ಸ್ಟಾರ್ಟ್ ಅಪ್ ಗಳಿಗೆ ಹಣ ಸುರಿಸುವ ಏಂಜಲ್ ಮತ್ತು ವೆಂಚರ್ ಕ್ಯಾಪಿಟಲಿಸ್ಟ್ ಬಗ್ಗೆ ನಿಮಗೆಷ್ಟು ಗೊತ್ತು?

ನವೋದ್ದಿಮೆ ಅಥವಾ ಸ್ಟಾರ್ಟ್ ಅಪ್ ಅನ್ನುವುದು ಇಂದಿಗೆ ಒಂದು ಫ್ಯಾಷನ್ ಆಗಿದೆ ಅಂದರೆ ಅದನ್ನು ಪೂರ್ಣ ಅಲ್ಲಗೆಳೆಯಲು ಬರುವುದಿಲ್ಲ. ಈ ಪದ ಉಪಯೋಗಿಸಲು ಶುರು ಮಾಡುವುದಕ್ಕೆ ಮೊದಲು ಯಾರೂ ಹೊಸದಾಗಿ ಉದ್ದಿಮೆ ಶುರು ಮಾಡಿರಲಿಲ್ಲವೇ? ಎಲ್ಲವೂ ಇಂದಿನಂತೆಯೇ ಇತ್ತು. ವ್ಯತ್ಯಾಸವೆಂದರೆ ಈ ಮಟ್ಟದಲ್ಲಿ ಹೊಸ ಉದ್ದಿಮೆ ಶುರುವಾಗುತ್ತಿರಲಿಲ್ಲ. ನಮ್ಮ ಹಿಂದಿನ ತಲೆಮಾರು ಸಿಕ್ಕ ಕೆಲಸದಲ್ಲಿ ನಿವೃತ್ತಿ ಆಗುವವರೆಗೆ ದುಡಿಯುವುದರಲ್ಲಿ ಸುಖ ಕಾಣುತಿತ್ತು. ಅಂದಿನ ದಿನಗಳಲ್ಲಿ ಅವಕಾಶಗಳು ಕೂಡ ಕಡಿಮೆ. ಆದರೆ ಇಂದಿನ ವಿಷಯ ಹಾಗಲ್ಲ. ಇಂದು ಅವಕಾಶಗಳು ಕೂಡ ಬಹಳ ಹೆಚ್ಚಾಗಿದೆ. ಜೊತೆ ಜೊತೆಗೆ ಯುವ ಜನತೆಯಲ್ಲಿ ಹೊಸತನ್ನ ಪ್ರಾರಂಭಿಸಲು, ಪ್ರಯತ್ನಿಸಲು ಧೈರ್ಯ ಹೆಚ್ಚಾಗಿದೆ. ಒಂದು ಒಳ್ಳೆಯ ಐಡಿಯಾ ಇದ್ದರೆ ಸಾಕು ನಿಮ್ಮ ಕನಸಿಗೆ ನಾವು ಹಣ ಹೂಡಲು ಸಿದ್ದ ಎನ್ನುವ ವ್ಯಕ್ತಿಗಳು, ಸಂಸ್ಥೆಗಳು ಇಂದು ಹುಟ್ಟಿಕೊಂಡಿವೆ. ಇಷ್ಟೆಲ್ಲಾ ಇದ್ದೂ ಏಂಜಲ್ ಇನ್ವೆಸ್ಟರ್ ಮತ್ತು ವೆಂಚರ್ ಕ್ಯಾಪಿಟಲ್ ಇವುಗಳನ್ನು ಒಂದೇ ಎನ್ನುವಂತೆ ಜಾಳುಜಾಳಾಗಿ ಇಂದಿಗೂ ನಾವು ಬಳಸುತ್ತೇವೆ. ಇಂದಿನ ಹಣಕ್ಲಾಸಿನಲ್ಲಿ ಇವುಗಳ ವ್ಯಾಖ್ಯೆ ಇವುಗಳ ನಡುವಿನ ಅಂತರ ಜೊತೆಗೆ ಕ್ರೌಡ್ ಫಂಡಿಂಗ್ (crowd funding) ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳೋಣ.

