ಬಿನ್ ಹಮದ್ ಅಲ್ ತಾನಿ ಅಧಿಕಾರಕ್ಕೆ ಬಂದಾಗಲೇ ಸೌದಿಗೆ ಹೊಟ್ಟೆಯಲ್ಲೊಂದು ತಳಮಳ ಶುರುವಾಗಿತ್ತು. ಇದಾದ ನಂತರವೇ ಕತಾರ್ ಆ ಪ್ರದೇಶದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದ್ದು.
  • ಈ ಬೆಳವಣಿಗೆಯಲ್ಲೂ ಸೌದಿಗೆ ಹೊಟ್ಟೆ ಉರಿದುಕೊಳ್ಳಲು ಕಾರಣವಿದೆ. ಕತಾರಿನ ದೈತ್ಯ ಬೆಳವಣಿಗೆಗೆ ಸಹಕರಿಸಿದ್ದು ಕೇವಲ ಪೆಟ್ರೊಲಿಯಂ ಅಲ್ಲ, ಲಿಕ್ವಿಡ್ ನ್ಯಾಚುರಲ್ ಗ್ಯಾಸ್ (ಎಲ್ಎನ್ಜಿ). ಇವತ್ತಿಗೆ ಕತಾರ್ ಜಗತ್ತಿನ ಅತಿದೊಡ್ಡ ಎಲ್ಎನ್ಜಿ ಪೂರೈಕೆದಾರ. ಇದರ ಬಹುಭಾಗ ನಿಕ್ಷೇಪವಿರುವುದು ನಾರ್ತ್ ಫೀಲ್ಡ್ ನಲ್ಲಿ. ಈ ನಾರ್ತ್ ಫೀಲ್ಡ್ ಅನ್ನು ಇರಾನ್ ಜತೆ ಹಂಚಿಕೊಂಡಿದೆ ಕತಾರ್. ಶಿಯಾಗಳ ಕೈಯಲ್ಲಿ ಆಡಳಿತವಿರುವ ಇರಾನ್ ಅಂತಂದ್ರೆ ಸೌದಿಗೆ ಆಗಿಬರುವುದಿಲ್ಲ. ಲಾಗಾಯ್ತಿನಿಂದ ಅಮೆರಿಕವೂ ಇರಾನನ್ನು ನುಂಗುವುದಕ್ಕೆ ಹವಣಿಸಿಕೊಂಡಿದೆ.
  • ಗಲ್ಫ್ ರಾಷ್ಟ್ರಗಳೆಲ್ಲ ತೈಲದ ಹಿಂದೆಯೇ ಬಿದ್ದಿದ್ದಾಗ ಗ್ಯಾಸ್ ಮಾರ್ಗ ಹಿಡಿದು ತನ್ನದೇ ಐಡೆಂಟಿಟಿ ಕಟ್ಟಿಕೊಂಡುಬಿಟ್ಟಿತು ಕತಾರ್. ಹೀಗಾಗಿ ‘ಗಲ್ಫ್ ಕೊಆಪರೇಷನ್ ಸಮಿತಿ’ಯಲ್ಲಿ ಸಹ ಕತಾರ್ ಗಟ್ಟಿಧ್ವನಿ ಕಂಡುಕೊಂಡಿತು. ಹಣಬಲ ಮತ್ತು ಪ್ರಭಾವಗಳಲ್ಲಿ ಸೌದಿಯನ್ನು ಯಾವತ್ತೋ ಮೀರಿಸಿತು. ಅಲ್ ಜಜೀರಾ ಎಂಬ ಬಿಬಿಸಿ ಮಾದರಿಯ ಜಾಗತಿಕ ಮಾಧ್ಯಮವೊಂದು ಈ ಪುಟ್ಟ ಕತಾರಿನ ಉದಯಿಸಿ ಪ್ರವರ್ಧಮಾನಕ್ಕೆ ಬರುತ್ತಿದೆ ಎಂಬುದನ್ನು ಮರೆಯುವಂತಿಲ್ಲ. ಜಾಗತಿಕ ದರ್ಜೆಯ ಏರ್ಲೈನ್ಸ್ ಸಹ ಕತಾರ್ ಬಳಿ ಇದೆ.
