ಟೀಂ ಇಂಡಿಯಾ ಕೋಚ್ ಆಗಲು ಹಾಕಿದ ಅರ್ಜಿಯಲ್ಲಿ ಸೆಹ್ವಾಗ್ ಬರೆದಿದ್ದು ಕೇವಲ ಎರಡೇ ಸಾಲು! ಈ ವಿಷಯದಲ್ಲೂ ಬಿಸಿಸಿಐ ಕಾಲೆಳೆದ್ರಾ ವೀರೂ?

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ಎಲ್ಲರಿಗಿಂತ ವಿಭಿನ್ನ ಎಂಬುದು ಮತ್ತೆ ಸಾಬೀತಾಗಿದೆ. ಆಟಗಾರನಾಗಿ ಎಂತಹುದೇ ಪರಿಸ್ಥಿತಿಯಲ್ಲಿದ್ದರೂ ತಮ್ಮ ಸ್ಫೋಟಕ ಹೊಡೆತಗಳಿಂದ ವಿಭಿನ್ನ ಎನಿಸಿದ್ದ ವೀರೂ, ನಂತರ ಟ್ವೀಟರ್ ನಲ್ಲಿ ಎಲ್ಲರ ಕಾಲೆಳೆಯುತ್ತಾ ಸದ್ದು ಮಾಡುತ್ತಿದ್ದರು. ಈಗ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಹಾಕುವ ವಿಚಾರದಲ್ಲೂ ಸೆಹ್ವಾಗ್ ತಮ್ಮ ಸ್ಟೈಲ್ ಮುಂದುವರಿಸಿದ್ದಾರೆ.

ಸದ್ಯ ಕುಂಬ್ಳೆ ಅವರ ಟೀಂ ಇಂಡಿಯಾ ಕೋಚ್ ಸ್ಥಾನವನ್ನು ತುಂಬಲು ಬಿಸಿಸಿಐ ತಲೆ ಕೆಡಿಸಿಕೊಂಡು ಹುಡುಕಾಟ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಟೀಂ ಇಂಡಿಯಾ ಕೋಚ್ ಆಕಾಂಕ್ಷಿಯಾಗಿರುವ ವಿರೇಂದ್ರ ಸೆಹ್ವಾಗ್ ಅರ್ಜಿ ಸಲ್ಲಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಅರ್ಜಿಯಲ್ಲಿ ಸೆಹ್ವಾಗ್ ಬರೆದಿರುವುದು ಕೇವಲ ಎರಡೇ ಎರಡು ಸಾಲು ಮಾತ್ರ. ಅದು ಏನಂದ್ರೆ… ‘ನಾನು ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಹಾಗೂ ಮಾರ್ಗದರ್ಶಕನಾಗಿದ್ದೇನೆ. ಜತೆಗೆ ಸದ್ಯ ಟೀಂ ಇಂಡಿಯಾದಲ್ಲಿರುವ ಎಲ್ಲಾ ಆಟಗಾರರ ಜತೆಗೆ ಆಡಿರುವ ಅನುಭವವಿದೆ.’ ಈ ಎರಡು ಸಾಲನ್ನು ಬರೆದು ಸೆಹ್ವಾಗ್ ಬಿಸಿಸಿಐಗೆ ಅರ್ಜಿ ಕಳುಹಿಸಿದ್ದಾರೆ. ಈ ಎರಡು ಸಾಲು ಹೊರತು ಪಡಿಸಿ ಸೆಹ್ವಾಗ್ ಯಾವುದೇ ಸ್ವವಿವರ ಪತ್ರವನ್ನಾಗಲಿ ಅಥವಾ ಇತರೆ ದಾಖಲೆಗಳನ್ನಾಗಲಿ ಕಳುಹಿಸಿಲ್ಲ.

ಸೆಹ್ವಾಗ್ ಕೇವಲ ಎರಡು ಸಾಲಿನ ಅರ್ಜಿ ನೋಡಿರುವ ಬಿಸಿಸಿಐ ಬಾಸ್ ಗಳು ಸೆಹ್ವಾಗ್ ಅರ್ಜಿ ನೋಡಿ ತಲೆ ಕೆಡಿಸಿಕೊಂಡಿದ್ದಾರೆ. ಈ ಬಗ್ಗೆ ಬಿಸಿಸಿಐನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ‘ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಅರ್ಜಿ ಹಾಕಿದ್ದು, ಕೇವಲ ಎರಡೇ ಎರಡು ಸಾಲು ಬರೆದಿದ್ದಾರೆ. ವಿವರವಾದ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಮತ್ತೆ ಅವರನ್ನು ವಿವರವಾದ ಮಾಹಿತಿ ಕೊಡಿ ಎಂದು ಕೇಳಬೇಕಾದ ಅನಿವಾರ್ಯತೆ ಎದುರಾಗಿದೆ. ಸೆಹ್ವಾಗ್ ಮೊದಲ ಬಾರಿಗೆ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಮತ್ತೆ ತಮ್ಮ ಸ್ವವಿವರ ದಾಖಲೆಯನ್ನು ಕಳುಹಿಸುವಂತೆ ಸೂಚಿಸಲಾಗಿದೆ’ ಎಂದಿದ್ದಾರೆ.

ಎಲ್ಲ ಅರ್ಜಿದಾರರು ಪುಟಗಟ್ಟಲೆ ಸ್ವವಿವರ, ಟೀಂ ಇಂಡಿಯಾ ಕೋಚ್ ಆಗಲು ತಮಗಿರುವ ಬಯಕೆ ಹಾಗೂ ಬದ್ಧತೆ, ತಾವು ಕೋಚ್ ಆದರೆ ಹೇಗೆ ಕಾರ್ಯನಿರ್ವಹಿಸುತ್ತೇವೆ ಎಂಬ ಭವಿಷ್ಯದ ಯೋಜನೆಗಳ ವಿವರಣೆಗಳನ್ನೆಲ್ಲಾ ಸೇರಿಸಿ ದೊಡ್ಡ ಅರ್ಜಿ ಸಲ್ಲಿಸುತ್ತಾರೆ. ಹೀಗಿರುವಾಗ ಸೆಹ್ವಾಗ್ ಕೇವಲ ಎರಡೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ, ಈ ವಿಷಯದಲ್ಲೂ ಸೆಹ್ವಾಗ್ ಪರೋಕ್ಷವಾಗಿ ಬಿಸಿಸಿಐ ಕಾಲೆಳೆದಿದ್ದಾರೆ.

Leave a Reply