ಏಂಜಲ್ ಇನ್ವೆಸ್ಟರ್ ಯಾರು?

ಏಂಜಲ್ ಇನ್ವೆಸ್ಟರ್ ಎನ್ನುವನು ಒಬ್ಬ ವ್ಯಕ್ತಿ. ಸಮಾಜದಲ್ಲಿ ಹೆಸರುವಾಸಿಯಾದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಯಶಸ್ಸು ಪಡೆದ ಸಿರಿವಂತ. ತನ್ನ ಕ್ಷೇತ್ರದಲ್ಲಿ ಅಥವಾ ತನಗೆ ಇಷ್ಟವಾದ ಕ್ಷೇತ್ರದಲ್ಲಿ ತನ್ನದಲ್ಲದ ಹೊಸ ಚಿಂತನೆಯನ್ನು ಮೆಚ್ಚಿ ಆ ಚಿಂತನೆಯನ್ನು ಸಾಕಾರಗೊಳಿಸಲು ಹಣವನ್ನು ಹೂಡಿಕೆ ಮಾಡುವಾತ ಏಂಜಲ್ ಇನ್ವೆಸ್ಟರ್.

ವೆಂಚರ್ ಕ್ಯಾಪಿಟಲ್ ಎಂದರೇನು?

ವೆಂಚರ್ ಕ್ಯಾಪಿಟಲ್ ಎನ್ನುವುದು ಸಮಾಜದ ಹಲವು ಗಣ್ಯ ವ್ಯಕ್ತಿಗಳ ಗುಂಪು ಅಥವಾ ಒಂದು ಸಂಸ್ಥೆ. ನಿಗದಿತ ಉದ್ದೇಶದಿಂದ ಹಣವನ್ನು ಒಂದು ಕಡೆ ಸೇರಿಸಿ ಅದಕ್ಕೆ ಒಂದು ಸಂಸ್ಥೆಯ ರೂಪ ಕೊಟ್ಟು, ಶೇಖರಿಸಿದ ಹಣವನ್ನು ಉತ್ತಮ ಭವಿಷ್ಯ ಇರುವ ಪ್ರಾಜೆಕ್ಟ್ ಅಥವಾ ಕಂಪನಿಗಳಲ್ಲಿ ಹೂಡಿಕೆ ಮಾಡುವರನ್ನು ವೆಂಚರ್ ಕ್ಯಾಪಿಟಲಿಸ್ಟ್ ಎನ್ನುತ್ತಾರೆ.

ಕ್ರೌಡ್ funding ಎಂದರೇನು?