  • ಇಷ್ಟಾಗಿಯೂ ಸೌದಿ ಮನಸ್ಸಿನಲ್ಲೇ ಕತ್ತಿ ಮಸೆದುಕೊಂಡಿರುತ್ತಿತ್ತೇನೋ. ಆದರೆ ಡೊನಾಲ್ಡ್ ಟ್ರಂಪ್ ಆಗಮನವಾಗುತ್ತಲೇ ಅಮೆರಿಕದ ತಿದಿ ಸಿಗುತ್ತಲೇ ಸೌದಿ ಪ್ರಜ್ವಲಿಸಿದೆ. ತೀರ ಇತ್ತೀಚೆಗೆ ಟ್ರಂಪ್ ಸೌದಿಗೆ ಭೇಟಿ ಕೊಟ್ಟು ಬಂದಮೇಲೆಯೇ ಸಮೀಕರಣ ಬದಲಾಗಿದ್ದು. ಬಲಪಂಥೀಯ ಭಾವನೆಗಳನ್ನು ಕೆದಕಿ ಅಧಿಕಾರಕ್ಕೆ ಬಂದ ಡೊನಾಲ್ಡ್ ಟ್ರಂಪ್ ಗೆ ನೀತಿ ನಿರೂಪಣೆಯಲ್ಲಿ ಸ್ಪಷ್ಟತೆ ಇಲ್ಲ. ಇದಕ್ಕೆ ಸರಿಯಾಗಿ ಟ್ರಂಪ್ ಅಳಿಯ ಜರೆದ್ ಕುಶ್ನರ್ ಪ್ರಭಾವ ಹೊಸ ಸಮೀಕರಣವನ್ನು ರೂಪಿಸಿತು. ಇದೀಗ ಸರ್ಕಾರದ ಸಲಹೆಗಾರನಾಗಿರುವ ಜರೆದ್ ಮೂಲತಃ ರಿಯಲ್ ಎಸ್ಟೇಟ್ ಮತ್ತು ಮಾಧ್ಯಮ ಹಿತಾಸಕ್ತಿಗಳನ್ನು ಇರಿಸಿಕೊಂಡಿರುವ ದೊಡ್ಡ ಉದ್ಯಮಿ. ಒಳಗೊಳಗೇ ಅದೆಂಥ ಆಫರ್ ಕುದುರಿತೋ ಗೊತ್ತಿಲ್ಲ ಇವತ್ತಿಗೆ ಸೌದಿಯ ಮೊಹಮದ್ ಬಿನ್ ಸಲ್ಮಾನ್ ಹಾಗೂ ಅಮೆರಿಕದಲ್ಲಿರುವ ಯುಎಇ ರಾಯಭಾರಿ ಯುಸುಫ್ ಅಲ್ ಒತೈಬಾ ಜತೆ  ಜರೆದ್ ಗೆಳೆತನ ಗಾಢಾತಿಗಾಢ!
  • ಇರಾನ್ ಜತೆಗಿನ ಕತಾರ್ ಸ್ನೇಹದ ಜತೆಯಲ್ಲೇ ಅದು ಇತ್ತೀಚೆಗೆ ರಷ್ಯಾದ ರೊಸ್ನೆಫ್ಟ್ ಸರ್ಕಾರಿ ತೈಲ ಕಂಪನಿಯಲ್ಲಿ $ 2.7 ಬಿಲಿಯನ್ ಹೂಡುವುದಕ್ಕೆ ಒಪ್ಪಿಕೊಂಡಿದೆ. ಅಮೆರಿಕ-ಸೌದಿಗಳಿಗೆ ಜೀ ಹುಜೂರ್ ಎಂದುಕೊಂಡಿರುವುದನ್ನು ಬಿಟ್ಟು ಕತಾರ್ ಹೀಗೆಲ್ಲ ಸ್ವತಂತ್ರ ನಡೆ ಇಡುವುದನ್ನು ಜಾಗತಿಕ ರಾಜಕಾರಣ ಹೇಗೆ ಸಹಿಸಿಕೊಂಡೀತು ಹೇಳಿ?
  • ಕತಾರಿನ ಜತೆ ಜಗಳ ಶುರುಮಾಡುವುದಕ್ಕೆ ಕಾರಣವೊಂದು ಬೇಕಲ್ಲ. ಅಮೆರಿಕವು ಸದ್ದಾಂ ಹುಸೇನನನ್ನು ಹೊಡೆಯುವಾಗ ಆತನಲ್ಲಿ ಸಮೂಹ ನಾಶದ ಶಸ್ತ್ರಗಳಿವೆ ಅಂತ ಕತೆ ಕಟ್ಟಿದ್ದನ್ನು ನೆನಪಿಸಿಕೊಳ್ಳಿ. ಈ ಬಾರಿಯೂ ಕತಾರ್ ವಿರುದ್ಧ ಅಷ್ಟು ದೊಡ್ಡಮಟ್ಟದಲ್ಲಲ್ಲದಿದ್ದರೂ ಸೀಮಿತ ವ್ಯಾಪ್ತಿಯ ಪ್ರಚಾರವೊಂದು ಸೃಷ್ಟಿಸಲ್ಪಟ್ಟಿತು. ಮೇ 23ರಂದು ಕತಾರ್ ನ್ಯೂಸ್ ಏಜೆನ್ಸಿಯಲ್ಲಿ ಪ್ರಕಟವಾದ ವರದಿಯೊಂದು