ಜಿಎಸ್ಟಿ ಜಾರಿ ತಂದ ತಕರಾರೇನು? ಸಿಎಂ ಸಮಾಧಾನವೇನು?

ಡಿಜಿಟಲ್ ಕನ್ನಡ ಟೀಮ್:

ಜಿಎಸ್ಟಿ (ಸರಕು ಮತ್ತು ಸೇವಾತೆರಿಗೆಗಳ ಕಾಯ್ದೆ) ಬಿಲ್ ಅನ್ನು ಬುಧವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದರು.

ಕೇಂದ್ರ ಸರ್ಕಾರ ಈಗಾಗಲೇ ಸಂಸತ್ತು ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಿರುವ ಜಿಎಸ್ಟಿ ಬಿಲ್ ಗೆ ಶೇಕಡಾ ಐವತ್ತರಷ್ಟು ರಾಜ್ಯಗಳು ಅಂಗೀಕಾರ ನೀಡಬೇಕಾದ ಅಗತ್ಯವಿದ್ದು, ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ವಿಧಾನಮಂಡಲದ ಒಪ್ಪಿಗೆ ಪಡೆಯಲು ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ.

ಮುಖ್ಯಮಂತ್ರಿಯವರು ಈ ಮಸೂದೆ ಮಂಡಿಸುತ್ತಿದ್ದಂತೆಯೇ ಜೆಡಿಎಸ್ ಉಪನಾಯಕ ವೈ.ಎಸ್.ವಿ.ದತ್ತಾ ಮಾತನಾಡಿ,ಜಿಎಸ್ಟಿ ಬಿಲ್ ಅನ್ನು ಜಾರಿಗೆ ತಂದರೆ ರಾಜ್ಯದ ಮೇಲಾಗುವ ಹಣಕಾಸಿನ ಹೊರೆ ಏನು? ಅದರ ಪರಿಣಾಮವೇನು? ಎನ್ನುವ ಬಗ್ಗೆ ಚರ್ಚೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು ಹೇಳಿದಿಷ್ಟು…

‘ಜಿಎಸ್ಟಿ ಬಿಲ್ ಬಗ್ಗೆ ಇಲ್ಲಿ ನಾವು ಚರ್ಚೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ.ಇದು ಕೇಂದ್ರ ಸರ್ಕಾರದ ಕಾಯ್ದೆ. ಅದಾಗಲೇ ಸಂಸತ್ತು ಹಾಗೂ ರಾಜ್ಯಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ನಾವು ಔಪಚಾರಿಕವಾಗಿ ಇದನ್ನು ಅಂಗೀಕರಿಸುವ ಪ್ರಕ್ರಿಯೆ ನಡೆಯಬೇಕಿದೆ.

ನಾವೇನೇ ಚರ್ಚೆ ಮಾಡಿದರೂ ಅದರಿಂದ ಪ್ರಯೋಜನವಿಲ್ಲ. ಒಂದು ವೇಳೆ ಪ್ರಯೋಜನವಿದ್ದರೆ ಬೇರೆ ಮಾತು. ಇದರ ಬಗ್ಗೆ ನಿಮ್ಮ ವಿರೋಧವೇನಿದ್ದರೂ ಅದನ್ನು ಸಂಸತ್ತಿನಲ್ಲಿ ಮಾಡಬೇಕಿತ್ತು. ಹಾಸನದಿಂದ ದೇವೇಗೌಡರು ಗೆದ್ದು ಹೋಗಿದ್ದಾರೆ. ಮಂಡ್ಯದಿಂದ ಪುಟ್ಟರಾಜು ಗೆದ್ದು ಹೋಗಿದ್ದಾರೆ. ಬಿಜೆಪಿಯಿಂದ ಹದಿನೇಳು ಮಂದಿ ಗೆದ್ದು ಹೋಗಿದ್ದಾರೆ. ಇವರೆಲ್ಲರೂ ಸಂಸತ್ತಿನಲ್ಲಿ ಮಾತನಾಡಬೇಕಿತ್ತು.

ಇವರೇನಾದರೂ ಅಲ್ಲಿ ವಿರೋಧ ವ್ಯಕ್ತಪಡಿಸಿದ್ದಾರಾ ಒಂದು ವೇಳೆ ವಿರೋಧ ವ್ಯಕ್ತಪಡಿಸಿದ್ದರೆ ದಾಖಲೆ ಕೊಡಿ. ಅಲ್ಲಿ ಏನೂ ಮಾತನಾಡದೆ ಇಲ್ಲಿ ಬಂದು ವಿರೋಧ ವ್ಯಕ್ತಪಡಿಸಿದರೆ ಏನೂ ಲಾಭವಿಲ್ಲ. ದೇಶಾದ್ಯಂತ ಏಕರೂಪದ ತೆರಿಗೆ ಇರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸದರಿ ಕಾಯ್ದೆಯಿಂದ ಶೇಕಡಾ ಹದಿನಾಲ್ಕಕ್ಕೂ ಹೆಚ್ಚು ತೆರಿಗೆ ಇರುವ ರಾಜ್ಯಗಳಿಗೆ ನಷ್ಟವಾಗುತ್ತದೆ ಎಂಬ ಮಾತಿದೆ. ಕರ್ನಾಟಕದಲ್ಲೂ ಅಂತಹ ಪರಿಸ್ಥಿತಿ ಇದೆ. ಆದರೆ ಇದರಿಂದ ಆಗುವ ನಷ್ಟವನ್ನು ಐದು ವರ್ಷಗಳ ಕಾಲ ಭರಿಸಿಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.’

Leave a Reply