ಇದು ಕೂಡ ಒಂದು ಹೊಸ ಐಡಿಯಾ ಅಥವಾ ಒಂದು ಹೊಸ ಪ್ರಯತ್ನಕ್ಕೆ ಬೇಕಾಗುವ ಹಣವನ್ನು ಪಡೆಯುವ ವಿಧಾನ. ನಮ್ಮ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಹಣ ನೀಡಲು ಹಿಂದೇಟು ಹಾಕಿದಾಗ ನಾವು ಜನ ಸಾಮಾನ್ಯರಿಂದ ಹಣವನ್ನು ಕೇಳಿ ಪಡೆಯುವ ವಿಧಾನಕ್ಕೆ ಕ್ರೌಡ್ funding ಎನ್ನುತ್ತೇವೆ. ಇಲ್ಲಿ ಹಣ ಹೂಡುವ ಜನ ಸಾಮಾನ್ಯನ ಸಂಖ್ಯೆ ನೂರಿರಬಹುದು, ಸಾವಿರ ಇರಬಹುದು ಅಥವಾ ಲಕ್ಷವೂ ಇರಬಹುದು. ಹಾಗೆಯೇ ಹೂಡಿಕೆಯ ಹಣವೂ ಕೂಡ ನೂರು ರೂಪಾಯಿಯಿಂದ ಲಕ್ಷವೂ ಇರಬಹುದು. ಇದೊಂದು ಹೊಸ ವಿಧಾನ ಹೀಗಾಗಿ ಹೂಡಿಕೆದಾರರ ಹೂಡಿಕೆಯನ್ನು ರಕ್ಷಿಸುವ ಕಾನೂನು ಬರಬೇಕಿದೆ. ಹಲವು ಬಾರಿ ಹೀಗೆ ಮಾಡಿದ ಹೂಡಿಕೆ ಮರಳಿ ಬರದೇ ಹೋಗುತ್ತದೆ ಆದರೆ ಜನರು ತಾವು  ಇಷ್ಟ ಪಟ್ಟ ಅಥವಾ ನಂಬಿದ ಸಿದ್ದಾಂತಕ್ಕೆ ನೀಡಿದ ಹಣದ ಮೊತ್ತವೂ ಹೆಚ್ಚಿಲ್ಲದಿರುವುದರಿಂದ ಅದನ್ನು ಕಾಣಿಕೆ ಎಂದು ಪರಿಗಣಿಸುತ್ತಾರೆ. ಮರಳಿ ನೀಡಲೇಬೇಕಾದ ಡೆಟ್ ಕ್ರೌಡ್ ಫಂಡ್ ಮೇಲಿನ ರೀತಿ ನೀತಿಗಳ ನಿಯಮಗಳ ಅನಾವರಣ ಇನ್ನಷ್ಟೇ ಆಗಬೇಕಿದೆ. ಈಕ್ವಿಟಿ ಮೂಲದ ಕ್ರೌಡ್ funding ಅನ್ನು ಕಾನೂನು ಬಾಹಿರ ಎಂದು ಸೆಬಿ ಹೇಳಿದೆ. ರಿವಾರ್ಡ್ ಮೂಲದ ಮತ್ತು ಡೊನೇಷನ್ ಮೂಲದ ಕ್ರೌಡ್ funding ಭಾರತದಲ್ಲಿ ಮಾಡಬಹುದು.

ಏಂಜಲ್ ಇನ್ವೆಸ್ಟರ್ ಮತ್ತು ವೆಂಚರ್ ಕ್ಯಾಪಿಟಲ್ ನಡುವಿನ ವ್ಯತ್ಯಾಸವೇನು?