ಅಲ್ಲಿನ ಎಮಿರ್ ಟ್ರಂಪ್ ವಿರುದ್ಧ ಹಾಗೂ ಇರಾನ್ ಪರ ಮಾತನಾಡಿದ್ದಾಗಿ ಸಾರಿತು. ಆಗಲೇ ಹುಯಿಲೆಬ್ಬಿದ್ದು. ಆದರೆ ಮೇ 24ರಂದು ಕತಾರ್ ಅಧಿಕಾರಿಗಳು, ನ್ಯೂಸ್ ಏಜೆನ್ಸಿ ಹ್ಯಾಕ್ ಆಗಿ ಅಂಥ ಸುದ್ದಿ ನುಸುಳಿದೆ ಹೊರತು ರಾಜ ಹಾಗೆ ಹೇಳಿಯೇ ಇಲ್ಲ ಎಂದರು. ಮಿಲಿಟರಿ ಪದವೀಧರರ ಕಾರ್ಯಕ್ರಮದಲ್ಲಿ ಹಾಜರಿದ್ದ ಯಾರನ್ನು ಪ್ರಶ್ನಿಸಿದರೂ ಎಮಿರ್ ಭಾಷಣದಲ್ಲಿ ಅಂಥ ಮಾತುಗಳೇ ಬರಲಿಲ್ಲ ಎಂದರು. ಹಾಗಾದರೆ ಹ್ಯಾಕ್ ಆಗಿದ್ದು ಹೌದೇ, ಮಾಡಿದ್ದು ಯಾರು ಎಂಬ ಪ್ರಶ್ನೆಗಳಿಗೆ ತೀರ ತಲೆಕೆಡಿಸಿಕೊಳ್ಳಬೇಕಿಲ್ಲ ಎನಿಸುತ್ತದೆ.

ಇದೆಲ್ಲ ಸರಿ. ಮುಂದೇನು? ಅಮೆರಿಕವನ್ನು ತೆರೆಮರೆಯಲ್ಲಿಟ್ಟುಕೊಂಡು ಸೌದಿ ಮತ್ತಿತರ ಗಲ್ಫ್ ರಾಷ್ಟ್ರಗಳು ಕತಾರ್ ಅನ್ನು ಹೇಗೆ ಮಣಿಸಲಿವೆ? ಜಗತ್ತಿನ್ನೂ ಉತ್ತರಕ್ಕೆ ಸರ್ಕಸ್ ನಡೆಸುತ್ತಿದೆಯಾದರೂ ಕೆಲವು ಎಳೆಗಳು ಗೋಚರಿಸಿವೆ. ದೀರ್ಘಾವಧಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಕತಾರಿನ ಪ್ರಭಾವವನ್ನು ಕಡಿಮೆ ಮಾಡುವುದಕ್ಕೇ ಈ ಎಲ್ಲ ಪ್ರಯತ್ನಗಳು ಎಂಬುದು ನಿಸ್ಸಂಶಯ. ಆದರೆ ಸಧ್ಯಕ್ಕೆ ಗಲ್ಫ್ ರಾಷ್ಟ್ರಗಳು ತಮಗೆ ಕಡಿಮೆ ಬೆಲೆಯಲ್ಲಿ ಎಲ್ಎನ್ಜಿ ಪೂರೈಸುವಂತೆ ಕತಾರ್ ಮೇಲೆ ಒತ್ತಡ ಹಾಕಿಯಾವು. ಏಕೆಂದರೆ ಗಲ್ಫ್ ರಾಷ್ಟ್ರಗಳು ವಿದ್ಯುತ್ ಉತ್ಪಾದನೆಗೆ ಗ್ಯಾಸ್ ಮೇಲೆ ಅವಲಂಬನೆ ಹೆಚ್ಚಿಸಿಕೊಂಡಿವೆ. ಕತಾರ್ ಏನಿದ್ದರೂ ಏಷ್ಯ ಮತ್ತು ಯುರೋಪಿನ ರಾಷ್ಟ್ರಗಳೊಂದಿಗೆ ಒಪ್ಪಂದಕ್ಕೆ ಆಸಕ್ತವೇ ಹೊರತು ನೆರೆಹೊರೆಯವರಿಗೆ ಗಣನೀಯ ಪ್ರಮಾಣದಲ್ಲಿ ಎಲ್ಎನ್ಜಿ ಪೂರೈಸುತ್ತಿಲ್ಲ. ಇಷ್ಟು ತಡವಾಗಿ ಗ್ಯಾಸ್ ಮಾರ್ಗ ಅಭಿವೃದ್ಧಿಗೆ ಉಳಿದ ಗಲ್ಫ್ ರಾಷ್ಟ್ರಗಳ ಪಾಲಿಗೆ ಸಾಧುವಲ್ಲ.

ಇಂಥವೆಲ್ಲ ಲೆಕ್ಕಾಚಾರಗಳನ್ನಿಟ್ಟುಕೊಂಡು ಕತಾರ್ ಅನ್ನು ಬಲಿ ಹಾಕುವುದಕ್ಕೆ ವೇದಿಕೆ ಸಿದ್ಧವಾಗಿದೆ.

Leave a Reply