  • ಏಂಜಲ್ ಇನ್ವೆಸ್ಟರ್ ಓರ್ವ ವ್ಯಕ್ತಿ . ವೆಂಚರ್ ಕ್ಯಾಪಿಟಲ್ ಒಂದು ಸಂಸ್ಥೆ.
  • ಏಂಜಲ್ ಇನ್ವೆಸ್ಟರ್ ಒಂದು ಹೊಸ ಉದ್ದಿಮೆಯ ಪ್ರಾರಂಭದಲ್ಲಿ ಹಣ ಹೂಡಲು ತಯಾರಿರುತ್ತಾನೆ. ಅಂದರೆ ಕೇವಲ ಒಂದು ಹೊಸ ಯೋಜನೆ/ಐಡಿಯಾ ಸಾಕು ಆತ ಹಣ ಹೂಡಲು ಸಿದ್ಧ. ವೆಂಚರ್ ಕ್ಯಾಪಿಟಲ್ ಹಾಗಲ್ಲ. ಅವರದೇನಿದ್ದರೂ ಸ್ವಲ್ಪ ಲೇಟ್ ಎಂಟ್ರಿ. ಹೌದು, ಉದ್ದಿಮೆ ಸ್ವಲ್ಪ ಮಟ್ಟದ ಸ್ಥಿರತೆ ಕಂಡು ಬೃಹದಾಕಾರಾವಾಗಿ ಬೆಳೆಯುವ ಸೂಚನೆ ಸಿಕ್ಕರೆ ಸಾಕು ಅಲ್ಲಿ ಹೂಡಿಕೆಗೆ ನಾವು ರೆಡಿ ಅಂತ ಬರುವರೇ ವೆಂಚರ್ ಕ್ಯಾಪಿಟಲಿಸ್ಟ್.
  • ಏಂಜಲ್ ಇನ್ವೆಸ್ಟರ್ ಒಬ್ಬ ವ್ಯಕ್ತಿಯಾದ ಕಾರಣ ಆತ ಮಾಡುವ ಹೂಡಿಕೆ ಹೆಚ್ಚಿರುವುದಿಲ್ಲ. ಐದು ಲಕ್ಷದಿಂದ ಶುರುವಾಗಿ ಒಂದು ಕೋಟಿ ರೂಪಾಯಿ ವರೆಗೆ ಇವರು ಹೂಡಿಕೆ ಮಾಡುತ್ತಾರೆ. ಹಲವು ಅಸಾಧಾರಣ ಪ್ರಕರಣದಲ್ಲಿ ಕೋಟಿಗೂ ಮೀರಿ ಹೂಡಿಕೆ ಕೂಡ ಮಾಡಬಲ್ಲರು. ಆದರೆ ಸಾಮಾನ್ಯ ಸ್ಥಿತಿಯಲ್ಲಿ ಇವರ ಮಿತಿ ಒಂದು ಕೋಟಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಹತ್ತರಿಂದ ಹನ್ನೆರಡು ಕೋಟಿ ತಲುಪುತ್ತದೆ.
  • ವೆಂಚರ್ ಕ್ಯಾಪಿಟಲಿಸ್ಟ್ ಗಳು  ಹೈ ನೆಟ್ ವರ್ತ್ ಜನರ ಒಂದು ಗುಂಪು ಅಥವಾ ಸಂಸ್ಥೆ. ಸಾಮಾನ್ಯವಾಗಿ ಇವರ ಹೂಡಿಕೆಗಳು ಕೋಟಿಗಳಲ್ಲಿ ಇರುತ್ತದೆ. ಒಂದು ಅಥವಾ ಎರಡು ಕೋಟಿಗೆ ಕಡಿಮೆ ಇವರು ಹೂಡಿಕೆ ಮಾಡಲು ಇಷ್ಟ ಪಡುವುದೇ ಇಲ್ಲ. ಸಾಮನ್ಯವಾಗಿ 200 ರಿಂದ 300 ಕೋಟಿ ರೂಪಾಯಿ ವರೆಗೆ ಹೂಡಿಕೆಮಾಡಲು ಇವರು ಸಿದ್ಧರಿರುತ್ತಾರೆ.
  • ಏಂಜಲ್ ಇನ್ವೆಸ್ಟರ್ ದೈನಂದಿನ ನವೋದ್ದಿಮೆಯ ಕಾರ್ಯದಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ನವೋದ್ದಿಮೆಯ ಸೋಲು ಗೆಲುವು ಅಲ್ಲಿನ ಹೂಡಿಕೆಯ ಭದ್ರತೆಗಾಗಿ ಆತ ಸಂಸ್ಥೆಯ ಗೈಡ್ ಆಗಿ ಮೆಂಟರ್ ಆಗಿ ಕೆಲಸ ಮಾಡುವ ಸಾಧ್ಯತೆಗಳಿವೆ. ವೆಂಚರ್ ಕ್ಯಾಪಿಟಲ್ ಎನ್ನುವುದು ಒಂದು ಸಂಸ್ಥೆ. ಒಂದು ನೆಟ್ವರ್ಕ್, ಇವರ ನಡವಳಿಕೆ ಪೂರ್ಣ ಪ್ರಮಾಣದ ವೃತ್ತಿಪರತೆಯಿಂದ ಕೂಡಿರುತ್ತದೆ. ತಾವು ಹೂಡಿಕೆ ಮಾಡಿದ ಸಂಸ್ಥೆಗೆ ಬೇಕಾದ ಸಹಾಯ ಪ್ರೊಫೆಷನಲ್ ಗಳ ಮೂಲಕ ನೀಡುತ್ತದೆ.
  • ಏಂಜಲ್ ಇನ್ವೆಸ್ಟರ್ ಹೂಡಿಕೆಯ ನಿರ್ಧಾರ ತಾನೇ ಮಾಡುತ್ತಾನೆ. ವೆಂಚರ್ ಕ್ಯಾಪಿಟಲ್ ನಲ್ಲಿ ಸಾಮಾನ್ಯವಾಗಿ ಈ ನಿರ್ಧಾರ ತೆಗೆದುಕೊಳ್ಳಲು ಪೋರ್ಟ್ಫೋಲಿಯೋ ಮ್ಯಾನೇಜರ್ ಅಥವಾ ಫಂಡ್ ಮ್ಯಾನೇಜರ್ ನನ್ನ ನೇಮಿಸಿರುತ್ತಾರೆ.

ನವೆಂಬರ್ 2015 ರಲ್ಲಿ ಭಾರತದ ಕ್ಯಾಪಿಟಲ್ ಮಾರ್ಕೆಟ್ ನಿಯಂತ್ರಿಸುವ ಸೆಬಿ (SEBI ) ಏಂಜಲ್ ಇನ್ವೆಸ್ಟರ್ ಅನ್ನು ಆಲ್ಟರ್ನೇಟಿವ್ ಇನ್ವೆಸ್ಟ್ಮೆಂಟ್ ಫಂಡ್ (AIF) ಅಡಿಯಲ್ಲಿ ಗುರುತಿಸಿದೆ. ಹೀಗಾಗಿ ಹಿಂದೆ ಕೇವಲ ವೆಂಚರ್ ಕ್ಯಾಪಿಟಲಿಸ್ಟ್ ಗಳಿಗೆ ಸಿಗುತ್ತಿದ್ದ ಟ್ಯಾಕ್ಸ್ ಬೆನಿಫಿಟ್ ಈಗ ಏಂಜಲ್ ಇನ್ವೆಸ್ಟರ್ ಗೂ ಸಿಗಲಿದೆ.

ಏಂಜಲ್ ಇನ್ವೆಸ್ಟರ್ ಇರಲಿ ಅಥವಾ ವೆಂಚರ್ ಕ್ಯಾಪಿಟಲಿಸ್ಟ್ ಆಗಿರಲಿ ಇವರನ್ನು ಹೇಗೆ ಭೇಟಿ ಮಾಡಲು ಏನಿರಬೇಕು?

ವ್ಯಕ್ತಿ ಅಥವಾ ಸಂಸ್ಥೆ ಯಾರೇ ಆಗಿರಲಿ ನಿಮ್ಮ ವ್ಯಾಪಾರದಲ್ಲಿ ಅಥವಾ ನಿಮ್ಮ ಕನಸಿಗೆ ಸುಮ್ಮನೆ ಹಣ ಏಕೆ ಹೂಡುತ್ತಾರೆ? ಅವರಿಗೆ ನಿಮ್ಮ ವ್ಯಾಪಾರ ಅಥವಾ ನಿಮ್ಮ ಕನಸು ಎಳೆ ಎಳೆಯಾಗಿ ಬಿಡಿಸಿ ಹೇಳಬೇಕು. ಅದು ಇಷ್ಟವಾದರೆ ಅವರು ಹಣ ಹೂಡುವುದು ಸುಲಭ.

ಮೊದಲಿಗೆ ಬಿಸಿನೆಸ್ ಪ್ಲಾನ್  ತಯಾರಿಸಿ. ನಿಮ್ಮ ಬಿಸಿನೆಸ್ ಬಗ್ಗೆ ಚಿಕ್ಕ ಮಗುವಿಗೆ ತಿಳಿ ಹೇಳುವ ಹಾಗೆ ಕಥೆಯ ರೂಪದಲ್ಲಿ ನಿಮ್ಮ ಬಿಸಿನೆಸ್ ಅಥವಾ ಕನಸಿನ ಬಗ್ಗೆ ಹೇಳಿ. ಮುಂಬರುವ ದಿನಗಳಲ್ಲಿ ಹೇಗೆ ಅದರಿಂದ ಆದಾಯ ಬರುತ್ತದೆ ಎನ್ನುವುದನ್ನು ತೋರಿಸಬೇಕು. ತಮ್ಮ ಹೂಡಿಕೆಯಿಂದ ಹೆಚ್ಚಿನ ಹಣ ಸಂಪಾದಿಸುವುದು ಎಲ್ಲಾ ಹೂಡಿಕೆದಾರರ ಗುರಿ.

ಎರಡನೆಯದಾಗಿ ನಿಮ್ಮ ಬಿಸಿನೆಸ್ ಪ್ಲಾನ್ ಅನ್ನು ಅಂದುಕೊಂಡಂತೆ ಕಾರ್ಯರೂಪಕ್ಕೆ ತರಲು ಬೇಕಾದ ಮಾನವ ಸಂಪನ್ಮೂಲ ನಿಮ್ಮಲಿದೆ ಎನ್ನುವುದನ್ನು ತೋರಿಸಿ. ನೆನಪಿಡಿ ಏಂಜಲ್ ಇನ್ವೆಸ್ಟರ್ ಆಗಿರಲಿ ಅಥವಾ ವೆಂಚರ್ ಕ್ಯಾಪಿಟಲಿಸ್ಟ್ ಆಗಿರಲಿ ಏಕ ವ್ಯಕ್ತಿಯ ನಂಬಿ ಹಣ ಹೂಡುವುದಿಲ್ಲ. ಮೂರು ಅಥವಾ ನಾಲ್ಕು ಜನ ಉನ್ನತ ಚಿಂತನೆಯ ಸಮಾನ ಮನಸ್ಕರ ಒಂದು ಪುಟ್ಟ ಟೀಮ್ ತಯಾರಿಸಿಕೊಳ್ಳಿ.

ನಿಮ್ಮ ಬಿಸಿನೆಸ್ ಅಥವಾ ಐಡಿಯಾ ದಲ್ಲಿ ಇರುವ ನ್ಯೂನ್ಯತೆಯನ್ನು ನೇರವಾಗಿ ಹೇಳಿ. ಸಾಧ್ಯವಾದಷ್ಟು ಹೆಚ್ಚು ಮಾಹಿತಿ ನೀಡಿ. ನಿಮ್ಮ ಕನಸಿನೊಂದಿಗೆ ಜೋಡಣೆಯಾದರೆ ಇರುವ ರಿಸ್ಕ್ ಅನ್ನು ತೆರೆದಿಡಿ. ನೆನಪಿಡಿ ಹೂಡಿಕೆದಾರ ರಿಸ್ಕ್ ಗೆ ಅಂಜುವನಲ್ಲ ಆತನಿಗೆ ಬೇಕಿರುವುದು ನಿಜವಾದ ಮಾಹಿತಿ. ಹೀಗಾಗಿ ಎಷ್ಟು ಸಾಧ್ಯವೂ ಅಷ್ಟು ಮಾಹಿತಿಯನ್ನು ಆತನಿಗೆ ನೀಡಿ.

ಇಂತ ಹೂಡಿಕೆದಾರರು ನಮ್ಮ ಸಮಾಜದಲ್ಲಿ ನಮ್ಮ ನಡುವೆಯೇ ಇದ್ದಾರೆ. ಮೊದಲಿಗೆ ನೀವು ತಯಾರಾಗಿ ಮುಂದಿನ ದಾರಿ ತಾನಾಗೆ ತೆಗೆದುಕೊಳ್ಳುತ್ತದೆ.

Leave a Reply